Advertisement
ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಸರ್ಕಾರ ರಚಿಸಿದ ಯಡಿಯೂರಪ್ಪ, ಜು.26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರದ ಪ್ರತಿ ಸಂದರ್ಭದಲ್ಲೂ ಸೂಕ್ತ ನಿರ್ಧಾರ ಕೈಗೊಂಡು, ಯೋಜಿತ ಕಾರ್ಯತಂತ್ರ ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದರ ಫಲ ಎಂಬಂತೆ ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲ ಅರಳಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಭದ್ರವಾಗಿ ನೆಲೆಯೂರಲು ಸಾಧ್ಯವಾದಂತಾಗಿದೆ.
Related Articles
Advertisement
ಅಪಸ್ವರಕ್ಕೆ ಅವಕಾಶವಿಲ್ಲದಂತೆ ಎಚ್ಚರ: ಈ ನಡುವೆ ಅನರ್ಹರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಬಹುತೇಕ ಕಡೆ ಅವರೇ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂಬ ಸಂದೇಶವನ್ನು ಯಡಿಯೂರಪ್ಪ ಮೊದಲೇ ಸ್ಪಷ್ಟ ವಾಗಿ ಸಾರಿದರು. ಇದರಿಂದ ಅಸಮಾಧಾನಕ್ಕೆ ಒಳಗಾಗಲಿದ್ದ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಲವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿದರು. ಇದು ಕೆ.ಆರ್.ಪುರ, ಹಿರೇಕೆರೂರು, ಯಲ್ಲಾಪುರ ಸೇರಿ ಕೆಲ ಕ್ಷೇತ್ರಗಳಲ್ಲಿ ಫಲ ನೀಡಿದಂತಿದೆ.
13 ಅನರ್ಹ ಶಾಸಕರು ಬಿಜೆಪಿಯಿಂದ ನಾಮಪತ್ರ ಸಲ್ಲಿಸುತ್ತಿದ್ದಂತೆ ಅಸಮಾಧಾನಗೊಂಡಿದ್ದ ಹಲವ ರನ್ನು ಖುದ್ದು ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಕರೆಸಿ ಕೊಂಡು ಸಮಾಧಾನಪಡಿಸಿದ್ದರಿಂದ ಅಪಸ್ವರ, ಭಿನ್ನಮತಕ್ಕೆ ಅವಕಾಶವಾಗಲಿಲ್ಲ. ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ಗೆಲುವು ಸಾಧಿಸಿದ್ದು, ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಸೋತಿರುವುದು ಸ್ವಲ್ಪ ಹಿನ್ನಡೆಯಾದಂತಾಯಿತು. ಉಳಿದಂತೆ ಎಲ್ಲಿಯೂ ಬಂಡಾಯ ಬಿಜೆಪಿಯ ಗೆಲುವಿಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗಿಲ್ಲ.
ಅನರ್ಹ ಶಾಸಕರೇ ಅಭ್ಯರ್ಥಿ: ಸುಪ್ರೀಂಕೋರ್ಟ್ ರಾಜೀ ನಾಮೆ ನೀಡಿದ್ದ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದರೂ ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದಂತೆ ಆರ್.ರೋಷನ್ ಬೇಗ್ ಅವರನ್ನು ಹೊರತುಪಡಿಸಿ ಉಳಿದ 16 ಮಂದಿ ನ.14ರಂದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರ ಹಿತ ಕಾಪಾಡಲು ಬದ್ಧ ಎಂದು ಹೇಳುತ್ತಲೇ ಬಂದ ಯಡಿಯೂರಪ್ಪ, ಗೆದ್ದರೆ ಬಹುಪಾಲು ಮಂದಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಕಟಿಸಿದ್ದರು. ಸಚಿವರಾದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆತು ಅಭಿವೃದ್ಧಿಯಾಗುವ ನಿರೀಕ್ಷೆ ಹುಟ್ಟಿಸುವಲ್ಲಿಯೂ ತಕ್ಕ ಮಟ್ಟಿಗೆ ಯಶಸ್ವಿಯಾದರು.
