Advertisement

ಸಹಜ ಉಸಿರಾಟ, ಮನಸ್ಸು ಶಾಂತಗೊಳಿಸುವ ಹಠ ಯೋಗ

02:33 AM Jun 13, 2021 | Team Udayavani |

ಮೊಬೈಲ್‌, ಕಂಪ್ಯೂಟರ್‌, ಟಿವಿ ಮೊದಲಾದವುಗಳ ಅತಿಯಾದ ಬಳಕೆಯಿಂದ ಮಾನಸಿಕ ಅಶಾಂತಿ ಹೆಚ್ಚಾಗುತ್ತಿದೆ ಮಾತ್ರವಲ್ಲ ಕಣ್ಣಿನ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ. ಮನಸ್ಸಿನ ಮೇಲಾಗುವ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸು ಶಾಂತಗೊಳಿಸಿ, ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಿ, ಏಕಾಗ್ರತೆಯನ್ನು ಹೆಚ್ಚಿಸುವ ಹಠ ಯೋಗದ ಒಂದು ಕ್ರಿಯೆ ತ್ರಾಟಕ. ಇದನ್ನು ನಿತ್ಯವೂ ಎರಡು ಮೂರು ನಿಮಿಷ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಒತ್ತಡ ನಿವಾರಣೆಯಾಗುವುದು.

Advertisement

ತಿಳಿದಿರಲಿ
ತ್ರಾಟಕ ಕ್ರಿಯೆಯನ್ನು ಮುಂಜಾನೆ ಶುಚಿಯಾಗಿ ಖಾಲಿ ಹೊಟ್ಟೆಯಲ್ಲಿ ಕತ್ತಲಿನ ಕೋಣೆಯಲ್ಲೇ ಒಂದು ತುಪ್ಪದ ದೀಪವನ್ನಿರಿಸಿ ಅದರ ಎದುರು ಕುಳಿತು ಮಾಡಬೇಕು. ನಾವು ಕುಳಿತುಕೊಂಡಾಗ ನಮ್ಮ ಕಣ್ಣಿನ ನೇರಕ್ಕೆ ಇರುವಂತೆ ಸಣ್ಣದಾಗಿ ಉರಿಯುವ ದೀಪವನ್ನು ಸ್ಟೂಲ್‌ನ ಮೇಲೆ ಇರಿಸಬೇಕು. ದೀಪದಿಂದ ನಾಲ್ಕು ಫೀಟ್‌ ದೂರದಲ್ಲಿ ಯೋಗ ಮ್ಯಾಟ್‌ ಹಾಕಿ ಅದರ ಮೇಲೆ ಪದ್ಮಾಸನ, ಸುಖಾಸನ, ಅರ್ಧ ಪದ್ಮಾ ಸನದಲ್ಲಿ ಕುಳಿತು ತ್ರಾಟಕ ಕ್ರಿಯೆಯನ್ನು ಮಾಡಬೇಕು.

ಪ್ರಯೋಜನಗಳು
ತ್ರಾಟಕ ಕ್ರಿಯೆ ಮಾಡುವುದರಿಂದ ದೇಹ, ಮನಸ್ಸು ಶಾಂತವಾಗುತ್ತದೆ. ಉಸಿರಾಟ ಪ್ರಕ್ರಿಯೆಯನ್ನು ಸಹಜ ಸ್ಥಿತಿಯಲ್ಲಿ ಇರಿಸುತ್ತದೆ. ನರವ್ಯೂಹ ಸಮಸ್ಯೆಗಳು ನಿವಾ ರಣೆಯಾಗುತ್ತವೆೆ. ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆೆ. ಏಕಾಗ್ರತೆ, ಸಂವೇದನಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ತಲೆನೋವನ್ನು ದೂರ ಮಾಡುತ್ತದೆ. ಉತ್ತಮ ನಿದ್ರೆಗೆ ಇದು ಪೂರಕ. ದೇಹ, ಮನಸ್ಸಿನ ಒತ್ತಡದಿಂದಾಗುವ ಎಲ್ಲ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ನಿಯಮಗಳು
ತ್ರಾಟಕ ಕ್ರಿಯೆಯನ್ನು ಮಾಡಲು ಬೆಳಗ್ಗಿನ ಸಮಯ ಸೂಕ್ತ. ಏಕಾಗ್ರತೆ ವೃದ್ಧಿಗೆ ಬೆಳಗ್ಗಿನ ಸಮಯ ಸೂಕ್ತವಾಗಿರುತ್ತದೆ. ಈ ಸಂದರ್ಭದಲ್ಲಿ ಮೆದುಳಿಗೆ ಹೆಚ್ಚು ಕೆಲಸ ಕೊಡಬೇಕು. ಬೇರೆ ಎಲ್ಲ ಯೋಗ ಭಂಗಿಗಳನ್ನು ಊಟದ ಮೂರು ಗಂಟೆಯ ಅನಂತರ ಮಾಡಬಹುದು. ಆದರೆ ತ್ರಾಟಕ ಕ್ರಿಯೆಯನ್ನು ಮಾತ್ರ ಮುಂಜಾನೆಯೇ ಮಾಡುವುದು ಉತ್ತಮ. ಆಹಾರ ಸೇವನೆಯ ಬಳಿಕ ಉಸಿರಾಟ, ಮೆದುಳಿನ ಕಾರ್ಯದಲ್ಲಿ ವ್ಯತ್ಯಯಗಳಾಗುತ್ತವೆ. ಹೀಗಾಗಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಮಾಡಬೇಕು. ಈ ಭಂಗಿಗೆ ಸಡಿಲ ಉಡುಗೆ ಧರಿಸಬೇಕು ಮತ್ತು ನೆಲಕ್ಕೆ ಮ್ಯಾಟ್‌ ಹಾಕಿ ಅದರ ಮೇಲೆ ಕುಳಿತು ಮಾಡಬೇಕು. ಸ್ನಾನದ ಬಳಿಕ ಇದನ್ನು ಮಾಡುವುದು ಸೂಕ್ತ. ಯಾಕೆಂದರೆ ಮನಸ್ಸಿನ ಒತ್ತಡವನ್ನು ಸ್ನಾನದ ಮೂಲಕ ಕಡಿಮೆಗೊಳಿಸಬಹುದು.

