Advertisement

ಗಾಳಿಪಟ -2 ಇಂದಿನಿಂದ ಹಾರಾಟ: ಗಣೇಶ್-ಭಟ್ರ ಚಿತ್ರ

08:50 AM Aug 12, 2022 | Team Udayavani |

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಒಟ್ಟಾಗಿ ಒಂದು ಸಿನಿಮಾ ಮಾಡುತ್ತಾರೆಂದರೆ ಆ ಸಿನಿಮಾ ಬಗ್ಗೆ ಆರಂಭದಿಂದಲೇ ಒಂದು ಕುತೂಹಲವಿರುತ್ತದೆ. ಹೀಗೆ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕುತೂಹಲ ಉಳಿಸಿಕೊಂಡು ಬಂದ ಚಿತ್ರವೆಂದರೆ ಅದು “ಗಾಳಿಪಟ-2′. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಬಿಡುಗಡೆಯಾಗುತ್ತಿದೆ.

Advertisement

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿರುವ ಖುಷಿ ಕೂಡಾ ಗಣೇಶ್‌ ಅವರಿಗಿದೆ.

ಈ ಸಂದರ್ಭದಲ್ಲಿ ಮಾತನಾಡುವ ಗಣೇಶ್‌, “ನನ್ನ ಪಾಲಿಗೆ ನಿಜಕ್ಕೂ “ಗಾಳಿಪಟ 2′ ಬಹು ನಿರೀಕ್ಷೆಯ ಸಿನಿಮಾ. ಯಾಕೆಂದರೆ, ಅದೊಂದು ಹೊಸ ಬಗೆಯ ಕಥೆ ಇರುವ ಚಿತ್ರ.ಅದರಲ್ಲೂ ಯಶಸ್ವಿ ಜೋಡಿ ಸೇರಿ ಮಾಡುತ್ತಿರುವ ಚಿತ್ರವಾದ್ದರಿಂದ ಸಹಜವಾಗಿಯೇ ನನ್ನನ್ನೂ ಸೇರಿದಂತೆ ಬಹುತೇಕ ಜನರಿಗೆ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಯೋಗರಾಜ್‌ ಭಟ್‌ ಅವರು ಮೊದಲ “ಗಾಳಿಪಟ ‘ ಮಾಡಿದಾಗ, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಆ ಯಶಸ್ಸೇ, ಪುನಃ “ಗಾಳಿಪಟ 2′ ಚಿತ್ರ ಮಾಡೋಕೆ ಕಾರಣ. ಇನ್ನು, ಮೊದಲ ಸಿನಮಾದಲ್ಲಿದ್ದ ಕಾಂಬಿನೇಷನ್‌ ಇಲ್ಲೂ ಇದೆ. ದಿಗಂತ್‌ ಇದ್ದಾರೆ. ರಾಜೇಶ್‌ಕೃಷ್ಣ ಬದಲಾಗಿ ಈ ಬಾರಿ ಪವನ್‌ಕುಮಾರ್‌ ಇದ್ದಾರೆ. ಮೂವರ ಜೋಡಿ ಕೂಡ ತುಂಬಾ ಸ್ಪೆಷಲ್‌ ಆಗಿಯೇ ಇರಲಿದೆ. ಒಂದು ಫ‌ನ್ನೀ ಸ್ಟೋರಿ ಹಿಂದೆ ಸಾಕಷ್ಟು ವಾಸ್ತವದ ವಿಷಯಗಳೂ ಇಲ್ಲಿರಲಿವೆ. ಇಂತಹ ಸಿನಿಮಾ ಮಾಡೋದಕ್ಕೆ ಮೊದಲು ಒಳ್ಳೆಯ ಪ್ರೊಡಕ್ಷನ್‌ ಬೇಕು. ರಮೇಶ್‌ರೆಡ್ಡಿ ಅವರು ಸಿನಿಮಾಗೆ ಏನೇನು ಬೇಕೋ ಎಲ್ಲವನ್ನೂ ಪೂರೈಸಿದ್ದರಿಂದ ಇಂದು ಸಿನಿಮಾ ಅದ್ಧೂರಿಯಾಗಿಯೇ ಮೂಡಿಬಂದಿದೆ. ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ವಿದೇಶದಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದೇವೆ’ ಎನ್ನುವುದು ಗಣೇಶ್‌ ಮಾತು.

