Advertisement
ಲಿಚೀ ಮರದ ಕೊಂಬೆಯೊಂದರ ಮೇಲೆ ಕೂತು ನನ್ನದೇ ಲೋಕದಲ್ಲಿ ನಾನು ಕಳೆದು ಹೋಗಿದ್ದರೇ, ಪಾರ್ಕಿನ ರಸ್ತೆಯಲ್ಲಿ ನಿಂತು ನನ್ನತ್ತ ನೋಡುತ್ತಿದ್ದ ಆ ವೃದ್ಧ. ಬಹುಶಃ ಭಿಕ್ಷುಕನಿರಬೇಕು. ಗೂನುಬೆನ್ನಿನ, ಉದ್ದನೆಯ ಬಿಳಿ ಗಡ್ಡದ, ತೀಕ್ಷ್ಣವಾದ ಕಣ್ಣುಗಳ ಮುದುಕ ನನ್ನೆಡೆಗೆ ನೋಡಿ, “ನಿನ್ನ ಕನಸೇನು..?’ ಎಂದು ಪ್ರಶ್ನಿಸಿದ್ದ. ಒರಟಾಗಿ ಕಾಣುತ್ತಿದ್ದ ಮುದುಕನಿಂದ ಅಂಥದ್ದೊಂದು ಪ್ರಶ್ನೆಯನ್ನು ನಿರೀಕ್ಷಿಸಿರದ ನನಗೆ ಆಶ್ಚರ್ಯವಾಗಿತ್ತು. ಅದರಲ್ಲೂ ಆತ ಪ್ರಶ್ನೆಯನ್ನು ಇಂಗ್ಲೀಷಿನಲ್ಲಿ ಕೇಳಿದ್ದು ನನ್ನ ಅಚ್ಚರಿಯ ಹೆಚ್ಚಳಕ್ಕೆ ಕಾರಣವಾಗಿತ್ತು. ಇಂಗ್ಲೀಷು ಮಾತನಾಡುವ ಭಿಕ್ಷುಕರು ನಿಜಕ್ಕೂ ಅಪರೂಪ. ನಾನು ಹೀಗೆಲ್ಲ ಯೋಚಿಸುತ್ತಿದ್ದಾಗಲೇ ಅವನು ಮತ್ತೆ ಕೇಳಿದ್ದ;
“ನನಗೆ ನೆನಪಿಲ್ಲ. ಬಹುಶಃ ನನಗೆ ನಿನ್ನೆಯ ರಾತ್ರಿ ಕನಸು ಬಿದ್ದಿರಲಿಕ್ಕಿಲ್ಲ’ ಎಂದೆ ನಾನು. “ಅದಲ್ಲ ನನ್ನ ಮಾತಿನ ಅರ್ಥ. ನಿನ್ನೆ ನೀನು ಕಂಡ ಕನಸಿನ ಬಗ್ಗೆ ನಾನು ವಿಚಾರಿಸುತ್ತಿಲ್ಲ. ಅದು ನಿನಗೂ ಗೊತ್ತು. ನೀನೊಬ್ಬ ಕನಸುಗಾರ ಎನ್ನುವುದಂತೂ ಸ್ಪಷ್ಟ. ಏಕೆಂದರೆ ಇದು ಲಿಚೀ ಹಣ್ಣಿನ ಋತುವಲ್ಲ.ಅಷ್ಟಾಗಿಯೂ ಇಡೀ ಮಧ್ಯಾಹ್ನವನ್ನು ಈ ಮರದ ಟೊಂಗೆಯ ಮೇಲೆ ಕೂತು ನೀನು ಸುಮ್ಮನೇ ಕಳೆಯುತ್ತಿರುವೆ ಎಂದರೆ ನೀನು ಖಂಡಿತವಾಗಿಯೂ ಕನಸುಗಾರನೇ ಇರಬೇಕು’ಎಂದ ಅಜ್ಜ.
