Advertisement

ಯಲಬುರ್ಗಾ: ದೊಡ್ಡಾಟ ಕಲಾವಿದ ತಿಮ್ಮಣ್ಣಗೆ ಅಕಾಡೆಮಿ ಪ್ರಶಸ್ತಿ-ಅರಳಿದ ಪ್ರತಿಭೆಗೆ ಸಂದ ಗೌರವ

01:32 PM Dec 03, 2024 | Team Udayavani |

ಉದಯವಾಣಿ ಸಮಾಚಾರ
ಯಲಬುರ್ಗಾ: ಊರೂರು ಅಲೆದಾಡಿ ಜಾತ್ರೆ ಸಂದರ್ಭದಲ್ಲಿ ಸ್ಟೇಷನರಿ ಅಂಗಡಿಗಳನ್ನು ಹಾಕಿ ಜೀವನ ಸಾಗಿಸುತ್ತಾ, ಬದುಕಿನುದ್ದಕ್ಕೂ ಸಂಗೀತ ಮತ್ತು ರಂಗಕಲೆ ಮೈಗೂಡಿಸಿಕೊಂಡಿರುವ ಲಿಂಗನಬಂಡಿ ಗ್ರಾಮದ ಹಿರಿಯ ಜೀವಿ ತಿಮ್ಮಣ್ಣ ಮಾಸ್ತರ ಚೆನ್ನದಾಸರ ಅವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಕೊಡಮಾಡುವ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದೆ.

Advertisement

ಆಧುನಿಕ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಬಯಲಾಟ ನಾಟಕಗಳನ್ನು ಉಳಿಸಿ, ಬೆಳೆಸಿಕೊಂಡು ನಾಡಿನಾದ್ಯಂತ ಪಸರಿಸುವ ಮೂಲಕ ಜೀವನ ಬಂಡಿ ಸಾಗಿಸುತ್ತಿದ್ದಾರೆ. ಬೇರೆ ಬೇರೆ ರೀತಿಯ ಬಯಲಾಟ ನಾಟಕಗಳನ್ನು ಸಿಂಧನೂರು, ಲಿಂಗಸೂಗೂರು, ರಾಯಚೂರು, ಮಾನ್ವಿ, ಲಿಂಗ ನಬಂಡಿ ಸೇರಿದಂತೆ ನಾಡಿನ ನಾನಾ ಕಡೆಗಳಲ್ಲಿ ಕಲಿಸಿದ ಕೀರ್ತಿಗೆ ತಿಮ್ಮಣ್ಣ ಪಾತ್ರರಾಗಿದ್ದಾರೆ.

ಪ್ರಮುಖ ಬಯಲಾಟ ನಾಟಕಗಳು:ಇವರು ಕಲಿಸಿದ ಬಯಲಾಟ ನಾಟಕಗಳೆಂದರೆ ರಾಜ ರಾಜೇಶ್ವರಿ ಮಹಿಮೆ, ಶ್ರೀದೇವಿ ಮಹಾತ್ಮೆ, ಕೌಡುಲು ಖಾನವಧೆ, ರತಿ ಕಲ್ಯಾಣ, ಕರ್ಣಾರ್ಜುನರ ಕಾಳಗ, ಪಾಂಡು ವಿಜಯ, ಧರ್ಮರಾಯನ ಸೋಲು, ಕನಕಾಂಗಿ ಕಲ್ಯಾಣ, ಗಯಾ, ದ್ರೋಣ ಪ್ರತಿಜ್ಞೆ, ದುಶ್ಯಾಸನ ವಧೆ, ಶಶಿರೇಖಾ ಕಲ್ಯಾಣಿ, ಪಾರ್ಥ ವಿಜಯ, ಕಂಸಾಸುರ ವಧೆ, ಅಹಿರಾವಣ, ಮಹಿರಾವಣ ಸೇರಿದಂತೆ ಹಲವು ನಾಟಕಗಳನ್ನು ಇಡೀ ನಾಡಿನಾದ್ಯಾಂತ ನಿರ್ದೇಶನ (ಕಲಿಸಿದ) ಮಾಡಿದ ಕೀರ್ತಿ ತಿಮ್ಮಣ್ಣ ಅವರದ್ದು.

