Advertisement

ಗಾಳಿಪಟ-2 ಚಿತ್ರ ವಿಮರ್ಶೆ: ಹಾರಾಟದ ಹುಡುಗರ ಗೆಲುವಿನ ಹೋರಾಟ

10:05 AM Aug 13, 2022 | Team Udayavani |

ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಜೊತೆಯಾದರೆ ಅಲ್ಲೊಂದು ಮಜವಾದ ಕಥೆ ಹುಟ್ಟುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಜೊತೆಗೊಂದು ಕಣ್ಣೀರಧಾರೆ… ಇವಿಷ್ಟು ಆ ಕಥೆಯಲ್ಲಿ ಮೇಲೈಸಿ, ರೆಕ್ಕೆ ಬಿಚ್ಚಿ ಕುಣಿಯುತ್ತದೆ. ಹಿಂದಿನ ಸಿನಿಮಾಗಳಲ್ಲಿ ಈ ಅಂಶಗಳೊಂದಿಗೆ ಸೈ ಎನಿಸಿಕೊಂಡಿದ್ದ ಜೋಡಿ ಈ ಬಾರಿ “ಗಾಳಿಪಟ-2′ ಮೂಲಕ ಮತ್ತೂಮ್ಮೆ ಮೋಡಿ ಮಾಡಿದೆ. ಈ ಚಿತ್ರವನ್ನು ಒಂದೇ ವಾಕ್ಯದಲ್ಲಿ ವಿಮರ್ಶಿಸುವುದಾದರೆ ಒಂದು ಫ‌ನ್‌ ರೈಡ್‌…. ಆ ಮಟ್ಟಿಗೆ ಯೋಗರಾಜ್‌ ಭಟ್‌ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

Advertisement

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಮೂವರು ಯುವಕರ ಕಥೆ ಇಲ್ಲಿದೆ. ಆ ಮೂವರ ಮೈಂಡ್‌ಸೆಟ್‌, ಮ್ಯಾನರಿಸಂ, ಅವರ ಬೆನ್ನಿಗಿರುವ ಒಂದೊಂದು ಲವ್‌ಸ್ಟೋರಿ, ಗ್ಯಾಪಲ್ಲಿ ಬಂದು ಹೋಗುವ ಮೇಷ್ಟ್ರ ಕನ್ನಡ ಹಾಗೂ ಪುತ್ರ ಪ್ರೇಮ ಹಾಗೂ ಇವೆಲ್ಲವನ್ನು ಓವರ್‌ಟೇಕ್‌ ಮಾಡಿ, ಪ್ರೇಕ್ಷಕನ ಎದೆಗೆ ನಾಟುವ ಒಂದು ಎಮೋಶನಲ್‌ ಎಪಿಸೋಡ್‌ … ಇಷ್ಟು ಅಂಶಗಳನ್ನಿಟ್ಟುಕೊಂಡು ಭಟ್ಟರು “ಗಾಳಿಪಟ-2’ವನ್ನು ಸುಸೂತ್ರವಾಗಿ ಹಾರಿಸಿದ್ದಾರೆ.

ಕಥೆಗಿಂತ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಸಿನಿಮಾ ಮುಂದುವರೆಸಿಕೊಂಡು ಹೋಗುವ ಕಲೆ ಭಟ್ಟರಿಗೆ ಚೆನ್ನಾಗಿಯೇ ಸಿದ್ಧಿಸಿದೆ ಮತ್ತು ಅದು ಅವರ ಹಿಂದಿನ ಸಿನಿಮಾಗಳಲ್ಲೂ ಸಾಬೀತಾಗಿದೆ. ಇಲ್ಲೂ ಆ ತರಹದ “ತರ್ಲೆ’ ಸನ್ನಿವೇಶಗಳು ಪ್ರೇಕ್ಷಕನಿಗೆ ಖುಷಿ ಕೊಡುತ್ತವೆ.

