ಲಕ್ನೋ: ನರೇಂದ್ರ ಮೋದಿ ಎಂಬ ಮಂತ್ರ ಈಗ ದೇಶದಲ್ಲಿ ಮಾತ್ರವಲ್ಲ. ಜಗತ್ತಿನಾದ್ಯಂತ ಕೇಳಿ ಬರುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋದಲ್ಲಿ ಆಯೋಜಿಸಲಾಗಿದ್ದ ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, “ಮೋದಿ ಇದ್ದರೆ ಎಲ್ಲವೂ ಸಾಧ್ಯ’ (ಮೋದಿ ಹೈ ತೋ ಮುಮ್‌ಕಿನ್ ಹೈ) ಎನ್ನುವುದು ಜಗತ್ತಿನಾದ್ಯಂತ ಕೇಳಿ ಬರುತ್ತಿದೆ. 2019ರಲ್ಲಿ ಈ ಮಾತು ಭಾರತದಲ್ಲಿ ಕೇಳಿ ಬರುತ್ತಿತ್ತು. ಈಗ ಯಾವುದೇ ಬಿಕ್ಕಟ್ಟು ಎದುರಾಗಲಿ, ವಿಶ್ವದ ಎಲ್ಲ ರಾಷ್ಟ್ರಗಳು ಮೋದಿಯಿಂದ ಪರಿಹಾರ ಸಾಧ್ಯ ಎಂದು ಇತ್ತಕಡೆ ದಿಟ್ಟಿಸುತ್ತಾರೆ. ಈಗ ಇದು ಜಾಗತಿಕ ಮಂತ್ರವಾಗಿದೆ. ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಸಿಕ್ಕಿದ್ದೇ ಅದಕ್ಕೆ ಉದಾಹರಣೆ’ ಎಂದರು.
2024ರ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಈಗಿನಿಂದಲೇ ಸನ್ನದ್ಧ ಸ್ಥಿತಿಯಲ್ಲಿ ಇದ್ದು, ಪ್ರಚಾರ ನಿರತರಾಗಬೇಕು ಎಂದರು. ಪ್ರಸ್ತುತ ಭಾರತ ಜಿ20 ಶೃಂಗದ ಅಧ್ಯಕ್ಷತೆ ವಹಿಸಿದೆ. ಇದರ ಮೂಲಕ ಮೋದಿ ಇಡೀ ದೇಶದ ಪ್ರತಿಯೊಬ್ಬರೊಂದಿಗೂ ಸಂಪರ್ಕ ಸಾಧಿಸಿದ್ದಾರೆ ಎಂದರು.
ಎಲ್ಲ 80 ಸ್ಥಾನ ಗೆಲ್ಲಬೇಕು:
ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಈ ಸಂದರ್ಭದಲ್ಲಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು. ಅದಕ್ಕಾಗಿ ಈಗಿನಿಂದಲೇ ಪರಿಶ್ರಮ ಪಡಬೇಕು ಎಂದರು.