ಮೈಸೂರು: ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಇನ್ನು ಆರು ತಿಂಗಳು, ವರ್ಷ ಬಿಟ್ಟು ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ, ಕೊಪ್ಪಳ, ಕೋಲಾರ ಭಾಗದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸುವಂತೆ ಯಾರೂ ಒತ್ತಾಯ ಮಾಡಿಲ್ಲ ಎಂದರು.
ಚಾಮುಂಡೇಶ್ವರಿಯಲ್ಲಿ ಪರ್ಯಾಯ ನಾಯಕನ ಕೂಗು ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಒಳ್ಳೆಯ ಬೆಳವಣಿಗೆ, ನಾನೇನು ಶಾಶ್ವತ ಅಲ್ಲವಲ್ಲ. ಪರ್ಯಾಯ ನಾಯಕ ಬೇಕಲ್ಲ್ವೇ ಎಂದರು. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಿಲ್ಲ ನಿಜ. ನಾನು ಸೋತ ಬಳಿಕ ಇಲ್ಲಿ ಸಭೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಮಮತಾಗೆ ಭಾರೀ ಹಿನ್ನಡೆ; ಅಧಿಕಾರಿ, ತಿವಾರಿ ಬಳಿಕ ತೃಣಮೂಲ ಕಾಂಗ್ರೆಸ್ ತೊರೆದ ಶಾಸಕ ದತ್ತಾ
ಪರಿಷತ್ ಕಾರ್ಯದರ್ಶಿಗೆ ಸಭಾಪತಿಯಿಂದ ನೋಟೀಸ್ ಜಾರಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಭಾಪತಿಗೆ ನೋಟೀಸ್ ಜಾರಿ ಮಾಡುವ ಎಲ್ಲಾ ಅಧಿಕಾರ ಇದೆ. ಸಭಾಪತಿ ಅಧೀನದಲ್ಲಿ ಕಾರ್ಯದರ್ಶಿ ಬರುತ್ತಾರೆ. ಕಾರ್ಯದರ್ಶಿಯವರು ಬಿಜೆಪಿಯವರು ಹೇಳಿದ ಹಾಗೆ ಕೇಳಿಕೊಂಡು ಇದ್ದರೆ ಸುಮ್ನೆ ಕೂರಬೇಕ ಎಂದು ಪ್ರಶ್ನಿಸಿದರು.
ಜನವರಿ ಒಂದರಿಂದ ಶಾಲಾ ಕಾಲೇಜು ಆರಂಭ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸೋಂಕು ಇದೇ ರೀತಿ ನಿಯಂತ್ರಣದಲ್ಲಿದ್ದರೆ ಆರಂಭ ಮಾಡಲಿ, ಏನೂ ಸಮಸ್ಯೆ ಇಲ್ಲ. ಆದರೆ ಮಾಸ್ಕ್, ಸ್ಯಾನಿಟೈಸರ್ ಹಾಕಿಕೊಳ್ಳುವಂತೆ ನೋಡ್ಕೋಬೇಕು. ಕೋವಿಡ್ ಸೋಂಕಿನ ಎರಡನೇ ಅಲೆ ಬೀಸಿದರೆ ಶಾಲೆ ಆರಂಭ ಮಾಡುವುದು ಬೇಡ ಎಂದರು.