Advertisement
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಹೊರತುಪಡಿಸಿ ಉಳಿದ 30 ಜಿಲ್ಲೆಗಳಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಎಲ್ಲಿಯೂ ಅಂಗಡಿ, ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿಲ್ಲ. ಸಂಚಾರಕ್ಕೆ ಅಡ್ಡಿಪಡಿಸಿಲ್ಲ. ಸ್ವಯಂಪ್ರೇರಿತವಾಗಿ ಬಂದ್ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪ್ರಯತ್ನಿಸಿತು. ಅನಗತ್ಯವಾಗಿ ಸಂಸದರು ಸೇರಿದಂತೆ ಹಲವು ಜನಪ್ರತಿನಿಧಿಗಳನ್ನು ಬಂಧಿಸಿತು ಎಂದು ದೂರಿದರು.
ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಘೋಷಿಸಿದ್ದ ಕುಮಾರಸ್ವಾಮಿಯವರು ಆ ನಂತರ ದಿನಕ್ಕೊಂದು ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಂಪುಟ ರಚನೆ, ಖಾತೆ ಹಂಚಿಕೆ ಗೊಂದಲದಲ್ಲೇ ಮುಳುಗಿರುವ ಮುಖ್ಯಮಂತ್ರಿಗಳಿಗೆ ರೈತರ ಹಿತರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
Related Articles
Advertisement
ರೈತರು ಬಲಿಪಶುವಾಗಲು ಬಿಡುವುದಿಲ್ಲಕುಮಾರಸ್ವಾಮಿಯವರು ಸಾಂದರ್ಭಿಕ ಶಿಶುವಾಗಿರಲಿ ಇಲ್ಲವೇ ಸನ್ನಿವೇಶದ ಶಿಶುವಾದರೂ ಆಗಲಿ. ಆದರೆ ಅವರ ಸಂದರ್ಭ, ಸನ್ನಿವೇಶಕ್ಕೆ ರೈತರು ಬಲಿಪಶುಗಳಾಗುವುದನ್ನು ಸಹಿಸುವುದಿಲ್ಲ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಅಧಿಕಾರ ಹಿಡಿಯುವ ಮುನ್ನ ಕಾಂಗ್ರೆಸ್‌ನಿಂದ ಸ್ಪಷ್ಟ ಭರವಸೆ ಪಡೆಯದೆ ಕುರ್ಚಿ ವ್ಯಾಮೋಹಕ್ಕೆ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಇದೀಗ ಕುಂಟು ನೆಪ ಹೇಳುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಜನರ ಕ್ಷಮೆ ಯಾಚಿಸಬೇಕು
ತಾವು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಬದಲಿಗೆ ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಾಡಿನ ಆರೂವರೆ ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ಸ್ವತಂತ್ರ ಭಾರತ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಜನರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿಲ್ಲ. ಕುಮಾರಸ್ವಾಮಿಯವರು ಹತಾಶೆಯಿಂದ ನೀಡಿರುವ ಹೇಳಿಕೆ ಖಂಡನೀಯ. ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.