Advertisement

ಕಬ್ಬನ್‌ಪಾರ್ಕ್‌ನ ಪ್ರತಿಮೆಗಳ ಮೆರಗು ಇನ್ನೂ ಹೆಚ್ಚಲಿದೆ

12:36 PM Feb 07, 2017 | |

ಬೆಂಗಳೂರು: ಕಬ್ಬನ್‌ಪಾರ್ಕ್‌ನಲ್ಲಿರುವ ಶತಮಾನದಷ್ಟು ಹಳೆಯದಾದ ಪ್ರತಿಮೆ ಗಳಿಗೆ ಮೆರುಗು ನೀಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದ್ದು, 15 ಲಕ್ಷ ರೂ. ವೆಚ್ಚದಲ್ಲಿ ಪ್ರತಿಮೆಗಳ ದುರಸ್ತಿ ಕಾರ್ಯ ಶೀಘ್ರವೇ ಆರಂಭವಾಗಲಿದೆ. 

Advertisement

ಮೈಸೂರು ಮಹಾರಾಜ ಚಾಮ ರಾಜೇಂದ್ರ ಒಡೆಯರ್‌, ಕಿಂಗ್‌ ಎಡ್ವರ್ಡ್‌, ಶೇಷಾದ್ರಿ ಅಯ್ಯರ್‌, ಮಾರ್ಕ್‌ ಕಬ್ಬನ್‌, ರಾಣಿ ವಿಕ್ಟೋರಿಯಾ ಅವರ ಪ್ರತಿಮೆಗಳನ್ನು ಶತಮಾನದಷ್ಟು ಹಿಂದೆಯೇ ಕಬ್ಬನ್‌ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆಗಳು ಈಗ್ಗೆ ಕೆಲವು ವರ್ಷಗಳಿಂದೀಚೆಗೆ ನಾನಾ ಕಾರಣಗಳಿಂದ ಸ್ವಲ್ಪ ಶಿಥಿಲಗೊಂಡಿದ್ದವು.

ಈ ಹಿನ್ನೆಲೆಯಲ್ಲಿ ಪ್ರತಿಮೆಗಳ ಮೂಲ ಸ್ವರೂಪಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ಜಾಗರೂಕವಾಗಿ ಕಾಯಕಲ್ಪಗೊಳಿಸಲು ತೋಟಗಾರಿಕೆ ಇಲಾಖೆಯು ರಾಜಸ್ಥಾನದಿಂದ ತಜ್ಞರು ಹಾಗೂ ಶಿಲ್ಪಕಲಾವಿದರನ್ನು ಕರೆಸುತ್ತಿದೆ. 

ಈ ಐದು ಪ್ರತಿಮೆಗಳ ಮೆರುಗು ಹೆಚ್ಚಿಸುವ ಹೊಣೆಯನ್ನು ತೋಟಗಾರಿಕೆ ಇಲಾಖೆಯು ಪುರಾತತ್ವ ಇಲಾಖೆಗೆ ವಹಿಸಿದೆ. ಇದಕ್ಕಾಗಿ 15 ಲಕ್ಷ ರೂ.ಹಣವನ್ನೂ ನೀಡುತ್ತಿದೆ. ಇದಕ್ಕಾಗಿ ಪುರಾತತ್ವ ಇಲಾಖೆ ಟೆಂಡರ್‌ ಕರೆದಿದ್ದು, ಸದ್ಯದಲ್ಲೇ ಕೆಲಸ ಆರಂಭವಾಗಲಿದೆ. 

ಚಾಮರಾಜರ ಖಡ್ಗದಲ್ಲಿ ಬಿರುಕು: ಕಬ್ಬನ್‌ಪಾರ್ಕ್‌ನ ಟೆನ್ನಿಸ್‌ ಕೋಟ್‌ ಸಮೀಪವಿರುವ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್‌(1927) ಅವರ ಮಾರ್ಬಲ್‌ ಪ್ರತಿಮೆ ಶೂ ಮುರಿದ್ದು, ಖಡ್ಗದಲ್ಲಿ ಬಿರುಕು ಬಿದ್ದಿದೆ. ಅಲ್ಲದೆ ಮಹಾರಾಜರು ಧರಿಸಿರುವ ಪೇಟದಲ್ಲಿ ತೂತು ಬಿದ್ದಿದೆ. ಇದರ ದುರಸ್ತಿ  ಹಾಗೂ ಮಾರ್ಬಲ್‌ ಶುಚಿತ್ವ, ಫಾಲಿಶ್‌ ಮತ್ತು ಸಂರಕ್ಷಣೆಗಾಗಿ 2.75 ಲಕ್ಷ ರೂ. ವೆಚ್ಚವಾಗಲಿದೆ.

