ಲಕ್ನೋ : ತಮ್ಮ ಕೋವಿಡ್ ಪರೀಕ್ಷಾ ವರದಿಯನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮುಂದಿನ ಮೂರು ದಿನಗಳ ಕಾಲ ಎಲ್ಲ ಚುನಾವಣಾ ಪ್ರಚಾರ ಸಭೆಯಿಂದ ದೂರವಿರಲು ನಿರ್ಧರಿಸಿದ್ದಾರೆ.
ತಮ್ನ ಪತ್ನಿ ಡಿಂಪಲ್ ಯಾದವ್ ಹಾಗೂ ಪುತ್ರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ನೆಗಟಿವ್ ವರದಿ ಬಂದಿದೆ. ಈ ವರದಿಯನ್ನು ಟ್ಬೀಟರ್ ನಲ್ಲಿ ಹಂಚಿಕೊಂಡಿರುವ ಅವರು, ಮುಂಜಾಗ್ರತಾ ಕ್ರಮವಾಗಿ ಮುಂದಿನ ಮೂರು ದಿನಗಳ ಕಾಲ ಎಲ್ಲ ಬಗೆಯ ಸಾರ್ವಜನಿಕ ಸಭೆಗಳಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದಾರೆ.
ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೋವಿಡ್ ವ್ಯಾಕ್ಸಿನ್ ಅಭಿಯಾನದಿಂದ ತೆಗೆದರೆ ಮಾತ್ರ ಲಸಿಕೆ ತೆಗೆದುಕೊಳ್ಳುತ್ತೇನೆ ಎಂದು ಅಖಿಲೇಶ್ ನೀಡಿದ ಹೇಳಿಕೆ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ತಂದೆ ಮುಲಾಯಂ ಸಿಂಗ್ ಯಾದವ್ ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದ ಬಳಿಕ ಅಖಿಲೇಶ್ ಲಸಿಕೆ ತೆಗೆದುಕೊಂಡಿದ್ದರು.
ನಾನು ಲಸಿಕೆ ತೆಗೆದುಕೊಂಡಿದ್ದು, ಕೋವಿಡ್ ನ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಉತ್ತರ ಪ್ರದೇಶದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ನಾನು ಶುಭಾಶಯ ತಿಳಿಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ,ಶೀಘ್ರ ಚೇತರಿಸಿಕೊಳ್ಳುವಂತೆ ಹೇಳಿದ್ದಾರೆ.