Advertisement

ದೇಹ ಮತ್ತು ಮನಸ್ಸು ಆರೋಗ್ಯವಾಗಿಡಲು…ಎಷ್ಟು ಪರಿಣಾಮಕಾರಿ ಗೊತ್ತಾ?

01:15 PM Aug 02, 2022 | ಕಾವ್ಯಶ್ರೀ |

ಇಂದಿನ ಜಂಜಾಟದ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗೆಗೆ ಅಷ್ಟೊಂದು ಕಾಳಜಿ ವಹಿಸುತ್ತಿಲ್ಲ. ನಮ್ಮ ಕೆಲಸದ ಒತ್ತಡದ ಜೊತೆಗೆ ನಾವು ನಮ್ಮ ಆರೋಗ್ಯದ ಬಗೆಗೂ ಗಮನ ಹರಿಸಬೇಕಾಗುತ್ತದೆ. ‘ಆರೋಗ್ಯವೇ ಭಾಗ್ಯ’ ಎಂಬ ವಿಷಯವನ್ನು ಬಾಲ್ಯದಿಂದಲೇ ಓದಿದ ನಾವೆಲ್ಲ ಆ ನಂತರ ಅದನ್ನು ಹಾಗೆಯೇ ಮರೆತು ಬಿಟ್ಟಿದ್ದೇವೆ. ನಮ್ಮ ಆರೋಗ್ಯ ನಮಗೆಷ್ಟು ಮುಖ್ಯ ಎಂಬುದನ್ನು ಕೂಡಾ ಮರೆತ್ತಿದ್ದೇವೆ.

Advertisement

ಪ್ರಾಚೀನ ಕಾಲದಲ್ಲಿ ಯೋಗಿಗಳು ನೂರಾರು ವರ್ಷ ಆರೋಗ್ಯವಾಗಿ ಬದುಕಿದ್ದರಂತೆ. ಅದಕ್ಕೆ ಕಾರಣ ಯೋಗ, ಧ್ಯಾನ, ಮುದ್ರೆ, ಹಿತಮಿತ ಆಹಾರ ಸೇವನೆ, ಗುಣ-ನಡತೆ ಎಂಬುದನ್ನು ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳು ಕಲಬೆರಕೆಯಿಂದ ಕೂಡಿದ್ದು, ಇವುಗಳನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳು ಬರಲು ಕಾರಣವಾಗುತ್ತಿವೆ. ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಮಾತ್ರ ಕಾಯಿಲೆಗಳಿಂದ ಮುಕ್ತರಾಗಿ ಆರೋಗ್ಯಕರವಾಗಿರಲು ಸಾಧ್ಯ.

ಮನುಷ್ಯನೊಬ್ಬ ಪೂರ್ಣ ಆರೋಗ್ಯವಂತ ಎಂದರೆ ಅವನಲ್ಲಿ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು, ರಕ್ತ, ಮಜ್ಜೆ ಇತ್ಯಾದಿ ಸಪ್ತಧಾತುಗಳು, ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು, ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಪ್ರಸನ್ನವಾಗಿ ಅಂದರೆ ಸಂತೃಪ್ತವಾಗಿರುತ್ತದೆ. ಭೌತಿಕ, ಮಾನಸಿಕ, ಆಧ್ಯಾತ್ಮಿಕ, ಪರಿಪೂರ್ಣ ವಿಕಸನಕ್ಕೆ, ಧ್ಯಾನ, ಹಠ, ಯೋಗ, ಏಕಾಗ್ರತೆ, ಮನಸ್ಸಿನ ಮೇಲೆ ಹತೋಟಿ, ಸಕಾರಾತ್ಮಕ ಚಿಂತನೆ, ನಕಾರಾತ್ಮಕ ಧೋರಣೆಯ ತ್ಯಾಗ ಅಗತ್ಯ. ಈ ಎಲ್ಲದಕ್ಕೂ ಯೋಗ ಮತ್ತು ಧ್ಯಾನ ಬಹು ಮುಖ್ಯ.