Advertisement

ರಾಣಿ ಬೆರಳಿಗೆ ಊನ: ಎಂ.ಜಿ.ರಸ್ತೆ ಗೇಟ್‌ನಲ್ಲಿ 1906ರಲ್ಲಿ ಒಂದು ಸಾವಿರ ಡಾಲರ್‌ ವೆಚ್ಚದಲ್ಲಿ ಸ್ಥಾಪನೆಯಾಗಿದ್ದ ರಾಣಿ ವಿಕ್ಟೋರಿಯಾ ಅವರ ಪ್ರತಿಮೆಯ ಬಲಗೈ ಬೆರಳುಗಳು ಮತ್ತು ಅವರು ಹಿಡಿದುಕೊಂಡಿರುವ ಹೂಬುಟ್ಟಿ ಮುರಿದಿದ್ದು, ದುರಸ್ತಿಗೆ ಹಾಗೂ ಮಾರ್ಬಲ್‌ ಸಂರಕ್ಷಣೆ, ರಾಸಾಯನಿಕ ಬಳಸಿ ಶುಚಿಗೊಳಿಸಲು 4.30 ಲಕ್ಷ ರೂ.ವೆಚ್ಚವಾಗಲಿದೆ. 

ಎಡ್ವರ್ಡ್‌ ಮೂಗು ಮುರಿತ: ಪ್ರಸ್‌ಕ್ಲಬ್‌ ಸಮೀಪ 1919ರಲ್ಲಿ ಸ್ಥಾಪಿಸಲಾಗಿದ್ದ ಕಿಂಗ್‌ ಎಡ್ವರ್ಡ್‌ ಪ್ರತಿಮೆಯಲ್ಲಿ ಮೂಗು ಮುರಿದಿದ್ದು, ಎಡಗಾಲಿನ ಶೂ ಮುರಿದು ವಿರೂಪಗೊಂಡಿದೆ. ಈ ಪ್ರತಿಮೆ ದುರಸ್ತಿ ಹಾಗೂ ರಾಸಾಯನಿಕದ ಶುಚಿತ್ವ, ಮೆರಗು, ಸಂರಕ್ಷಣೆ ಇತ್ಯಾದಿ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 5.30 ಲಕ್ಷ ರೂ. ವೆಚ್ಚವಾಗಲಿದೆ. 

ಕೇಂದ್ರ ಗ್ರಂಥಾಲಯದ ಮುಂಭಾಗ ದಲ್ಲಿನ ದಿವಾನ್‌ ಶೇಷಾದ್ರಿ ಅಯ್ಯರ್‌ (1913) ಮತ್ತು ಹೈಕೋರ್ಟ್‌ ಮುಂಭಾಗ, ಬ್ಯಾಂಡ್‌ಸ್ಟಾಂಡ್‌ ಸಮೀಪ ಪ್ರತಿಷ್ಟಾಪಿಸಲಾಗಿರುವ ಮಾರ್ಕ್‌ ಕಬ್ಬನ್‌ ಅವರ ಪ್ರತಿಮೆಗಳು ಕಂಚಿನವಾಗಿವೆ. ಇವುಗಳನ್ನು ರಾಸಾಯನಿಕ ಬಳಸಿ ಸ್ವತ್ಛಗೊಳಿಸಲು 1.50 ಲಕ್ಷ ರೂ. ಬಳಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆ ಉಪನಿರ್ದೇಶಕ ಅಕೋಜಿ ಮಾಹಿತಿ ನೀಡಿದ್ದಾರೆ.

ಪ್ರತಿಮೆಗಳ ಕಾಯ ಕಲ್ಪಕ್ಕೆ ತೋಟಗಾರಿಕೆ ನಿರ್ಧರಿಸಿದೆ. ಇದಕ್ಕಾಗಿ 15.50 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪುರಾತತ್ವ ಇಲಾಖೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದೆ. ಶೀಘ್ರವೇ ದುರಸ್ತಿ ಕಾರ್ಯ ಆರಂಭವಾಗಲಿದೆ. 
-ಮಹಂತೇಶ್‌ಮುರುಗೋಡು, ಉಪನಿರ್ದೇಶಕ, ಕಬ್ಬನ್‌ಪಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next