Advertisement

17ರಂದು ಯೋಗಥಾನ್‌ ಆಯೋಜನೆ: ಜಿಲ್ಲಾಧಿಕಾರಿ

03:45 PM Sep 04, 2022 | Team Udayavani |

ಗದಗ: ಲಿಮ್ಕಾ ಮತ್ತು ಗಿನ್ನಿಸ್‌ ದಾಖಲೆ ಮಾಡಲು ರಾಜ್ಯಾದ್ಯಂತ 20 ಜಿಲ್ಲೆಗಳಲ್ಲಿ ಸೆ.17ರಂದು ಏಕಕಾಲಕ್ಕೆ ಯೋಗಥಾನ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಯೋಗಥಾನ್‌-2022 ಕಾರ್ಯಕ್ರಮ ಏರ್ಪಡಿಸುವ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗಥಾನ್‌ ಕಾರ್ಯಕ್ರಮ ಯಶಸ್ವಿಗೆ ಜಿಲ್ಲೆಯಲ್ಲಿ ವಿವಿಧ ಸಮಿತಿ ರಚಿಸಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಮಟ್ಟದ ಯೋಗಥಾನ್‌ನಲ್ಲಿ 25,000ಕ್ಕೂ ಅಧಿಕ ಯೋಗಾಸಕ್ತರು ಪಾಲ್ಗೊಳ್ಳುವ ಮೂಲಕ ದಾಖಲೆ ಪುಟ ಸೇರಲಿದೆ. ಆಸಕ್ತರು ಯೋಗಥಾನ್‌-2022 ರ ವೆಬ್‌ಸೈಟ್‌ ಗೆ ಭೇಟಿ ನೀಡಿ ಹೆಸರನ್ನು ನೋಂದಾಯಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

ಯೋಗಥಾನ್‌ ಕಾರ್ಯಕ್ರಮವನ್ನು ಜಿಲ್ಲೆಯ ನಾಗಾವಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.17 ರಂದು ಬೆಳಗ್ಗೆ 9ರಿಂದ 9:45ರ ವರೆಗೆ ನಡೆಸಲಾಗುವುದು. ಅಂದು ಬೆಳಗ್ಗೆ 6ಕ್ಕೆ ಸ್ಥಳದಲ್ಲಿ ನೋಂದಾಯಿತ ಯೋಗಾಸಕ್ತರು ವಲಯವಾರು ವಿಭಾಗಿಸಿ ನಿಗದಿತ ಸ್ಥಳದಲ್ಲಿಯೇ ಬಂದು ಕೂಡುವ ವ್ಯವಸ್ಥೆಯಾಗಬೇಕು. ಸುಮಾರು 25,000 ಯೋಗಾಸಕ್ತರು ಒಂದೇ ಆವರಣದಲ್ಲಿ ಸೇರುವ ಸಂಭವವಿರುವುದರಿಂದ ಯೋಗಥಾನ್‌ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲು ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಡಾ| ಸುಶೀಲಾ ಬಿ. ಮಾತನಾಡಿ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಅದರಂತೆ ಯೋಗಥಾನ್‌ನಲ್ಲಿ ಪಾಲ್ಗೊಳ್ಳುವ ಯೋಗಾಸಕ್ತರಿಗೆ ಉಪಹಾರ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸೂಕ್ತ ವಾಹನ ನಿಲುಗಡೆಗೆ ಸ್ಥಳ ಗುರುತಿಸಿ ಯಾವುದೇ ಗೊಂದಲಕ್ಕೂ ಆಸ್ಪದವಿಲ್ಲದಂತೆ ಯೋಗಥಾನ್‌ ಯಶಸ್ವಿಗೆ ಅಧಿಕಾರಿಗಳು ಮುಂದಾಗಬೇಕು ಎಂದರು.

Advertisement

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠಲ ಜಾಬಗೌಡ್ರ ಮಾತನಾಡಿ, ಸೆ. 17 ರಂದು ನಡೆಯುವ ಯೋಗಥಾನ್‌-2022 ಕಾರ್ಯಕ್ರಮದಲ್ಲಿ ವಿವಿಧ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ವಸತಿ ನಿಲಯದ ವಿದ್ಯಾರ್ಥಿಗಳು, 350ಕ್ಕೂ ಹೆಚ್ಚು ಯೋಗ ಶಿಕ್ಷಕರು ಹಾಗೂ ಯೋಗ ಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ಒಟ್ಟು 26,000 ಯೋಗಾಸಕ್ತರು ತಮ್ಮ ಹೆಸರನ್ನು ಈಗಾಗಲೇ ನೋಂದಾಯಿಸಿದ್ದಾರೆ. ಇನ್ನೂ ಹೆಸರು ನೋಂದಾಯಿಸಲು ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸಕ್ತರು ಹೆಸರು ನೋಂದಾಯಿಸುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಸಭೆಯಲ್ಲಿ ಉಪಹಾರ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವೇದಿಕೆ ಕಾರ್ಯಕ್ರಮ, ಭದ್ರತೆ, ಆಮಂತ್ರಣ ಪತ್ರಿಕೆ ಮುದ್ರಣ, ವೈದ್ಯಕೀಯ ಸೌಲಭ್ಯ, ಮಾರ್ಗದರ್ಶನದ ಫಲಕಗಳು, ಸ್ವಚ್ಛತಾ ಕಾರ್ಯ, ಮೂಲಸೌಕರ್ಯ ಕುರಿತಂತೆ ರಚಿಸಲಾದ ಸಮಿತಿಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಚರ್ಚಿಸಲಾಯಿತು.

ಆಯುಷ್‌ ಇಲಾಖೆ ಅಧಿಕಾರಿ ಡಾ| ಉಪ್ಪಿನ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ಸಮನ್ವಯಾಧಿಕಾರಿ ಬಡಿಗೇರ, ನೆಹರು ಯುವ ಕೇಂದ್ರ ಸಮನ್ವಯಾಧಿಕಾರಿ ರಜನಿ ವಾರ್ತಾಧಿಕಾರಿ ವಸಂತ ಮಡ್ಲೂರ, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next