ಮೈಸೂರು: ವಿಶ್ವದೆಲ್ಲೆಡೆ ಇಂದಿಗೂ ಜೀವಂತವಾಗಿರುವ ಮಾನವ ಕಳ್ಳಸಾಗಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ನೂರಾರು ಮಂದಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಮುಂಜಾನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಡನಾಡಿ ಸಂಸ್ಥೆಯ ಮಕ್ಕಳು, ಯೋಗಪಟುಗಳು, ಸಾರ್ವಜನಿಕರು ಮತ್ತು ವಿದೇಶಿಗರು ಸೇರಿದಂತೆ ನೂರಾರು ಮಂದಿ ಏಕಕಾಲದಲ್ಲಿ ಯೋಗ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.
ಯೋಗ ಪ್ರದರ್ಶನದ ವೇಳೆ ಸೂರ್ಯ ನಮಸ್ಕಾರದ ಎಲ್ಲಾ ಆಸನಗಳನ್ನು 28 ಬಾರಿ ಪ್ರದರ್ಶಿಸುವ ಮೂಲಕ ಮಾನವ ಕಳ್ಳಸಾಗಣೆ ಬಗ್ಗೆ ಜನಜಾಗೃತಿ ಮೂಡಿಸಿದರು. ಇದಕ್ಕೂ ಮುನ್ನ ಯೋಗಾಭ್ಯಾಸಕ್ಕೆ ಚಾಲನೆ ನೀಡಿದ ಮಾಜಿ ಸಭಾಪತಿ ಕೃಷ್ಣ ಮಾತನಾಡಿ. ಯೋಗ ಮಾನವ ಸಾಗಣೆ ನಿರ್ಮೂಲನೆಗಾಗಿ ಹಲವು ಮಂದಿ ಒಂದೇ ಜಾಗದಲ್ಲಿ ಯೋಗಾಭ್ಯಾಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
ಯೋಗ ಎಂಬುದು ಶಾಂತಿ, ಸಮೃದ್ಧಿ, ಸಮಾಧಾನದ ಸಂಕೇತವಾಗಿದ್ದು, ಇದರಿಂದ ಮಾನವ ಸಾಗಣೆಯನ್ನು ತಡೆಯಬೇಕಿದೆ ಎಂದು ತಿಳಿಸಿದರು. ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ಮಾತನಾಡಿ, ಮಾನವ ಸಾಗಣೆ ತಡೆಯಲು ಯೋಗ ಎಂಬ ವಿಷಯವಾಗಿ ಇಂಗ್ಲೆಂಡ್, ಅಮೆರಿಕ, ಆಸ್ಟೇಲಿಯಾ, ಹಾಲೆಂಡ್, ಮೆಕ್ಸಿಕೋ, ಸ್ವೀಡನ್, ಫ್ರಾನ್ಸ್ ಇನ್ನಿತರ ದೇಶಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದೇ ರೀತಿಯಲ್ಲಿ ಒಡನಾಡಿಯಿಂದ ಯೋಗಭ್ಯಾಸದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಒಡನಾಡಿ ಸಂಸ್ಥೆ ನಿರ್ದೇಶಕ ಪರಶು, ಒಡನಾಡಿಯ ಧರ್ಮದರ್ಶಿ ಗೋರ್ಡನ್ ರಾಬಿನ್ಸನ್, ಕವೀಶ್‌ಗೌಡ, ಯೋಗಗುರು ಶಶಿಧರ್, ನಾಗಭೂಷಣ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.