Advertisement
ತುಮಕೂರು ಜಿಲ್ಲೆಯಲ್ಲಿ ಹಲವು ಯೋಜನೆಗಳಿಗಾಗಿ ಕಾಮಗಾರಿಗಳು ಆರಂಭವಾಗಿವೆ. ತಾತ, ಮುತ್ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟ ರೈತರು, ಇಂದಿಗೂ ಪರಿಹಾರ ಹಣಕ್ಕಾಗಿ ಪರಿತಪಿಸುತ್ತಿರುವುದು ಸುಳ್ಳಲ್ಲ. ರಾಜ್ಯ ಸರ್ಕಾರ ನೀರಾವರಿ ಹಾಗೂ ಜನಸಾಮಾನ್ಯರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಎತ್ತಿನ ಹೊಳೆ ನೀರಾವರಿ ಯೋಜನೆಯನ್ನು ರೂಪಿಸಿದೆ.
Related Articles
Advertisement
ಮಾರುಗೊಂಡನಹಳ್ಳಿ ರೈತರಿಗೆ ಪರಿಹಾರ ನೀಡಿಲ್ಲ : ತಿಪಟೂರು ತಾಲೂಕಿನ ಕಸಬಾ ಹೋಬಳಿ ಮಾರುಗೊಂಡನಹಳ್ಳಿ ಗ್ರಾಮದ ನಾವು ಯೋಜನೆ ಬೇಗ ಮುಗಿದು ಜನರಿಗೆ ನೀರು ಸಿಗಲೆಂಬ ಆಶಯದಿಂದ ಕೇವಲ ಬೆಳೆ ಪರಿಹಾರ ಮಾತ್ರ ಪಡೆದು ಭೂಮಿ ಬಿಟ್ಟುಕೊಟ್ಟಿದ್ದೇವೆ. ಚಾಲನ್ ತೆಗೆದು ಕೆಲಸ ಮುಗಿಸಲಾ ಗಿದ್ದರೂ, ಸರ್ಕಾರ ಭೂ ಪರಿಹಾರಕ್ಕೆ ನೀಡಿರುವ ಹಣದಲ್ಲಿ ಈವರೆಗೂ ನಯಾಪೈಸೆ ನೀಡಿಲ್ಲ. ಕೂಡಲೆ ಜಿಲ್ಲಾಧಿಕಾರಿಗಳು ಪರಿಹಾರ ಹಣ ಕೊಡಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ಮಾರುಗೊಂಡನಹಳ್ಳಿ ಭೂ ಸಂತ್ರಸ್ತರಾದ ರಮೇಶ್ ಮತ್ತು ಸುರೇಶ್ ತಿಳಿಸಿದ್ದಾರೆ.
ಸ್ವಾಧೀನವಾದರೂ ಬೆಲೆ ನಿಗದಿ ಮಾಡಿಲ್ಲ : ಯೋಜನೆಗೆ ಒಳಪಡುವ ಭೂ ಸಂತ್ರಸ್ತ ರೈತರ ಜಮೀನುಗಳಿಗೆ ಯಾವ ಆಧಾರದಲ್ಲಿ, ಯಾವ ಲೆಕ್ಕಾಚಾರದಲ್ಲಿ ಬೆಲೆ ಕಟ್ಟಿ ಹಣ ನೀಡುವರು ಎಂಬ ಬಹುದೊಡ್ಡ ಗೊಂದಲವಿದೆ. ಜಿಲ್ಲಾಧಿಕಾರಿಗಳಾಗಲಿ, ಭೂಸ್ವಾಧೀನಾಧಿಕಾರಿಗಳಾಗಲಿ ಈವರೆಗೂ ಭೂಸಂತ್ರಸ್ತರ ಸಭೆಗಳನ್ನು ಗ್ರಾಮ ಮಟ್ಟದಲ್ಲಿ ಕರೆದು ಉತ್ತರ ನೀಡಿಲ್ಲ.
ಒಟ್ಟಾರೆ ಅಂತೆಕಂತೆಗಳ ಮಾತು ಕೇಳಿ ಜೋಪಾನ ಮಾಡಿದ್ದ ಜಮೀನುಗಳು ಎತ್ತಿನಹೊಳೆ ಯೋಜನೆಗೆ ಬಲಿಯಾಗುತ್ತಿವೆ. ಕೆಲ ರೈತರು ಗುತ್ತಿಗೆದಾರರಿಂದ ಬೆಳೆ ಪರಿಹಾರ ಮಾತ್ರ ಪಡೆದು ಯೋಜನೆ ತ್ವರಿತ ಗತಿಯಲ್ಲಿ ನಡೆಯಲಿ ಎಂದು ಭೂಮಿ ಬಿಟ್ಟುಕೊಟ್ಟಿದ್ದರೂ ಸರ್ಕಾರ ಭೂಸ್ವಾಧೀನ ಇಲಾಖೆಗೆ ನೀಡಿರುವ ಪರಿಹಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸರ್ವೆ ಮಾಡಿದ ಭೂಮಿಯಲ್ಲಿ ಬೆಳೆ ಬೆಳೆದರೆ ಯಾವಾಗ ಬಂದು ಕೆಲಸ ಪ್ರಾರಂಭಿಸುತ್ತಾರೋ ಎಂಬ ಭಯದಲ್ಲಿ ತಿಪಟೂರು ತಾಲೂಕಿನ ರೈತರಿದ್ದಾರೆ.
ಈ ಸಂಬಂಧ ಜನಪ್ರತಿನಿಧಿಗಳ ಬಳಿ ಕೇಳಿದರೆ ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮಾತನಾಡುತ್ತಾರೆ ಎಂಬುದು ರೈತರ ಆಕ್ರೋಶವಾಗಿದೆ.
ವಿವಿಧ ಕಾರಣಗಳಿಂದ ಎತ್ತಿನಹೊಳೆ ಯೋಜನೆಗೆ ಬೇಕಾಗಿರುವ ಜಮೀನುಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಭೂ ಸಂತ್ರಸ್ತರಿಗೆ ಸೂಕ್ತಪರಿಹಾರ ನೀಡಿ ಬಿಡಿಸಿಕೊಂಡು ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ. ಅವರು ಭೂಮಿಯನ್ನು ನಮ್ಮ ಇಲಾಖೆಗೆ ಬಿಡಿಸಿಕೊಟ್ಟ ತಕ್ಷಣವೇ ಕಾಮಗಾರಿ ಆರಂಭಕ್ಕೆ ಕಾಯಲಾಗುತ್ತಿದೆ. –ಶಶಾಂಕ್, ಎಇಇ, ಎತ್ತಿನಹೊಳೆ ಯೋಜನೆ ಎಂಜಿನಿಯರ್
-ವಿಶೇಷ ವರದಿ