Advertisement

ಯೋಗಕ್ಕೆ ಗಡಿಯಿಲ್ಲ, ತಡೆಯೂ ಇಲ್ಲ

12:30 AM Jun 21, 2018 | |

ಹೇಯಂ ದುಃಖಾಂ ಅನಾಗತಂ ಅಂದರೆ ಮುಂದೆ ಬರುವ ದುಃಖವನ್ನು ತಡೆಹಿಡಿ ಅಥವಾ ಭವಿಷ್ಯದ ಅನಾರೋಗ್ಯವನ್ನು ಈಗಲೇ ತಡೆ… ಇದು ಯೋಗಶಾಸ್ತ್ರದಲ್ಲಿ ಪತಂಜಲಿ ಹೇಳಿರುವ ಮೂಲಸೂತ್ರ. ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿದರೆ ಮುಂದೆ ಬರುವ ವಿಪತ್ತನ್ನು ಮೊದಲೇ ತಡೆಹಿಡಿಯಬಹುದು, ನಂತರ ಪ್ರಾಯಶ್ಚಿತ್ತ ಪಡಬೇಕಿಲ್ಲ. ಇದು ಯೋಗವು ಜಗತ್ತಿಗೆ ಸಾರುವ ಮಂತ್ರವಾಗಿದೆ.

Advertisement

ವಿಶ್ವದೆಲ್ಲೆಡೆ ಯೋಗ ದಿನದ ನಾಲ್ಕನೆಯ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ನಾಲ್ಕು ವರುಷಗಳ ಹಿಂದಿನವರೆಗೆ ಭಾರತೀಯರಿಗೂ ಸೇರಿದಂತೆ ವಿಶ್ವದಾದ್ಯಂತ ಇದರ ಮಹತ್ವದ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ತಿಳಿದಿದ್ದರೂ ನಾವು ಯೋಗವನ್ನು ಕಬ್ಬಿಣದ ಕಡಲೆ ಮಾಡಿದ್ದೆವು. ಆದರೆ “ಯೋಗ ದಿನ’ ಆರಂಭವಾದಾಗ ಆ ಒಂದು ದಿನದಲ್ಲೇ ಅದಕ್ಕೆ ಎಷ್ಟು ಮಹತ್ವ ದಕ್ಕಿತ್ತೆಂದರೆ, ತಮ್ಮ ಇಷ್ಟದ ಕಲಾವಿದ, ನೆಚ್ಚಿನ ಸಿನಿಮಾ ನಟ, ಕ್ರೀಡಾಪಟು ಆ ದಿನದಂದು ಯೋಗ ಮಾಡುವುದನ್ನು ಕಂಡು ಅವರ ಅಭಿಮಾನಿಗಳು ತಮ್ಮನ್ನೂ ಅದರಲ್ಲಿ ತೊಡಗಿಸಿಕೊಂಡರು. ತದನಂತರ ಅದರ ಉಪಯೋಗವನ್ನು ಮನಗಂಡು ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿಸಿಕೊಂಡವರ ಸಂಖ್ಯೆಯೂ ಅಧಿಕವಾಗಿದೆ ಮತ್ತು ಅಧಿಕವಾಗುತ್ತಿದೆ. ಯೋಗದ ಪ್ರಾಮುಖ್ಯತೆಯನ್ನು ಪಸರಿಸುವಲ್ಲಿ ಮಾಧ್ಯಮಗಳು, ಪತ್ರಿಕೆಗಳು ಅಪಾರವಾದ ಪಾತ್ರವಹಿಸಿವೆ. “ಯೋಗ ಕೀಪ್ಸ್‌ ಫಿಟ್‌’ ಎಂಬ ಮಂತ್ರದೊಂದಿಗೆ ಆರಂಭವಾದ ಯೋಗ ದಿನ ನಾಲ್ಕು ವರುಷಗಳಲ್ಲಿ “ಯೋಗದಿಂದ ಯೋಗಕ್ಕೆ’ ಎನ್ನುವ ಸಂದೇಶ ಸಾರುವ ಧ್ಯೇಯವಾಕ್ಯವಾಗಿ, ಅದು ಭಾರತದ ಪಾಲಿಗೆ ಲಭಿಸಿದ ಕೀರ್ತಿಪತಾಕೆ ಎಂದರೂ ತಪ್ಪಾಗಲಾರದು. 

