ಮಣಿಪಾಲ: ಮಣಿಪಾಲದ ಎಂಡ್ ಪಾಯಿಂಟ್‌ನಲ್ಲಿ ಗಿನ್ನೆಸ್ ದಾಖಲೆಗಾಗಿ 15 ಸಾವಿರ ವಿದ್ಯಾರ್ಥಿಗಳು ರವಿವಾರ ಯೋಗಥಾನ್‌ನಲ್ಲಿ ಪಾಲ್ಗೊಂಡರು.
ಜಿಲ್ಲಾಡಳಿತ, ಜಿ. ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಾಹೆ ಮತ್ತು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಯೋಗಥಾನ್ ಆಯೋಜಿಸಲಾಗಿತ್ತು. ಜಿಲ್ಲೆಯ ಪ್ರೌಢಶಾಲೆ, ಪ. ಪೂ., ಪದವಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಯೋಗಥಾನ್‌ನಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 8ರಿಂದ 9ರ ವರೆಗೆ ಯೋಗಾಸನ ನಡೆಯಿತು. 300 ಎನ್‌ಸಿಸಿ ಕೆಡೆಟ್‌ಗಳು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು. 150 ಮಂದಿ ಯೋಗ ಮಾರ್ಗದರ್ಶಕರು ಮಾರ್ಗದರ್ಶನ ನೀಡಿದರು. ಆರ್‌ಟಿಒ ವತಿಯಿಂದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.
ವಿದ್ಯಾರ್ಥಿಗಳೊಂದಿಗೆ ಶಾಸಕ ಕೆ. ರಘುಪತಿ ಭಟ್, ಡಿಸಿ ಕೂರ್ಮಾ ರಾವ್ ಎಂ. , ಜಿ. ಪಂ. ಸಿಇಒ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ, ಎಡಿಸಿ ವೀಣಾ ಬಿ.ಎನ್. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಯೋಗಾಸನ ಮಾಡಿದರು.
ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿರುವ ಭಾರತದ ಯೋಗ ಪದ್ಧತಿಗೆ ವಿಶ್ವ ಮಾನ್ಯತೆ ದೊರೆತಿದ್ದು, ಪ್ರತಿದಿನ ಯೋಗಾಸನ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಒತ್ತಡ ಮುಕ್ತ ಮತ್ತು ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಸ್ವಾಗತಿಸಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಡಿಡಿಪಿಐ ಗಣಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಹೆ ಪ್ರಮುಖರಾದ ಕರ್ನಲ್ ಪ್ರಕಾಶ್, ಡಾ| ವಿನೋದ್ ಉಪಸ್ಥಿತರಿದ್ದರು.