Advertisement

ಆರೋಗ್ಯಕ್ಕೆ ಯೋಗ ಸಹಕಾರಿ

01:02 PM Jun 11, 2017 | Team Udayavani |

ದಾವಣಗೆರೆ: ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ. ವಸಂತ ರಸ್ತೆಯಲ್ಲಿರುವ ವಿಶೇಷ ಉಪ ಕಾರಾಗೃಹದಲ್ಲಿ ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾಡಳಿತದಿಂದ ವಿಶ್ವ ಯೋಗ ದಿನಾಚರಣೆ ನಿಮಿತ್ತ ಹಮ್ಮಿಕೊಂಡ 10 ದಿನಗಳ ವಿಶೇಷ ಯೋಗ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ, ಮಾತನಾಡಿದರು.

Advertisement

ದೇಹ, ಮನಸ್ಸಿನ ಆರೋಗ್ಯ ಕಾಪಾಡುವಂತಹ ವ್ಯಾಯಾಮ ಅಂದರೆ ಯೋಗ ಒಂದೇ ಆಗಿದೆ. ಹಾಗಾಗಿ ಇದನ್ನು ಎಲ್ಲರೂ ಪ್ರತನಿತ್ಯ ಅಭ್ಯಾಸ ಮಾಡಬೇಕು ಎಂದರು. ನಾವು ನಮ್ಮ ಅಭಿವೃದ್ಧಿಯನ್ನು ಹೊರಗಿನ ಪ್ರಪಂಚ, ಇತರರನ್ನು ನೋಡಿ ಅಳೆಯುವ ಬದಲು ನಮ್ಮೊಳಗೇ ಇರುವ ನಮ್ಮ ಆತ್ಮದ ಮೂಲಕ ಅರಿಯಬೇಕು. ಅದರ ಸಾಮರ್ಥ್ಯ ತಿಳಿದರೆ ಇತರರಿಗಿಂತ ಉತ್ತಮ ಸ್ಥಿತಿಯ ಜೀವನ ಕಟ್ಟಿಕೊಳ್ಳಬಹುದು.

ಆ ಕಾರ್ಯಕ್ಕೆ ಯೋಗ, ಧ್ಯಾನ ಅತೀ ಅವಶ್ಯಕ. ಹೊರಗಿನ ಜಂಜಡಗಳಿಂದ ನಮ್ಮ ಮನಸ್ಸು ನಮ್ಮನ್ನು ಮರೆತಿರುತ್ತದೆ. ಹೊರ ಜಗತ್ತಿನ ಪ್ರಭಾವಕ್ಕೆ ಒಳಗಾಗಿರುತ್ತದೆ. ಯೋಗಾಭ್ಯಾಸದ ವೇಳೆ ನಮ್ಮ ಸಾಮರ್ಥ್ಯದ ದರ್ಶನ ನಮಗಾಗುತ್ತದೆ ಎಂದು ಅವರು ತಿಳಿಸಿದರು. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಯಾವ ಕೆಲಸ ಮಾಡುತ್ತಾನೆ ಎನ್ನುವುದು ಗೊತ್ತಿರಬೇಕು.

ಆದರೆ, ಇಂದಿನ ಒತ್ತಡದ ಜಗತ್ತಿನಲ್ಲಿ ಎಷ್ಟೋ ಕೆಲಸಗಳನ್ನು ನಾವ ಮನಸಾರೆ ಮಾಡುವುದೇ ಇಲ್ಲ. ಕೆಲಸದಲ್ಲಿ ಪೂರ್ಣ ಪ್ರಮಾಣದ ತೊಡಗುವಿಕೆ ಇಲ್ಲವಾಗಿದೆ. ಅದನ್ನು ಗಳಿಸಬೇಕಾದರೆ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಮನಸ್ಸು ಮತ್ತು ದೇಹ ಸೇರಿ ಮಾಡುವ ಕ್ರಿಯೆಗೆ ಚೈತನ್ಯ ಬರುತ್ತದೆ. ಜೊತೆಗೆ ಕೆಲಸದಲ್ಲಿನ ಕ್ರಿಯಾಶೀಲತೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. 

