ಮೈಸೂರು: ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಯೋಗ ನಗರಿ ಮೈಸೂರು ಸಜ್ಜಾಗಿದ್ದು, ಅರಮನೆ ಬಳಿಯ ರಾಜಬೀದಿಯಲ್ಲಿ ಭಾನುವಾರ ಬೆಳಗ್ಗೆ ಯೋಗ ತಾಲೀಮು ನಡೆಯಿತು. ಸಾಂಸ್ಕೃತಿಕ ನಗರಿ ಮೈಸೂರು ಯೋಗದಲ್ಲಿ ಮತ್ತೂಂದು ಗಿನ್ನೆಸ್ ದಾಖಲೆ ಬರೆಯಲು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಜಯಚಾಮರಾಜೇಂದ್ರ ವೃತ್ತದ ರಾಜಪಥದಲ್ಲಿ 2ನೇ ಹಂತದ ಯೋಗಾಭ್ಯಾಸ ನಡೆಯಿತು.
ಯೋಗ ತಾಲೀಮು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್‌ಎಸ್ ಯೋಗ, ಮೈಸೂರು ಯೋಗ ಒಕ್ಕೂಟ, ಯೋಗ ಫೌಂಡೇಷನ್, ಬಾಬಾ ರಾಮ್‌ದೇವ್ ಪತಂಜಲಿ ಯೋಗ ಸಮಿತಿಗಳ ಸಹಯೋಗದಲ್ಲಿ ಭಾನುವಾರ ಮುಂಜಾನೆ 45 ನಿಮಿಷ ಯೋಗ 300ಕ್ಕೂ ಹೆಚ್ಚು ಯೋಗ ಪಟುಗಳು ತಾಲೀಮು ನಡೆಸಿದರು.
ದಾಖಲೆಗೆ ತೀರ್ಮಾನ: ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಅಂದು ರೇಸ್‌ಕೋರ್ಸ್ ಮೈದಾನದಲ್ಲಿ 1.50 ಲಕ್ಷಕ್ಕೂ ಹೆಚ್ಚು ಯೋಗಾಸಕ್ತರು ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ದಾಖಲೆ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಘಟನೆಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿವೆ. ಈ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಯೋಗಾಭ್ಯಾಸಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.
ವಿವಿಧ ತಾಲೀಮಿನ ಅಭ್ಯಾಸ: ಯೋಗ ದಿನದ ಅಂಗವಾಗಿ ಎಲ್ಲೆಡೆ ಒಂದೇ ಪ್ರಕಾರದ ಯೋಗ ಅನುಸರಿಸಲು ಶಿಷ್ಟಾಚಾರ ರೂಪಿಸಲಾಗಿದೆ. ಆ ಪ್ರಕಾರವೇ ಅಂದು ಯೋಗಾಭ್ಯಾಸಗಳು ನಡೆಯಲಿವೆ. ಈ ನಿಟ್ಟಿನಲ್ಲಿ ಪೂರ್ವಾಭ್ಯಾಸವೂ ಶಿಷ್ಟಾಚಾರದ ಪ್ರಕಾರವಾಗಿಯೇ ಜರುಗಿತು. ಮೊದಲಿಗೆ ಪ್ರಾರ್ಥನೆ, ಚಾಲನಾ ಕ್ರಿಯೆ, ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪದೊಂದಿಗೆ ಪೂರ್ವಾಭ್ಯಾಸ ಪ್ರಕ್ರಿಯೆ ಅಂತ್ಯಗೊಂಡಿತು.
ಆಯುಷ್ ಇಲಾಖೆ ನಿರ್ದೇಶಕಿ ಡಾ.ಸೀತಾಲಕ್ಷ್ಮೀ, ಜಿಎಸ್‌ಎಸ್ ಸಂಸ್ಥೆಯ ಶ್ರೀಹರಿ, ಎಸ್‌ಪಿವೈಎಸ್‌ಎಸ್‌ನ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಜೂ.21ರಂದು ಆಯೋಜಿಸಲಾಗುವ ರಾಷ್ಟ್ರಮಟ್ಟದ ಯೋಗ ದಿನಾಚರಣೆ ಕಾರ್ಯಕ್ರಮಕ್ಕಾಗಿ ಐದು ನಗರಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು, ಅದರಲ್ಲಿ ಮೈಸೂರು ಸೇರಿದೆ. ಹೀಗಾಗಿ, ಈ ಸಲ ಅಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದೆ. ಯೋಗದಲ್ಲಿ ಮೈಸೂರು ಮತ್ತೆ ದಾಖಲೆ ಮಾಡಬೇಕು. ಅದಕ್ಕಾಗಿ ನಗರದ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು.
-ಎಸ್.ಎ.ರಾಮದಾಸ್, ಶಾಸಕ