Advertisement

ಕುಮಾರಸ್ವಾಮಿಗಳೇ ಅಭಿವೃದ್ಧಿ ಎಂದರೆ ಬಾಯ್ಮಾತಲ್ಲ

12:30 AM Mar 10, 2019 | |

ಮಂಗಳೂರು: ಅಭಿವೃದ್ಧಿ ಅಂದರೆ ಬರಿಯ ಬಾಯಿ ಮಾತಲ್ಲ; ಕೃತಿಯಲ್ಲಿ ತೋರಿಸಬೇಕು. ನೀವು ಮುಖ್ಯಮಂತ್ರಿ ಆದ ಬಳಿಕ ಕರಾವಳಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನಾದರೂ ತಿಳಿಸಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲೆಸೆದರು.

Advertisement

ಅವರು ಶನಿವಾರ‌ ನಗರದ ಕೇಂದ್ರ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಬಿಜೆಪಿ ಕ್ಲಸ್ಟರ್‌ ಮಟ್ಟದ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಈ ಸಮಾವೇಶವನ್ನು ಉದ್ಘಾಟಿಸಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ದ.ಕ. 
ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಪ್ರದೇಶಕ್ಕೆ ಆಗಿಂದಾಗ್ಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೆನು. ಇದರಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ನೀವು ಮುಖ್ಯಮಂತ್ರಿ ಆದ ಬಳಿಕ ಈ ಭಾಗದಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ  ಎಂದು ಪ್ರಶ್ನಿಸಿದರು.

ರಾಜ್ಯದ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಜನರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೇಳಿದರೆ “ನನಗೆ ನೀವು ಓಟು ಹಾಕಿದ್ದೀರಾ’ ಎಂದು ಸೊಕ್ಕಿನಿಂದ ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಎನ್‌ಡಿಎ ಸರಕಾರ ಮಂಗಳೂರಿಗೆ ಅಮೃತ್‌ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗಳನ್ನು ನೀಡಿದೆ. ಮೋದಿ ಆಡಳಿತದಿಂದಾಗಿ ದೇಶಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ. ಮೋದಿ ಸರಕಾರವು ಉಗ್ರವಾದದ ವಿರುದ್ಧ ಸಮರ ಸಾರುತ್ತಿರುವುದರಿಂದ ಶಾಂತಿಗಾಗಿ ಇಡೀ ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಆದ್ದರಿಂದ ಮತ್ತೂಮ್ಮೆ ಮೋದಿ ಸರಕಾರವನ್ನು ಜನ ಅಧಿಕಾರಕ್ಕೆ ತರಬೇಕು ಎಂದರು. 

Advertisement

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಬಿ.ವೈ. ರಾಘವೇಂದ್ರ ಮಾತನಾಡಿ, ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರು ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರಕಾರದ ಸಾಧನೆಗಳನ್ನು ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ತಿಳಿಸಬೇಕು; ಈ ಮೂಲಕ ಮತ್ತೂಮ್ಮೆ ಪ್ರಧಾನಿ ಮೋದಿ ಸರಕಾರ ಅಧಿಕಾರಕ್ಕೆ ಬರಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಶಕ್ತಿ ಕೇಂದ್ರದ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕ ಸಭಾ ಕ್ಷೇತ್ರಗಳ ವ್ಯಾಪ್ತಿಯ ಶಕ್ತಿ ಕೇಂದ್ರಕ್ಕೆ ಸಂಬಂಧಿಸಿದ ಪ್ರಮುಖರು, ಸಹಪ್ರಮುಖರು, ಬೂತ್‌ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಪ್ರಭಾರಿಗಳು, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ರಾಜ್ಯದ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕಾರಿಣಿ ಸದಸ್ಯರು, ರಾಜ್ಯ ಬಿಜೆಪಿ ನಾಯಕರ ಸಹಿತ ಸುಮಾರು 10,000 ಮಂದಿ ಭಾಗವಹಿಸಿದ್ದರು. 

ಮೋದಿ ಗೆದ್ದರೆ ದೇಶ ಗೆಲ್ಲುವುದು
ಬಿಜೆಪಿ ರಾಜ್ಯ ಸಂಘಟನ ಕಾರ್ಯದರ್ಶಿ ಅರುಣ್‌ ಕುಮಾರ್‌ ಮಾತನಾಡಿ, ಬೂತ್‌ಗಳನ್ನು ಇನ್ನಷ್ಟು ಸಕ್ರಿಯಗೊಳಿಸ ಬೇಕು ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸಬೇಕು.  ಪಕ್ಷದ ಎಲ್ಲ ಯೋಜನೆ ಗಳನ್ನು ಬೂತ್‌ಗಳಿಗೆ ತಲುಪಿಸ ಬೇಕು ಎಂದು ಸಲಹೆ ಮಾಡಿದರು. ನಾವು ಮೋದಿಯನ್ನು ಗೆಲ್ಲಿಸ ಬೇಕು; ಅವರು ದೇಶವನ್ನು ಗೆಲ್ಲಿಸುತ್ತಾರೆ ಎಂದರು.

ಮಹಾ ಘಟಬಂಧನ್‌ಗೆ ಮೋದಿ ಪ್ರಧಾನಿ ಆಗಬಾರದು ಎಂಬುದೊಂದೇ ಉದ್ದೇಶ. ಆದರೆ ಪ್ರಧಾನಿ ಆಗುವ ತಾಕತ್ತಿನವರು ಅಲ್ಲಿ ಯಾರೂ ಇಲ್ಲ. ಶ್ರೀರಾಮ ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವರಿಸಿದಂತೆ ಮೋದಿ ಅವರು ಮಹಾ ಘಟಬಂಧನ್‌ ಅನ್ನು ಮುರಿದು ಮತ್ತೂಮ್ಮೆ ಪ್ರಧಾನಿ ಆಗುವುದು ಶತಃಸಿದ್ಧ. ಸಣ್ಣ ಪುಟ್ಟ ಬಿನ್ನಾಭಿಪ್ರಾಯಗಳಿದ್ದರೆ ಅದನ್ನು ದೇಶಕ್ಕಾಗಿ ಮರೆತುಬಿಡೋಣ.
– ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next