ವ್ಯಕ್ತಿಯ ಸಂತೋಷದ ಕ್ಷಣಗಳು ನಮ್ಮಲಿಯೇ ಇದ್ದು, ಅದನ್ನು ಮರೆಮಾಚುವ ಪ್ರಯತ್ನ ಮಾಡಲಾಗುತ್ತಿದೆ. ನಾವು ನಮ್ಮಲ್ಲಿಯೇ ಪ್ರಪಂಚ ಸೃಷ್ಟಿಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕೇವಲ ಆಸ್ತಿ, ಅಂತಸ್ತು ಗಳಿಕೆ ಮೂಲಕ ಸಂತೋಷ ಅನುಭವಿಸಲು ಮುಂದಾದರೆ ಅದು ಸಿಗದು. ಹಣ, ಸಂಪತ್ತು ಸಂತೋಷ ನೀಡುವುದರ ಬದಲಿಗೆ ಮತ್ತೂಷ್ಟು ಮನಸ್ಸಿಗೆ ಕಿರಿಕಿರಿ ಉಂಟು ಮಾಡಲಿವೆ ಎಂದು ಅವರು ಕಿವಿಮಾತು ಹೇಳಿದರು. 

Advertisement

ಇನ್ನು ಉಪ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಈ ಯೋಗ ಶಿಬಿರ ವಿಶೇಷ ಅನುಭವ ನೀಡಲಿದೆ. ನಿಮ್ಮ ಮಾನಸಿಕ ಜಂಜಡ, ಗೊಂದಲ, ತಪ್ಪು, ಸೇಡಿನ ಮನೋಭಾವ ದೂರಮಾಡಲು ಯೋಗ ಸೂಕ್ತ ಔಷಧ. ಈ 10 ದಿನಗಳಲ್ಲಿ ನಿಮ್ಮಲ್ಲಿರುವ ನಿಜವಾದ ಸಾಮರ್ಥ್ಯದ ಅರಿವು ನಿಮಗೇ ತಿಳಿಯಲಿದೆ. ಜಿಲ್ಲಾ ಯೋಗ ಒಕ್ಕೂಟ, ಆಯುಷ್‌ ಇಲಾಖೆ ಕಾರಾಗೃಹದಲ್ಲಿ ಏರ್ಪಡಿಸಿರುವ ಈ ಶಿಬಿರ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು. 

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಮಾತನಾಡಿ, ಉಪ ಕಾರಾಗೃಹದಲ್ಲಿ ವಿಚಾರಾಣಾಧೀನ ಕೈದಿಗಳಿಗೆ ಯೋಗ ಶಿಬಿರ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಯೋಗ ಅಂದರೆ ದೇಹ ಮನಸ್ಸನ್ನು ಒಗ್ಗೂಡಿಸುವ ಕ್ರಿಯೆ. ಯೋಗದಿಂದ ಬರೀ ದೇಹದ ಆರೋಗ್ಯದ ಸುಧಾರಣೆ ಜತೆಗೆ ಮನಸ್ಸಿನ ಸಮತೋಲನ ಸಹ ಆಗಲಿದೆ. ರೋಗ ಮುಕ್ತ ಜೀವನ ನಡೆಸಲು ಯೋಗ ಅತೀ ಉತ್ತಮ ಮಾರ್ಗೋಪಾಯ ಆಗಿದೆ ಎಂದರು. 

ಉಪ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ್‌, ಯೋಗ ಶಿಕ್ಷಕ ಮಹಾದೇವಪ್ಪ, ಜಿಲ್ಲಾ ಯೋಗ ಒಕ್ಕೂಟದ ಕಾರ್ಯದರ್ಶಿ ವಾಸುದೇವ್‌ ರಾಯ್ಕರ್‌, ಡಾ| ಶಂಕರ್‌ ಗೌಡ, ಜಿಲ್ಲಾ ಆಯುಷ್‌ ಅಧಿಕಾರಿ ಸಿದ್ದೇಶ್‌, ರಾಜು ಬದ್ದಿ, ಪರಶುರಾಮ್‌ ಇತರರು ವೇದಿಕೆಯಲ್ಲಿದ್ದರು. ಶಿಬಿರದಲ್ಲಿ ಸ್ವತಃ ಜಿಲ್ಲಾಧಿಕಾರಿ ರಮೇಶ್‌ ಯೋಗಾಭ್ಯಾಸ ಮಾಡಿದ್ದು ಶಿಬಿರಾರ್ಥಿಗಳಿಗೆ ಮುದ ನೀಡಿತು.  

Advertisement

Udayavani is now on Telegram. Click here to join our channel and stay updated with the latest news.

Next