Advertisement

ವರ್ಷ ಕಳೆದರೂ ದುರಸ್ತಿ ಭಾಗ್ಯ ಕಾಣದ ಕೆರೆಗಳು

01:29 PM Dec 03, 2021 | Team Udayavani |

ಚಿಂಚೋಳಿ: ಕಳೆದ ವರ್ಷದ ಸುರಿದ ಭಾರೀ ಮಳೆಗೆ ಹೂಡದಳ್ಳಿ, ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಗಳ ಒಡ್ಡು ಒಡೆದು ಒಂದು ವರ್ಷ ಕಳೆದರೂ ಸಹ ಇನ್ನು ಸರಕಾರದಿಂದ ಯಾವುದು ದುರಸ್ತಿ ಕಾರ್ಯ ನಡೆಸದೇ ಇರುವುದರಿಂದ ಸಣ್ಣ ನೀರಾವರಿ ಕೆರೆಯ ನೀರಿನ ಮೇಲೆ ಅವಲಂಬಿತವಾಗಿರುವ ರೈತರಿಗೆ ಆತಂಕ ತಂದಿದೆ.

Advertisement

ತಾಲೂಕಿನಲ್ಲಿ ಕಳೆದ ವರ್ಷ ಸತತವಾಗಿ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದಾಗಿ ಕಳೆದ ಅ.13ರಂದು ರಾತ್ರಿ ಹೂಡದಳ್ಳಿ, ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಗಳಿಗೆ ಅ ಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಪ್ರಯುಕ್ತ 1966ರಲ್ಲಿ ನಿರ್ಮಿಸಿದ ಸಣ್ಣ ನೀರಾವರಿ ಕೆರೆಯ ಒಡ್ಡು ಒಡೆದು ಹೋಗಿತ್ತು. ಸಣ್ಣ ನೀರಾವರಿ ಸಚಿವ ಜೆ.ಸಿಮಾಧುಸ್ವಾಮಿ ಅ.6ರಂದು ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಗೆ ಭೇಟಿ ನೀಡಿ ಸರಕಾರದಿಂದ ಕೆರೆ ದುರಸ್ತಿಗೆ 4 ಕೋಟಿ ರೂ. ನೀಡಿರುವುದರಿಂದ ನಾಲಾ ದುರಸ್ತಿ ಕೆಲಸ ಕೈಕೊಳ್ಳಲಾಗಿದೆ. ಆದರೆ ಕೆರೆಗೆ ಒಡ್ಡು ದುರಸ್ತಿ ಕಾರ್ಯ ನಡೆಸದೇ ಇರುವುದರಿಂದ ಕೆರೆಯ ನೀರಿನ ಮೇಲೆ ಅವಲಂಬಿತ ರೈತರು ಜೋಳ, ತೊಗರಿ, ಕಡಲೆ, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವುದರಿಂದ ರೈತರು ಆತಂಕ ಪಡುವಂತಾಗಿದೆ.

ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲರು ಜನ್ಮಸ್ಥಳವಾದ ಹೂಡದಳ್ಳಿ ಗ್ರಾಮದಲ್ಲಿ 1966ರಲ್ಲಿ ಸಣ್ಣ ನೀರಾವರಿ ಕೆರೆಯನ್ನು ನಿರ್ಮಿಸಿದ್ದರು. ಆದರೆ ಮಳೆ ನೀರಿನ ರಭಸಕ್ಕೆ ಕೆರೆ ಒಡ್ಡು ಒಡೆದು ಹೋಗಿದ್ದರಿಂದ ಅದರ ದುರಸ್ತಿ ಕಾರ್ಯಕ್ಕೆ ಸರಕಾರದಿಂದ ಕಳೆದ ಒಂದು ವರ್ಷಗಳಿಂದ ಯಾವುದೇ ಅನುದಾನ ಮಂಜೂರಿಯಾಗದೇ ಇರುವುದರಿಂದ ದುರಸ್ತಿ ಕಾರ್ಯ ನಡೆದಿಲ್ಲ. ಕೆರೆಯ ನೀರಿನ ಮೇಲೆ ಅವಲಂಬಿತರಾಗಿದ್ದ ಹಿಂಗಾರು ಬೆಳೆಗಳಿಗೆ ರೈತರು ನೀರಿನ ಸಮಸ್ಯೆ ಎದುರಿಸಬೇಕಾಗಿದೆ.

ಮಳೆ ಅಭಾವದಿಂದಾಗಿ ತೊಗರಿ ಹೊಲಗಳಲ್ಲಿ ತೇವಾಂಶ ಕೊರತೆಯಿಂದ ಬೆಳೆಗಳು ಹಾನಿಯಾಗುತ್ತಿವೆ. ಜೋಳ, ಕಡಲೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ರೈತರಿಗೆ ತೋಚದಂತಾಗಿದೆ. ಕೆರೆ ದುರಸ್ತಿ ಕಾಮಗಾರಿ ನಡೆಸದೇ ಇರುವುದರಿಂದ ಬೆಳೆಗಳು ಬಾಡುತ್ತಿರುವುದರಿಂದ ರೈತರ ಮೊಗದಲ್ಲಿ ನಿರಾಶೆ ಉಂಟುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next