ದೇಹ ಮತ್ತು ಮನಸ್ಸು ಎರಡನ್ನೂ ಏಕಕಾಲದಲ್ಲಿ ಆರೋಗ್ಯವಾಗಿ ಇಡಲು ಯೋಗ ಸಹಕಾರಿ. ಸುಮಾರು ಕ್ರಿ.ಶ.200ರಲ್ಲಿ ಪತಂಜಲಿಯ ಅಷ್ಟಾಂಗಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಎಂಟು ವಿಧಾನಗಳನ್ನು ಹೇಳಲಾಗಿದೆ. ಇದರಲ್ಲಿ ಆಸನ, ಪ್ರಾಣಾಯಾಮ, ಧ್ಯಾನ, ಯೋಗಗಳು ಇಂದೂ ಚಾಲ್ತಿಯಲ್ಲಿದೆ. ಯೋಗ ಎಂಬುದು ಒಂದು ದಿನ ಅಭ್ಯಾಸ ಮಾಡಿ, ಮುಂದಿನ ದಿನಗಳಲ್ಲಿ ಬಿಟ್ಟು ಬಿಡುವಂತದ್ದು ಅಲ್ಲ. ಪ್ರತಿ ದಿನ ಯೋಗ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸರಿಯಾದ ಆಹಾರ ಕ್ರಮ, ಯೋಗಾಭ್ಯಾಸ, ವ್ಯಾಯಾಮ ಅನುಸರಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಯೋಗ ಮಾಡುವುದರಿಂದ ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುವುದಲ್ಲದೆ ಮಾನಸಿಕ ಹಾಗೂ ದೈಹಿಕವಾಗಿಯೂ ಸದೃಢರಾಗಲು ಸಹಾಯಕವಾಗುತ್ತದೆ. ರಕ್ತದೊತ್ತಡ, ತೂಕ ಕಡಿಮೆ ಮಾಡಿಕೊಳ್ಳಲು, ಕೊಲೆಸ್ಟ್ರಾಲ್‌ ಹತೋಟಿಯಲ್ಲಿಡಲು, ದೇಹವನ್ನು ಸಮತೋಲನದಲ್ಲಿಡಲು ಯೋಗದಿಂದ ಸಾಧ್ಯವಾಗುತ್ತದೆ. ರಕ್ತ ಸಂಚಾರಕ್ಕೆ, ಜೀರ್ಣ ಕ್ರಿಯೆಗೂ ಸಹಕಾರಿಯಾಗಿದೆ.

Advertisement

ಈ ಅಭ್ಯಾಸಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಕಾಯಿಲೆಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದರ ಜೊತೆಗೆ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಆರೋಗ್ಯ ಎಂದರೆ ಬರೀ ದೈಹಿಕ ಆರೋಗ್ಯವಂತರಾಗಿರುವುದಲ್ಲ. ಅದರ ಬದಲಾಗಿ ಮಾನಸ್ಸು ಹಾಗೂ ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಕೂಡಾ ಮುಖ್ಯ. ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಯೋಗ ಸಹಕರಿಸುತ್ತದೆ. ಯೋಗ ಮಾತ್ರವಲ್ಲದೇ ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಮುಖ್ಯವಾಗಿ ಕುಳಿತು ಕೆಲಸ ಮಾಡುವವರು ಮತ್ತು ಲಾಂಗ್ ಡ್ರೈವ್ ಹೋಗುವವರು ಪ್ರತಿದಿನ ಯೋಗ ಮಾಡಬೇಕು. ಇದರಿಂದ ಬೆನ್ನು ನೋವು, ಮೂಳೆಯ ಸೆಳೆತ ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಧೀರ್ಘ ಉಸಿರಾಟದ ಯೋಗ ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಯೋಗದ ಜತೆ ಪೌಷ್ಟಿಕ ಆಹಾರ ಸೇವನೆಯು ಅತೀ ಅಗತ್ಯ. ಪೌಷ್ಟಿಕಾಂಶ ಇರುವ ಆಹಾರ ಸೇವನೆ ದಿನನಿತ್ಯ ಸೇವಿಸುವುದರಿಂದಲೂ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಆಗಿರುವ ಜಂಕ್‌ ಫುಡ್‌ ಗಳೆ ಜಾಸ್ತಿ. ಇಂದಿನ ಒತ್ತಡದ ಜೀವನದಲ್ಲಿ ಹೆಚ್ಚಿನ ಜನರೆಲ್ಲರೂ ಈ ಜಂಕ್‌ ಆಹಾರಗಳಿಗೆ ಮೊರೆ ಹೋಗಿದ್ದಾರೆ. ಇದು ಕೂಡಾ ನಮ್ಮ ಆರೋಗ್ಯ ಹಾನಿ ಮಾಡುತ್ತದೆ.

ಯೋಗಾಭ್ಯಾಸ ಮಾಡಲು ನುರಿತ ಯೋಗಪಟು ಅಥವಾ ಯೋಗ ಗುರುಗಳ ಮೂಲಕ ಅಭ್ಯಸಿಸಬೇಕು. ನಿರ್ದೇಶನ ರಹಿತ ಮತ್ತು ಆಸನಗಳ ಕುರಿತ ಸೂಕ್ತ ಮಾಹಿತಿ ಇಲ್ಲದೆ ಅಭ್ಯಸಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರತಿನಿತ್ಯ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಬೇಕು. ಪ್ರಶಾಂತ ವಾತಾವರಣದಲ್ಲಿ ಆಸನ, ಪ್ರಾಣಾಯಾಮ, ಧ್ಯಾನ ಮಾಡಬಹುದು. ‘ಧ್ಯಾನವೊಂದೇ ಮದ್ದು, ಯೋಗವೊಂದೇ ಚಿಕಿತ್ಸೆ’ ಎಂಬಂತೆ ನಾವೆಲ್ಲರೂ ಅನುಕೂಲವಿದ್ದಂತೆ ಅನುಸರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಣ ಎಂಬುದು ನನ್ನ ಆಶಯ.

-ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next