ಪಸರಿಸಿದ ಪರಿ
ಯೋಗ ಮೊದ ಮೊದಲು ನಗರಗಳಲ್ಲಿ  ಅಲ್ಲೊಂದು ಇಲ್ಲೊಂದು ತರಬೇತಿ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಒಂದಿಷ್ಟು ಮಂದಿ ಅದನ್ನು ಕಲಿಯುತ್ತಿದ್ದರು ಬಿಟ್ಟರೆ ಹೆಚ್ಚಿನ ಜನರಿಂದೇನೂ ಅದಕ್ಕೆ ಅಷ್ಟು ಪ್ರಾಶಸ್ತ್ಯ ಸಿಕ್ಕಿರಲಿಲ್ಲ. ನಮಗಿಂತಲೂ ಹೆಚ್ಚಾಗಿ ವಿದೇಶಗಳಲ್ಲೇ ಯೋಗವು ಜನಮನ್ನಣೆ ಪಡೆದಿತ್ತು ಎಂದರೂ ತಪ್ಪಾಗಲಾರದು. ಐರೋಪ್ಯ ರಾಷ್ಟ್ರಗಳು, ಅಮೆರಿಕ ಮೊದಲಾದ ಕಡೆಗಳಲ್ಲಿ ಎರಡು ಮೂರು ದಶಕಗಳ ಹಿಂದೆಯೇ ಯೋಗದ ಮಹತ್ವವನ್ನು ಜನರು ಅರಿತಿದ್ದರು. ಈಗಂತೂ ದೇಶ-ವಿದೇಶಗಳಲ್ಲಿ ಯೋಗ ತರಬೇತಿ ಕೇಂದ್ರಗಳ ಸಂಖ್ಯೆ ಅಧಿಕವಾಗಿದೆ. ತರಬೇತಿ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. 

ಒಟ್ಟಲ್ಲಿ ಯೋಗ ದಿನಾಚರಣೆಯಿಂದಾಗಿ ಅದರ ಬಗ್ಗೆ ಒಂದು ಟ್ರೆಂಡ್‌ ಸೃಷ್ಟಿಯಾಗಿಬಿಟ್ಟಿದೆ. ಜನಸಾಮಾನ್ಯರು ಈಗ ಇದನ್ನು ತಮ್ಮ ಜೀವನದ ಒಂದು ಭಾಗವಾಗಿ ಕಾಣುತ್ತಿದ್ದಾರೆ ಹಾಗೂ ಅದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ನಗರಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಯೋಗ ಸೆಂಟರ್‌ಗಳು ತಲೆ ಎತ್ತಿರುವುದು ಸಂತಸದ ವಿಷಯ. ಯೋಗವು ನಮಗೆ ರೋಗದಿಂದ ಮುಕ್ತಿ ಕೊಡುತ್ತದೆ ಹಾಗೂ ಶರೀರ-ಮನಸ್ಸಿನ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ ಎನ್ನುವುದನ್ನು ಸಂಶೋಧನೆಗಳೂ ದೃಢೀಕರಿಸಿವೆ. ವಿಶೇಷವೆಂದರೆ ಯೋಗವನ್ನು ಪೂರ್ಣಾವಧಿ ಉದ್ಯೋಗವಾಗಿಯೂ ಆಯ್ಕೆ ಮಾಡುವವರನ್ನು ಇಂದು ಹೇರಳವಾಗಿ ಕಾಣಬಹುದು. ಹಿಂದೆಲ್ಲ ಯೋಗಕ್ಕೆ ಸಂಬಂಧಪಟ್ಟ ಉನ್ನತ ಪದವಿಗಳು ಅಲಭ್ಯವಿದ್ದವು. ಇಂದು ಈ ವಿಷಯದಲ್ಲಿ ಮಾಸ್ಟರ್‌ ಡಿಗ್ರಿಗಳು, ಪಿಎಚ್‌ಡಿ ಹಾಗೂ ಇನ್ನಿತರ ಕೋರ್ಸುಗಳು ಲಭ್ಯವಿದ್ದು ಇದನ್ನು ಆಯ್ಕೆ ಮಾಡಿಕೊಂಡವರ ಜೀವನೋಪಾಯಕ್ಕಿರುವ ಹಾದಿಯೂ ಸುಗಮವಾಗಿದೆ.