ಮೊದಲರ್ಧ ಕಾಲೇಜು ಹಿನ್ನೆಲೆಯಿಂದ ಆರಂಭವಾಗುವ ಕಥೆ ಜಾಲಿಯಾಗಿ ಸಾಗುತ್ತಲೇ, ದೊಡ್ಡ ತಿರುವಿಗೆ ನಾಂದಿಯಾಡುತ್ತದೆ. ನಗುವ ಹುಡುಗನ ಅಂತರಾಳದಲ್ಲಿ ಹುದುಗಿರುವ ಘಟನೆ, ಮಗನನ್ನು ಕಳೆದುಕೊಂಡ ತಂದೆಯ ಚಡಪಡಿಕೆ… ಈ ಎರಡು ಅಂಶಗಳನ್ನು ಭಟ್ಟರು ಜೊತೆ ಜೊತೆಯಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಮುಖ್ಯವಾಗಿ ಭಟ್ಟರು ಸೃಷ್ಟಿಸಿರುವ ಮೂವರು ಹುಡುಗರ ಪಾತ್ರಗಳೇ ಮಜವಾಗಿವೆ. ಸಿನಿಮಾ ದುದ್ದಕ್ಕೂ ಪ್ರೇಕ್ಷಕನನ್ನು ನಗಿಸುತ್ತಾ “ಎಚ್ಚರ’ವಾಗಿಡುವಲ್ಲಿನ ಆ ಪಾತ್ರಗಳ ಪ್ರಯತ್ನ ಯಶಸ್ವಿಯಾಗಿದೆ ಕೂಡಾ. ಸಿನಿಮಾದ ದ್ವಿತೀಯಾರ್ಧ ಬಹುತೇಕ ವಿದೇಶದಲ್ಲೇ ನಡೆದಿದೆ. ಅದಕ್ಕೊಂದು ಕಾರಣವಿದೆ. ನಗುವಿನ ಹಾದಿಯಲ್ಲಿ ಸಾಗುವ ಸಿನಿಮಾವನ್ನು ನೋಡ ನೋಡುತ್ತಲೇ ಎಮೋಶನಲ್‌  ಜರ್ನಿಯಾಗಿ ಪರಿವರ್ತಿಸಿ ಬಿಡುತ್ತಾರೆ ಭಟ್ಟರು.

Advertisement

ಅಲ್ಲಿಂದ ಸಿನಿಮಾ ಮತ್ತಷ್ಟು ಗಂಭೀರವಾಗಿ ಸಾಗುತ್ತದೆ. ಇಲ್ಲಿ ಭಟ್ಟರ ಕಥೆಯ ಜೊತೆಗೆ ಹಾಡುಗಳು ಕೂಡಾ ಸಿನಿಮಾದ ಭಾವಕ್ಕೆ ಪೂರಕವಾಗಿದೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಬರುವ “ನಾವು ಬದುಕಿರಬಹುದು ಪ್ರಾಯಶಃ’ ಸಿನಿಮಾಕ್ಕೆ ಮತ್ತಷ್ಟು ಮೈಲೇಜ್‌ ನೀಡಿದೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ನಾಯಕ ನಟರಾದ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌. ಈ ಮೂವರ ಕಾಮಿಡಿ ಟೈಮಿಂಗ್‌, ಜಾಲಿರೈಡ್‌, ಜೊತೆಗೆ ಎಮೋನಲ್‌ ಜರ್ನಿ… ಎಲ್ಲವೂ ಖುಷಿ ಕೊಡುತ್ತದೆ. ಸಿನಿಮಾ ಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಂತ್‌ ನಾಗ್‌ ಅವರದು ಎಂದಿನಂತೆ ತೂಕದ ಅಭಿನಯ. ನಾಯಕಿಯರಾದ ವೈಭವಿ, ಶರ್ಮಿಳಾ, ಸಂಯುಕ್ತಾ ಮೆನನ್‌ ಸಿನಿಮಾದ ಗ್ಲಾಮರ್‌ ಟಚ್‌. ಉಳಿದಂತೆ ರಂಗಾಯಣ ರಘು, ಸುಧಾ ಬೆಳವಾಡಿ ಸೇರಿದಂತೆ ಇತರರು ನಟಿಸಿದ್ದಾರೆ.

ಅರ್ಜುನ್‌ ಜನ್ಯಾ ಸಂಗೀತ “ಗಾಳಿಪಟ’ದ ಹಾರಾಟವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಿದಿದೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣದಲ್ಲಿ ಸೊಬಗು- ಸೊಗಸು ಎರಡೂ ತುಂಬಿದೆ. ಒಂದು ಮಜವಾದ ಸಿನಿಮಾವನ್ನು ಕುಟುಂಬ ಸಮೇತ ನೋಡಬಯಸುವವರಿಗೆ “ಗಾಳಿಪಟ-2′ ಒಂದೊಳ್ಳೆಯ ಆಯ್ಕೆಯಾಗಬಹುದು

ರವಿಪ್ರಕಾಶ್‌ ರೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next