ಭಟ್‌ ಜೊತೆ ಮತ್ತೂಮ್ಮೆ ಸಿನಿಮಾ ಮಾಡುತ್ತಿರುವ ಬಗ್ಗೆ ಮಾತನಾಡುವ ಗಣೇಶ್‌, “ಯೋಗರಾಜ್‌ ಭಟ್‌ ಅವರೊಂದಿಗೆ ಕೆಲಸ ಮಾಡೋದೇ ಒಂದು ಖುಷಿ. ಅವರು ಸೆಟ್‌ನಲ್ಲಿರುವಾಗ ಸದಾ ತಮಾಷೆಯಲ್ಲೇ ಕೆಲಸ ತೆಗೆದುಕೊಳ್ಳುತ್ತಾರೆ. ತುಂಬಾ ಸಿಂಪಲ್‌ ಕಥೆಯಲ್ಲೇ ಸಾಕಷ್ಟು ವಿಷಯ ಹೇಳುವ ಮೂಲಕ ಜನರನ್ನು ಸಂತಸಪಡಿಸುತ್ತಾರೆ. ಅವರು ಕಥೆ ಹೇಳುವ ಶೈಲಿ ಇರಬಹುದು, ನಿರೂಪಿಸುವ ಶೈಲಿ ಹಾಗು ಸಂಭಾಷಣೆಯನ್ನು ಕಟ್ಟಿಕೊಡುವ ರೀತಿ ಎಲ್ಲವೂ ಹೊಸದಾಗಿರುತ್ತದೆ. ಅವರು ಸಾಕಷ್ಟು ಯೋಚಿಸಿಯೇ ಒಂದು ಕಥೆ ಹೆಣೆಯುತ್ತಾರೆ. ಈಗಿನ ಜನರೇಷನ್‌ಗೆ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ.ಅವರ ಜೊತೆ ಮಾಡಿದ ಎಲ್ಲಾ ಸಿನಿಮಾಗಳೂ ನನಗೆ ಗೆಲುವು ಕೊಟ್ಟಿವೆ. ಹಾಗಾಗಿ ಈ ಸಿನಿಮಾ ಮೇಲೂ ಸಾಕಷ್ಟು ನಂಬಿಕೆಯಂತೂ ಇದೆ’ ಎನ್ನುತ್ತಾರೆ.

ಒಂದೊಳ್ಳೆಯ ಸಿನಿಮಾ ಆಗಬೇಕಾದರೆ ಮೊದಲಿಗೆ ಬೇಕಾಗಿರುವುದು ಕಥೆ ಮತ್ತು ನಿರ್ಮಾಣ ಸಂಸ್ಥೆ. “ಗಾಳಿಪಟ 2′ ಚಿತ್ರ ಆ ವಿಷಯದಲ್ಲಿ ಲಕ್ಕಿ ಎನ್ನಬಹುದು. ಇನ್ನು, ಈ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಲಕ್ಕಿ. ಕಾರಣ, ಯಾವುದಕ್ಕೂ ಕೊರತೆ ಬಾರದಂತೆ, ಕಥೆ ಏನು ಡಿಮ್ಯಾಂಡ್‌ ಮಾಡುತ್ತೋ, ಎಲ್ಲವನ್ನೂ ಪ್ರೀತಿಯಿಂದಲೇ ಒದಗಿಸುವ ಮೂಲಕ ಒಂದೊಳ್ಳೆಯ ಸಿನಿಮಾ ಆಗೋಕೆ ಕಾರಣವಾಗಿದ್ದಾರೆ ನಿರ್ಮಾಪಕ ರಮೇಶ್‌ರೆಡ್ಡಿ. ಅವರ ಸಿನಿಮಾ ಪ್ರೀತಿ ಹೇಗಿದೆ ಎಂಬುದು ನಮಗೆ ಈ ಸಿನಿಮಾ ಮಾಡುವಾಗ ಗೊತ್ತಾಯಿತು. ಅವರೊಬ್ಬ ಪ್ಯಾಷನ್‌ ಇರುವ ವ್ಯಕ್ತಿ. ಸಿನಿಮಾವನ್ನು ಆಳವಾಗಿ ಪ್ರೀತಿಸುತ್ತಾರೆ. ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಹಾಗಾಗಿ ಒಳ್ಳೆಯ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರ ತಯಾರಾಗುತ್ತಿದ್ದು, ನೋಡುಗರಿಗೊಂದು ಭರ್ಜರಿ ಖುಷಿಯನ್ನಂತೂ ಕೊಡುತ್ತದೆ ಎಂಬುದು ಗಣೇಶ್‌ ಮಾತು.

Advertisement

“ಗಾಳಿಪಟ-2′ ಚಿತ್ರ ಈಗಾಗಲೇ ಹಾಡಿನಲ್ಲಿ ಗೆದ್ದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎಲ್ಲಾ ಹಾಡುಗಳು ಹಿಟ್‌ಲಿಸ್ಟ್‌ ಸೇರಿದೆ. “ಬಾಯಿ ಬಡ್ಕ’, “ನಾನಾಡದ ಮಾತನು ಕದ್ದಾಲಿಸು…’,”ದೇವ್ಲೆ ದೇವ್ಲೆ’, “ಬಗೆಹರಿಯದ ಹಾಡು’ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಸದ್ದು ಮಾಡುತ್ತಿವೆ.

ರವಿಪ್ರಕಾಶ್‌ ರೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next