ಮಾಡುವ ವಿಧಾನ
ಮೊದಲು ದೀಪದಿಂದ ನಾಲ್ಕು ಫೀಟ್‌ ದೂರದಲ್ಲಿ ಪದ್ಮಾಸನ ಹಾಕಿ ಕುಳಿತುಕೊಳ್ಳಿ. ಮನಸ್ಸನ್ನು ಶಾಂತಗೊಳಿಸಿ. ತದೇಕಚಿತ್ತದಿಂದ ಎದುರಿಗೆ ಇರುವ ದೀಪವನ್ನು ನೋಡಿ. ಕುತ್ತಿಗೆ, ಬೆನ್ನು ನೇರವಾಗಿರಲಿ. ಉಸಿರಾಟ ಪ್ರಕ್ರಿಯೆಯು ನಿಧಾನವಾಗಿರಲಿ. ಕಣ್ಣು ಮಿಟುಕಿಸದೆ ದೀಪವನ್ನು ದಿಟ್ಟಿಸುತ್ತ ಇರಬೇಕು. ಕಣ್ಣಲ್ಲಿ ನೀರು ಹರಿಯಲು ತೊಡಗಿದಾಗ ಕೈಗಳನ್ನು ನಿಧಾನವಾಗಿ ಕಣ್ಣುಗಳ ಮೇಲೆ ಇಡಿ. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ತೆರೆಯಿರಿ. ಬಳಿಕ 5 ನಿಮಿಷಗಳ ಕಾಲ ಶವಾಸನ ಮಾಡಬೇಕು. ಇನ್ನೊಂದು ವಿಧಾನದಲ್ಲಿ ಬಿಳಿ ಬೋರ್ಡ್‌ನ ಮೇಲೆ ಸಣ್ಣದೊಂದು ಕಪ್ಪು ಚುಕ್ಕೆಯನ್ನು ಬರೆದು ಅದನ್ನು ತದೇಕಚಿತ್ತದಿಂದ ನೋಡಬೇಕು. ಇದು ನಮ್ಮ ಗಮನ ಕೇಂದ್ರೀ ಕರಣ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ದೃಷ್ಟಿಯ ಅಸಮತೋಲನವನ್ನು ಸರಿಪಡಿಸುತ್ತದೆ.

Advertisement

ಯಾರು ಮಾಡಬಾರದು?
ತ್ರಾಟಕ ಕ್ರಿಯೆಯನ್ನು ಮಕ್ಕಳು ಮಾಡಬಾರದು. ಅಲ್ಲದೇ ಕಣ್ಣಿನಲ್ಲಿ ಊತ, ರಕ್ತ ಬರುವುದು, ಕಣ್ಣಿನಲ್ಲಿ ಒತ್ತಡ ಹೆಚ್ಚಾಗಿದ್ದಾಗ ತಜ್ಞರ ಸಲಹೆ ಇಲ್ಲದೇ ಇದನ್ನು ಮಾಡಲೇಬಾರದು.

– ಡಾ| ಅನ್ನಪೂರ್ಣಾ ಕೆ. ಆಚಾರ್ಯ, ಮುಖ್ಯಸ್ಥೆ, ಯೋಗ ವಿಭಾಗ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next