Advertisement

ಶಾಲೆಗಳಲ್ಲಿ ಯೋಗ, ಧ್ಯಾನ ಕಡ್ಡಾಯ: ಸರಕಾರಕ್ಕೆ ಎಂ.ಆರ್‌.ದೊರೆಸ್ವಾಮಿ ಸಲಹೆ

08:27 PM Jun 10, 2023 | Team Udayavani |

ಬೆಂಗಳೂರು: ಎಲ್ಲ ಶಾಲಾ ಮಕ್ಕಳಿಗೆ ಯೋಗ ಮತ್ತು ಧ್ಯಾನ ಕಡ್ಡಾಯಗೊಳಿಸಬೇಕು, ಅಂಕಪಟ್ಟಿ ಮಾದರಿಯಲ್ಲಿ ಮಕ್ಕಳಿಗೆ ಡಿಜಿಟಲ್‌ ಹೆಲ್ತ್‌ ಕಾರ್ಡ್‌ ಕೂಡ ನೀಡಬೇಕು, ಪ್ರತಿ 20 ಮಕ್ಕಳಿಗೊಬ್ಬ ಮೆಂಟರ್‌ (ಮಾರ್ಗದರ್ಶಿ) ನಿಯೋಜಿಸಬೇಕು – ಇವು ಸರಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್‌. ದೊರೆಸ್ವಾಮಿ ಅವರು ರಾಜ್ಯ ಸರಕಾರಕ್ಕೆ ನೀಡಿರುವ ಸಲಹೆಗಳು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 2023ರಲ್ಲಿ ಶಿಕ್ಷಣ ಕ್ಷೇತ್ರದ ಸವಾಲುಗಳಿಗೆ ಕ್ರಿಯಾತ್ಮಕ ಪರಿಹಾರಗಳ ಕುರಿತು ಮಧ್ಯಾಂತರ ವರದಿ ಸಲ್ಲಿಸಿದರು.

ವರದಿಯಲ್ಲಿ ಸರಕಾರಿ ಶಾಲೆಗಳು ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆ, ಜನಪ್ರತಿನಿಧಿಗಳ ಶಾಲಾ ದತ್ತು ಸ್ವೀಕಾರ, ಮಕ್ಕಳ ಆರೋಗ್ಯ ಸಹಿತ ಹಲವು ವಿಚಾರಗಳ ಬಗ್ಗೆ ಉಲ್ಲೇಖೀಸಿದ್ದು, ಸುಮಾರು 18 ಸಲಹೆಗಳನ್ನು ನೀಡಿದ್ದಾರೆ.

ವರದಿ ಸಲ್ಲಿಸಿದ ಬಳಿಕ “ಉದಯವಾಣಿ’ ಜತೆಗೆ ಮಾತನಾಡಿದ ಅವರು, ಯೋಗ ಮತ್ತು ಧ್ಯಾನವು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ 5ನೇ ತರಗತಿ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕಡ್ಡಾಯಗೊಳಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನೂರಾರು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿವೆ. ಅವುಗಳನ್ನು ಸರಕಾರಿ ಶಾಲೆಗಳೊಂದಿಗೆ “ಟ್ಯಾಗ್‌’ ಮಾಡಬೇಕು. ಪ್ರತಿ 300 ಶಾಲೆಗಳಿಗೊಂದು ವೈದ್ಯಕೀಯ ಕಾಲೇಜು ಉಸ್ತುವಾರಿ ಇರಬೇಕು. ಅಲ್ಲಿನ ವಿದ್ಯಾರ್ಥಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಅದಕ್ಕೆ ಸಂಬಂಧಿಸಿದ ದಾಖಲೀಕರಣ ಆಗಬೇಕು ಎಂದು ಸಲಹೆ ಮಾಡಿರುವುದಾಗಿ ತಿಳಿಸಿದರು.

Advertisement

ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಸಲಹೆ ಮಾಡಿದ್ದು, ಇದಕ್ಕಾಗಿ ರಾಜ್ಯದ ಎಲ್ಲ ಐಟಿ ಕಂಪೆನಿಗಳ ಮುಖ್ಯಸ್ಥರ ಸಭೆ ಕರೆಯಬೇಕು. ಆಯಾ ಕಂಪೆನಿಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಸಿಎಸ್‌ಆರ್‌ ನಿಧಿಯನ್ನು ಐಟಿ ಕಂಪೆನಿಗಳ ಮುಖ್ಯಸ್ಥರನ್ನು ಒಳಗೊಂಡ ಉಪ ಸಮಿತಿ ರಚಿಸಿ, ಅಲ್ಲಿಂದಲೇ ವಿನಿಯೋಗವಾಗುವಂತೆ ಮಾಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಪ್ರತಿ ಮಗುವಿನ ಬೆಳವಣಿಗೆ ಮೇಲೆ ನಿಗಾ ಇಡಲು ಮೆಂಟರಿಂಗ್‌ ವ್ಯವಸ್ಥೆ ಅಳವಡಿಸಬೇಕು. 20 ಮಕ್ಕಳಿಗೊಬ್ಬ ಮೆಂಟರ್‌ ಇರಬೇಕು. ಅವರು ಮಗುವಿನ ಕಲಿಕೆ, ಆರ್ಥಿಕ ಸ್ಥಿತಿಗತಿ, ಕ್ರೀಡೆ ಹೀಗೆ ಪ್ರತಿಯೊಂದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿರುವುದಾಗಿ ತಿಳಿಸಿದರು.

ಸರಕಾರಿ ಶಾಲೆ ಮೂಲಸೌಕರ್ಯದಲ್ಲಿ ಸುಧಾರಣೆ
ಹಿಂದಿನ ಮೂರು ವರ್ಷಗಳಲ್ಲಿ ರಾಜ್ಯದ 2 ಸಾವಿರ ಸರಕಾರಿ ಶಾಲೆಗಳ ಮೂಲಸೌಕರ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಇನ್ನೂ 25 ಸಾವಿರಕ್ಕೂ ಅಧಿಕ ಶಾಲೆಗಳ ಸ್ಥಿತಿ ಸುಧಾರಿಸಬೇಕಿದೆ ಎಂದು ದೊರೆಸ್ವಾಮಿ ವರದಿಯಲ್ಲಿ ತಿಳಿಸಲಾಗಿದೆ. ಪ್ರತಿ ಶಾಸಕರು ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು 2020-21ರಲ್ಲಿ ಅನುದಾನ ಒದಗಿಸಲಾಗಿತ್ತು. ಅದರಂತೆ ಕೆಲವು ಶಾಸಕರು ದತ್ತು ಪಡೆದು ಉತ್ತಮ ಕೆಲಸ ಮಾಡಿದ್ದಾರೆ. ಜತೆಗೆ ಕೆಲವು ಸಂಘ-ಸಂಸ್ಥೆಗಳು, 30 ವಿಶ್ವವಿದ್ಯಾನಿಲಯಗಳು, ಖಾಸಗಿ ವ್ಯಕ್ತಿಗಳು ಹತ್ತಾರು ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದಾರೆ. ವಿವಿಗಳು 450ಕ್ಕೂ ಅಧಿಕ ಶಾಲೆಗಳ ಗುಣಮಟ್ಟ ಹೆಚ್ಚಿಸಿದ್ದಾರೆ ಎಂದು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next