ಇತ್ತೀಚಿನ ದಿನಗಳಲ್ಲಿ ಯೋಗದ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವುದೇನೋ ನಿಜ. ಆದರೆ ಮತ್ತೂಂದು ಮಹತ್ತರ ಕೆಲಸ ನಮ್ಮಿಂದ, ಸರ್ಕಾರಗಳಿಂದ ಆಗಬೇಕಿದೆ. ಭಾರತದ ಮೂಲೆ ಮೂಲೆಗೂ ಈ ವಿದ್ಯೆಯನ್ನು ತಲುಪಿಸುವ ಜವಾಬ್ದಾರಿ ಆಡಳಿತದ ಮೇಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಯೋಗವೀಗ ನಗರಗಳಲ್ಲೇ ಸದ್ದು ಮಾಡುತ್ತಿದೆ, ಇದನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಬೃಹತ್‌ ಕೆಲಸ ಬಾಕಿ ಇದೆ. ಪ್ರತಿ ಗ್ರಾಮಗಳಲ್ಲಿ ವಾರದಲ್ಲೊಂದು ತರಬೇತಿ ಕ್ಲಾಸ್‌ ಗಳು ನಡೆಯುವಂತಾಗಬೇಕು, ಅದಕ್ಕೆ ಸಂಬಂಧಪಟ್ಟ ಕಾರ್ಯಾಗಾರಗಳು, ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು. ಈ ವಿಷಯದಲ್ಲಿ ಸರಕಾರದ ಮೇಲೂ ಅಧಿಕ ಜವಾಬ್ದಾರಿಯಿದೆ. ಆರೋಗ್ಯವಂತ ಪೀಳಿಗೆಯನ್ನು ಸಜ್ಜುಗೊಳಿಸಬೇಕೆಂದರೆ ಯೋಗ ತರಬೇತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ವೃತ್ತಿಪರವಾಗಿ ಯೋಗಾಧ್ಯಯನ ನಡೆಸಿದ ಶಿಕ್ಷಕರನ್ನು ಶಾಲೆಗಳಲ್ಲಿ ಪೂರ್ಣಕಾಲಿಕವಾಗಿ ನೇಮಿಸಬೇಕು. ಆಗ ಯೋಗ ಹಳ್ಳಿ ಹಳ್ಳಿಗೂ ತಲಪುವಲ್ಲಿ ಯಶಸ್ವಿಯಾಗುತ್ತದೆ ಮತ್ತು ಜನಜೀವನದ ಭಾಗವಾಗುತ್ತದೆ. ಈಗ ಹೆಸರಿಗೆ ಮಾತ್ರ ಶಾಲೆಗಳಲ್ಲಿ ಐಚ್ಛಿಕ ವಿಷಯವಾಗಿ ಇದು ರೂಪುಗೊಂಡಿದೆ. ಇದು ಬರೀ ಹೆಸರಿಗಷ್ಟೇ ಸೀಮಿತವಾಗಿಬಿಟ್ಟರೆ ವಿಶ್ವಕ್ಕೆ ನಾವು ಕೊಟ್ಟ ಈ ಕೊಡುಗೆಗೆ ನಾವೇ ಎಷ್ಟು ಗೌರವ ಕೊಟ್ಟಂತಾಗುತ್ತದೆ? 

Advertisement

ಯೋಗ ಅನ್ನುವುದು ಒಂದು ಧರ್ಮಕ್ಕೆ ಸೀಮಿತವಾಗಿ ಈಗ ಉಳಿದಿಲ್ಲ. ತಾಮಸಿಕ ಮನೋಗುಣದವರನ್ನು ಸಾತ್ವಿಕರನ್ನಾಗಿ ಮಾಡುವುದಕ್ಕೆ ಯೋಗ ಉಪಯೋಗಕಾರಿ. ವ್ಯಕ್ತಿಗೆ ಒಂದು ಸಲ ಸಾತ್ವಿಕ ಸ್ವಭಾವ ದಕ್ಕಿತೆಂದರೆ ಕೂಡಲೇ ಆತ ತನ್ನನ್ನು ದೈಹಿಕವಾಗಿ-ಮಾನಸಿಕವಾಗಿ ಸಮತೋಲನದಲ್ಲಿಡುವುದನ್ನು ಕಲಿಯುತ್ತಾನೆ. ಯೋಗವು ಸಮಾಜದ ಅವಿಭಾಜ್ಯ ಅಂಗವಾಗಿಬಿಟ್ಟರೆ ಅದು ಸೃಷ್ಟಿಸುವ ಸಾತ್ವಿಕ ಮನೋಭಾವದಿಂದಾಗಿ ಕಳಂಕ ರಹಿತ, ಅಪರಾಧ ರಹಿತ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ.