ಮಾಸ್ತರ್‌ ಹಿನ್ನೆಲೆ: ತತ್ವಪದ ಗಾಯಕ ಹಾಗೂ ಬಯಲಾಟ ನಾಟಕ ಕಲಾವಿದನೆಂದು ಪ್ರಖ್ಯಾತಿ ಪಡೆದಿರುವ ಇವರ ಜೀವನ ನಡೆದು ಬಂದಿದ್ದು ದುರ್ಗಮ ಹಾದಿಯಲ್ಲಿ. ಅಲೆಮಾರಿ ಕುಟುಂಬದ ಮುದಕಪ್ಪ ಮತ್ತು ದುರಗಮ್ಮ ಚನ್ನದಾಸರ
ಕುಟುಂಬದಲ್ಲಿ ಜನಿಸಿದ ತಿಮ್ಮಣ್ಣ ಪಿಟೀಲು ಹಿಡಿದು ಊರೂರು ಅಲೆಯುತ್ತ ಭಿಕ್ಷಾ ಟನೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಅಲೆಮಾರಿ ಬದುಕಿನಂತೆ ಅವರ ಕುಟುಂಬ ಲಿಂಗನಬಂಡಿಯಿಂದ ರಾಯಚೂರು ಜಿಲ್ಲೆ ಕಡೆಗೆ ಪ್ರಯಾಣ ಬೆಳೆಸಿತು. ಹೀಗೆ ಊರೂರು ಅಲೆದಾಡುತ್ತಿದ್ದ ಕುಟುಂಬ ಕೊನೆಗೆ ಲಿಂಗಸೂಗೂರು ತಾಲೂಕಿನ ನೀರಲೂಟಿ ಗ್ರಾಮದಲ್ಲಿ ನೆಲಯೂರಿ ಸೋದರ ಮಾವ ಕೃಷ್ಣಪ್ಪ ಮಾಸ್ತರ ಮನೆಯಲ್ಲಿ ಪಿಟೀಲು ಕಲಿತ ತಿಮ್ಮಣ್ಣ ಸಂಗೀತ ಸಾಧನೆಗಳನ್ನು ಅಭ್ಯಾಸ ಮಾಡತೊಡಗಿದರು. ಮೂರು ವರ್ಷಗಳ ಕಾಲ ಸೋದರ ಮಾವನ ಮನೆಯಲ್ಲಿ ಮನೆಸೇವೆ ಜೊತೆಗೆ ಗುರುಸೇವೆ ಮಾಡುತ್ತಾ ಪಿಟೀಲು ವಾದನ, ತತ್ವಪದಗಳು ಹಾಗೂ ಬಯಲಾಟ ಪದಗಳನ್ನು ಕಲಿತು ಕರಗತ ಮಾಡಿಕೊಂಡರು.

Advertisement

ತಿಮ್ಮಣ್ಣ ಚೆನ್ನದಾಸರ ನಮ್ಮೂರಿನ ಹೆಮ್ಮೆಯ ಕಲಾವಿದ. ಗ್ರಾಮೀಣ ಪ್ರದೇಶದ ಕಲಾವಿದನಿಗೆ ಪ್ರಶಸ್ತಿ ಲಭಿಸಿದ್ದು ಹರ್ಷದ ವಿಷಯ. ಅಕಾಡೆಮಿ ಪ್ರಶಸ್ತಿಗಳಿಗೆ ಈ ಹಿಂದೆ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಕಡೆಗಣಿಸುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಇಲ್ಲಿನವರನ್ನು ಪರಿಗಣಿಸುತ್ತಿರುವುದು ಖುಷಿ ತಂದಿದೆ. ಪ್ರಶಸ್ತಿ ಪುರಸ್ಕೃತರಿಗೆ ಮುಂದೆ ಅಗತ್ಯ ಸೌಲಭ್ಯ ಕಲ್ಪಿಸಿ ಗೌರವದಿಂದ ಕಾಣಬೇಕು.
*ರಾಮಣ್ಣ ಸಾಲಭಾವಿ
ಜಿಪಂ ಮಾಜಿ ಸದಸ್ಯ, ಲಿಂಗನಬಂಡಿ

ನನ್ನ ಕಲಾಸೇವೆ ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಈ ಸಾಧನೆಗೆ ಕಲಾವಿದರ ಪ್ರೋತ್ಸಾಹವೇ ಕಾರಣವಾಗಿದೆ.
ತಿಮ್ಮಣ್ಣ ಚೆನ್ನದಾಸರ,
ಪ್ರಶಸ್ತಿಗೆ ಆಯ್ಕೆಗೊಂಡ ಕಲಾವಿದ

■ ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next