ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಅಡಿಕೆ ಮತ್ತು ರಬ್ಬರ್‌ಗೆ ಎಲೆ ಚುಕ್ಕಿ ರೋಗ ಬಂದಿದ್ದು, ಸಂಶೋಧನ ಕೇಂದ್ರಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಸರಕಾರ ಸೂಕ್ತ ನಿರ್ದೇಶನ ನೀಡಿ ರೋಗಕ್ಕೆ ಕಾರಣ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಬೆಳೆಗಾರರಿಗೆ ನಷ್ಟ ಪರಿಹಾರ ಒದಗಿಸುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಗ್ರಹಿಸಿದ್ದಾರೆ.
ವಿಟ್ಲದಲ್ಲಿರುವ ಸಿಪಿಸಿಆರ್‌ಐ ಸಂಸ್ಥೆ ಅಡಿಕೆ ವಿಚಾರದಲ್ಲಿ ಸಂಶೋಧನೆ ಮಾಡುವ ಕೇಂದ್ರ ಸರಕಾರದ ಒಂದು ಸಂಸ್ಥೆಯಾಗಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಗಮನ ಸೆಳೆದರು.
ದ.ಕ. ಜಿಲ್ಲೆಯಲ್ಲಿ ಅಡಿಕೆ ಮರ, ತೆಂಗಿನ ಮರ ಮತ್ತು ಮರಗಳಿಂದ ಬಿದ್ದು ಗುಣಮುಖರಾಗದೆ ಮಲಗಿದ್ದಲ್ಲೇ ಇರುವ ಕೃಷಿಕರಿಗೆ ಸರಕಾರ ತಿಂಗಳಿಗೆ ಕನಿಷ್ಟ 5,000 ರೂ. ಮಾಶಾಸನವನ್ನು ನೀಡಬೇಕು ಎಂದವರು ಆಗ್ರಹಿಸಿದರು.
ದ.ಕ. ಜಿಲ್ಲಾ ಎಸ್‌ಪಿ ಕಚೇರಿ ಸ್ಥಳಾಂತರ ಮಾಡಿ
ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಜಿಲ್ಲಾ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು. ಸ್ಥಳಾಂತರಕ್ಕಾಗಿ ಕೆಲವು ಪ್ರಕ್ರಿಯೆಗಳು ನಡೆದಿದ್ದು, ಅದನ್ನು ಮುಂದಿನ ಬಜೆಟ್‌ನೊಳಗೆ ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕ ರೈ ಆಗ್ರಹಿಸಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜಿನ ಆವಶ್ಯಕತೆ ಇದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನವನ್ನು ಕಾಯ್ದಿರುಸುವಂತೆ ಸರಕಾರಕ್ಕೆ ಮನವಿ ಮಾಡಿದರು. ಕಳೆದ 15 ವರ್ಷಗಳಿಂದ ಬಜೆಟ್‌ನಲ್ಲಿ ದ.ಕ. ಜಿಲ್ಲೆಗೆ ವಿಶೇಷ ಅನುದಾನಗಳು ಸಿಗುತ್ತಿಲ್ಲ. ಇಲ್ಲಿ ಮಂಗಳಾ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ 1,000 ಕೋಟಿ ರೂ. ಅನುದಾನ ಬೇಕಿದ್ದು, ಪ್ರತೀ ವರ್ಷ ತಲಾ 200 ಕೋ.ರೂ. ಇರಿಸುವಂತೆ ಆಗ್ರಹಿಸಿದರು. ಬಂಟ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ 200 ಕೋ.ರೂ. ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಮುಂದಿನ ಬಜೆಟ್‌ನಲ್ಲಿ ಅದನ್ನು ಜಾರಿ ಮಾಡುವಂತೆ ಒತ್ತಾಯಿಸಿದರು.