ಗುರುವಿದ್ದರೇನೇ ಒಲಿಯುತ್ತದೆ ಯೋಗ
ಭಾರತೀಯ ಗುರುಕುಲ ಪದ್ಧತಿಯಲ್ಲಿ ಅನ್ಯ ಶಾಸ್ತ್ರಗಳಂತೆ ಯೋಗವೂ ಒಂದು ಅಧ್ಯಯನ ವಿಷಯವಾಗಿತ್ತು. ಆಗೆಲ್ಲ ಗುರುವಿರದೇ ಯಾರೂ ಯೋಗವನ್ನು ಕಲಿಯುತ್ತಿರಲಿಲ್ಲ. ಈಗಲೂ ಅಷ್ಟೆ, ಯೋಗವನ್ನು ಕಲಿಯುವಾಗ ಗುರುಗಳು ಅಥವಾ ತರಬೇತುದಾರರಿಲ್ಲದೆ ಕಲಿಯಬಾರದು. ಇಂದು ಕೆಲವು ಜನರು ತರಬೇತಿಗೆ ಹೋಗಿ ಕಲಿಯಲು ಅನಾನುಕೂಲವಾಗುತ್ತದೆ ಎಂದು ಸಿಡಿ, ಇಲ್ಲವೇ ಅಂತಜಾìಲದಲ್ಲಿ ವಿಡಿಯೋಗಳನ್ನು ನೋಡಿ ಅದನ್ನೇ ತರಬೇತಿ ಎಂದು ಪರಿಗಣಿಸುತ್ತಾರೆ. ಆದರೆ ಹೀಗೆ ಅಂತರ್ಜಾಲದಿಂದ ಕಲಿಯುವ ಯೋಗಕ್ಕಿಂತ, ಯೋಗ ಮಾಡದೇ ಸುಮ್ಮನೇ ಕುಳಿತುಕೊಳ್ಳುವುದು ಎಷ್ಟೋ ಉತ್ತಮ! ಇದಕ್ಕೆ ಕಾರಣವಿಲ್ಲವೆಂದಲ್ಲ. ಉದಾಹರಣೆಗೆ ಯಾರಿಗಾದರೂ ಬೆನ್ನು ನೋವಿದೆ ಎಂದುಕೊಳ್ಳಿ. ಆಗ ಅವರು ಯೂಟ್ಯೂಬ್‌ ನೋಡಿ ಯಾರೋ ಹೇಳಿದ ಭುಜಂಗಾಸನವನ್ನು ಮಾಡಿದರೆ ಏನಾಗುತ್ತದೆ? ಬೆನ್ನು ನೋವು ಉಪಶಮನದ ಬದಲು ಹೆಚ್ಚಾಗಲು ಅನುವು ಮಾಡಿಕೊಟ್ಟಂತಾಗುತ್ತದೆ. ಸಾಮಾನ್ಯವಾಗಿ ಹೀಗೆ ಅಂತರ್ಜಾಲದಲ್ಲಿ ನೋಡಿದ್ದನ್ನು ಮಾಡಲು ಹೋಗಿ ನೋವು ತಂದುಕೊಳ್ಳುವವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಯೋಗವನ್ನೇ ದೂರಲು ಪ್ರಾರಂಭಿಸುತ್ತಾರೆ! ಇದರಿಂದಾಗಿ ಯೋಗಕ್ಕೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಉತ್ತಮ ತರಬೇತುದಾರರ ಬಳಿ ಹೋಗಿ ತರಬೇತಿ ಪಡೆಯುವುದು ಮುಖ್ಯ. 

