Advertisement

ಯೋಗಿ ಸರ್ಕಾರದಲ್ಲಿ ಒಡಕು! ರಾಜೀನಾಮೆಯ ಬೆದರಿಕೆ ಹಾಕಿದ ಜಲಶಕ್ತಿ ಸಚಿವ

08:31 PM Jul 20, 2022 | Team Udayavani |

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರ್ಕಾರದಲ್ಲಿ ಒಡಕು ಮೂಡಿದೆ. ಒಬ್ಬೊಬ್ಬರೇ ಸಚಿವರು ಸರ್ಕಾರದ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.

Advertisement

ಉಪಮುಖ್ಯಮಂತ್ರಿ ಬೃಜೇಶ್‌ ಪಾಠಕ್‌ ಅಸಮಾಧಾನ ಮತ್ತು ಜಿತಿನ್‌ ಪ್ರಸಾದ್‌ ಅವರ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಅಮಾನತು ಪ್ರಕರಣಗಳ ಬೆನ್ನಲ್ಲೇ ಬುಧವಾರ ಸಿಎಂ ಯೋಗಿಗೆ ಹೊಸ ತಲೆನೋವು ಎದುರಾಗಿದೆ. ಜಲಶಕ್ತಿ ಸಚಿವ ದಿನೇಶ್‌ ಖಾತಿಕ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾನು ದಲಿತ ಎಂಬ ಕಾರಣಕ್ಕೆ ನನ್ನ ಇಲಾಖೆಯ ಅಧಿಕಾರಿಗಳೇ ನನಗೆ ಗೌರವ ನೀಡುತ್ತಿಲ್ಲ. ನನ್ನದೇ ಇಲಾಖೆಯಲ್ಲಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಆದರೆ, ಅದರ ಬಗ್ಗೆ ವಿವರಣೆ ಕೇಳಿದರೆ ಯಾರೂ ಕೊಡುತ್ತಿಲ್ಲ ಎಂದೂ ಸಚಿವ ದಿನೇಶ್‌ ಆರೋಪಿಸಿದ್ದಾರೆ.

ಇನ್ನೊಂದೆಡೆ, ಅಸೆಂಬ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ ಸಚಿವ ಜಿತಿನ್‌ ಪ್ರಸಾದ ಅವರೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜು.18ರಂದು ವರ್ಗಾವಣೆಯಲ್ಲಿ ಅವ್ಯವಹಾರ ಆರೋಪ ಸಂಬಂಧ ಅವರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಅನಿಲ್‌ ಕುಮಾರ್‌ ಪಾಂಡೆಯನ್ನು ಹುದ್ದೆಯಿಂದ ವಜಾಗೊಳಿಸಿದ್ದರಿಂದ ಅವರು ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ತಳ್ಳಿಹಾಕಿರುವ ಪ್ರಸಾದ, ನನಗೆ ಯೋಗಿ ಸರ್ಕಾರದ ಬಗ್ಗೆ ಅಸಮಾಧಾನವಿಲ್ಲ. ಕೇಂದ್ರ ನಾಯಕರನ್ನು ಭೇಟಿಯಾಗುವ ಯೋಜನೆಯನ್ನೂ ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next