ಒಗ್ಗಟ್ಟು ಪ್ರದರ್ಶನ: 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಬಿಜೆಪಿಯಿಂದ ಕಣಕ್ಕಿಳಿದರೂ ಯಾವುದೇ ಅಸಮಾಧಾನವಿಲ್ಲದಂತೆ ನಾಯಕರೆಲ್ಲ ಒಗ್ಗ ಟ್ಟಾಗಿ ಉಪಚುನಾವಣೆ ಎದುರಿಸುವಂತೆ ಯಡಿ ಯೂರಪ್ಪ ಅವರು ರೂಪಿಸಿದ ಕಾರ್ಯತಂತ್ರವೂ ಫಲ ನೀಡಿದಂತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು, ಕೇಂದ್ರ ಸಚಿವರು, ಉಪ ಮುಖ್ಯ ಮಂತ್ರಿಗಳು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಹಿರಿಯ ನಾಯಕರು, ಸಂಘಟನಾ ಕ್ಷೇತ್ರದ ಪ್ರಮುಖರನ್ನು ಕ್ಷೇತ್ರವಾರು ಉಸ್ತುವಾರಿಗಳನ್ನಾಗಿ ನಿಯೋಜಿಸಿ, ಯೋಜಿತವಾಗಿ ನಡೆಸಿದ ಪ್ರಚಾರ ಬಿಜೆಪಿಯ ಮತಗಳನ್ನು ಒಗ್ಗೂಡಿಸಲು ಸಹಕಾರಿ ಯಾದಂತಿದೆ.
ಪರಿಸ್ಥಿತಿಗೆ ತಕ್ಕಂತೆ ಕಾರ್ಯತಂತ್ರ: ಉಪಚುನಾವಣೆ ಘೋಷಣೆಗೂ ಮೊದಲೇ ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ ವಿಶ್ವಾಸ ಮೂಡಿಸಿದ್ದ ಯಡಿಯೂರಪ್ಪ, ಉಪಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿಯೂ ಯಶಸ್ವಿಯಾದರು. ಉಪಚುನಾವಣೆ ಮತದಾನಕ್ಕೂ ಮುನ್ನ 14 ದಿನಗಳಲ್ಲಿ 28ಕ್ಕೂ ಹೆಚ್ಚು ಸಾರ್ವಜನಿಕ/ ಕಾರ್ಯಕರ್ತರ ಸಭೆ, 20ಕ್ಕೂ ಹೆಚ್ಚು ರೋಡ್ ಶೋ ನಡೆಸಿ, ಅಬ್ಬರದ ಪ್ರಚಾರ ನಡೆಸಿದ್ದರು. ಎರಡು ವಾರದಲ್ಲಿ 4,500 ಕಿ.ಮೀ.ಗಿಂತ ಹೆಚ್ಚು ಪ್ರವಾಸ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವುದರ ಜತೆಗೆ ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದರು.
ಬಹುತೇಕ ಕ್ಷೇತ್ರಗಳಲ್ಲಿ ಎರಡು ಸುತ್ತಿನ ಪ್ರಚಾರ ನಡೆಸಿದ್ದರು. ಯಡಿಯೂರಪ್ಪ ಅವರ ಪ್ರವಾಸದ ನಂತರವೇ ಕಾಗವಾಡ, ಅಥಣಿ, ರಾಣೆಬೆನ್ನೂರು, ಯಶವಂತಪುರ ಹಾಗೂ ಕೆ.ಆರ್.ಪೇಟೆ ಕ್ಷೇತ್ರಗಳ ರಾಜಕೀಯ ಚಿತ್ರಣ ಬದಲಾಯಿತು ಎಂದು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸಿ ಯಶಸ್ಸು ಕಂಡಿರುವ ಯಡಿಯೂರಪ್ಪ ಅವರು, ರಾಜ್ಯ ಬಿಜೆಪಿಯಲ್ಲಿ ತಾವೊಬ್ಬ ಪ್ರಶ್ನಾತೀತ ನಾಯಕ ಎಂಬುದನ್ನು ಸಾರಿ ಹೇಳಿದ್ದಾರೆ. ಆ ಮೂಲಕ ತಮ್ಮ ನಾಯಕತ್ವ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.
* ಎಂ. ಕೀರ್ತಿಪ್ರಸಾದ್