ಯೋಗ ಗುರುವಾಗಿ ನನ್ನ ಅನುಭವ
ಹತ್ತು ವರುಷಗಳ ಹಿಂದೆ ಯೋಗದಲ್ಲಿ ಮಾಸ್ಟರ್‌ ಡಿಗ್ರಿ ಪಡೆದು ಹೊರ ಬಂದಾಗ ಎಲ್ಲರೂ ಎದುರಿಟ್ಟ ಪ್ರಶ್ನೆಯೊಂದೇ: “”ಯೋಗ ಕಲಿತು ಏನು ಮಾಡುವೆ?”  ಅದುವೇ ಮುಂದೆ ನನ್ನನ್ನು ವಿದೇಶದಲ್ಲಿ ನೆಲೆನಿಲ್ಲುವಂತೆ ಮಾಡಿತು. ಭಾರತದಲ್ಲಿ ಅಷ್ಟು ಮಾನ್ಯತೆ ಸಿಗದಿದ್ದರೂ ಯೋಗಕ್ಕೆ ವಿದೇಶದಲ್ಲಿ ಸಿಗುವ ಗೌರವ ಕಂಡು  ಖುಷಿಪಟ್ಟೆ. ಉತ್ತಮ ಜೀವನೋಪಾದಿಯಾಗಿ ಮಾತ್ರವಲ್ಲ, ನೆಮ್ಮದಿಯ ಕಸುಬಾಗಿಯೂ ಯೋಗ ನನ್ನ ಕೈಹಿಡಿದಿದೆ. ವಿದೇಶಿಯರ ಪ್ರೀತಿ ಕಂಡು ನಾನು ಆಯ್ಕೆ ಮಾಡಿಕೊಂಡ ದಾರಿ ಸರಿಯಿದೆ ಎನ್ನುವುದು ಖಾತ್ರಿಯಾಯಿತು. ಯೋಗ ನನಗೆ ಹೇರಳವಾಗಿ ಜನರ ಪರಿಚಯ ಮಾಡಿಸಿತು. ಅಮೆರಿಕ, ಆಫ್ರಿಕಾ, ಐರೋಪ್ಯ ರಾಷ್ಟ್ರಗಳು, ಹಾಗೂ ಭೂಪಟದಲ್ಲಿ ಹೆಸರೇ ಕಾಣಿಸದ ಸ್ಥಳಗಳ ಜನರು ಪರಿಚಯವಾದರು. ನನ್ನ ಬಗ್ಗೆ ಮತ್ತು ಯೋಗದ ಬಗ್ಗೆ ಅವರ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ವಿಸ್ತಾರವಾಗಿ ಬರೆದರು. ಆ ಮೂಲಕ ಯೋಗದ ಮಹತ್ವವನ್ನು ಸಾರಿದ್ದಾರೆ ಎನ್ನುವುದೇ ಸಂತಸದ ವಿಷಯ.

ಸುಮಾರು ಹತ್ತುಸಾವಿರ ಶಿಷ್ಯರನ್ನು ಹೊಂದಿರುವ ನಾನಿಂದು ಯೋಗದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದೇನೆ. ಏನಿಲ್ಲವೆಂದರೂ 100 ದೇಶದ ಪ್ರಜೆಗಳು ನನ್ನ ಶಿಷ್ಯ ಶಿಷ್ಯೆಯಾಯರಾಗಿದ್ದಾರೆ. ಅವರಲ್ಲಿ ಐದು ವರುಷದವರಿಂದ ಹಿಡಿದು 90 ವರುಷ ವಯಸ್ಸಿನವರೆಗಿನವರೂ ಇದ್ದಾರೆ. ಯೋಗ ತರಬೇತಿ ನೀಡುತ್ತಾ ನಾನು ಕಂಡುಕೊಂಡ ಒಂದು ಮಹತ್ತರ ಅಂಶವೆಂದರೆ ಯೋಗಕ್ಕೆ ಭಾಷೆಯ, ದೇಶದ ಗಡಿಯಿಲ್ಲ. ಅದಕ್ಕೆ ಯಾವುದೇ ತಡೆಯೂ ಇಲ್ಲ.
(ಲೇಖಕರು ಮಾಲ್ಡೀವ್ಸ್‌ನಲ್ಲಿ ಯೋಗ ತರಬೇತುದಾರರು)

 ಹರೀಶ್‌ ಭಟ್‌ ಕೇವಳ

Advertisement

Udayavani is now on Telegram. Click here to join our channel and stay updated with the latest news.

Next