Related Articles
Advertisement
ಉಳಿದ ಹುಡುಗರು ನನ್ನಂತೆ ಕನಸು ಕಾಣುತ್ತ ಕೂರಲಾರರು ಏಕೆಂದರೆ ಆಟಕ್ಕೆ ಅವರ ಬಳಿ ಕವಣೆಯಿದೆ.
“ಹುಡುಗಾ, ಬದುಕಿಗೆ ಅತೀ ಅವಶ್ಯಕವಾಗಿ ಬೇಕಿರುವುದೇ ಕನಸು.ಇಂಥದ್ದೇನೋ ನಿನ್ನದಾಗಬೇಕು ಎನ್ನುವ ಕನಸು ನಿನಗಿಲ್ಲವಾ..?’ ಎಂದು ಕೇಳಿದ್ದ ಅಜ್ಜ. ತಕ್ಷಣವೇ ಉತ್ತರಿಸಿ¨ªೆ ನಾನು’ ಹೌದು,ನನ್ನದೇ ಒಂದು ಖಾಸಗಿ ಕೋಣೆ ಬೇಕು ಎನ್ನುವ ಆಸೆಯಿದೆ. ಸಧ್ಯಕ್ಕಂತೂ ಅದೇ ಕನಸು’ಎಂದಿ¨ªೆ.
“ಆಹಾ..! ಸ್ವಂತಕ್ಕೊಂದು ಕೋಣೆ, ಸ್ವಂತಕ್ಕೊಂದು ಮರ, ಎಲ್ಲವೂ ಒಂದೇ ಬಿಡು. ಬಹಳಷ್ಟು ಜನಕ್ಕೆ ಸ್ವಂತಕ್ಕೊಂದು ಕೋಣೆ ಹೊಂದುವ ತಾಕತ್ತಿಲ್ಲ ಇಲ್ಲಿ. ಅದರಲ್ಲೂ ಜನಸಂಖ್ಯಾ ನ್ಪೋಟದಿಂದ ತತ್ತರಿಸಿ ಹೋಗಿರುವ ನಮ್ಮಂಥ ದೇಶದಲ್ಲಿ..’ಎಂದು ಸುಮ್ಮನಾದ ವೃದ್ಧ.
ಎರಡು ನಿಮಿಷದ ನಂತರ ಅವನೇ ಕೇಳಿದ- “ಸಧ್ಯಕ್ಕೆ ನೀನು ವಾಸಿಸುತ್ತಿರುವ ಕೋಣೆ ಹೇಗಿದೆ..?’“ದೊಡ್ಡ ಕೋಣೆ. ಆದರೆ ಅದನ್ನು ನಾನು ನನ್ನ ಸೋದರ , ಸೋದರಿಯರೊಡನೆ ಹಂಚಿಕೊಳ್ಳಬೇಕು.ಅಪರೂಪಕ್ಕೆ ಸೋದರತ್ತೆ ಬಂದಾಗ ಅವಳಿಗೂ ಅಲ್ಲಿಯೇ ಜಾಗ ಕೊಡಬೇಕು’ ಎಂದೆ ನಾನು. ‘ಓಹೋ,ಹಾಗಾ..?ನಿನಗೆ ನಿಜಕ್ಕೂ ಬೇಕಿರುವುದು ಸ್ವಾತಂತ್ರ್ಯ.ನಿನ್ನದೇ ಆದ ಒಂದು ಮರ, ನಿನ್ನದೇ ಒಂದು ಕೋಣೆ, ಸೂರ್ಯನ ಬೆಳಕಿನಡಿ ನಿನ್ನದೇ ಒಂದು ಖಾಸಗಿ ಆಪ್ತವಾದ ಜಾಗ..’ ಎಂದ ವೃದ್ಧನ ಮಾತಿಗೆ,
“ಅಷ್ಟೇ ‘ಎಂದುತ್ತರಿಸಿದ್ದೆ ಚುಟುಕಾಗಿ.ಹುಬ್ಬೇರಿಸಿ ಕೇಳಿದ “ಅಷ್ಟೇ ನಾ..?’
“ಅಷ್ಟೇ ಅನ್ನಬೇಡ ಹುಡುಗಾ,ಅದುವೇ ಎಲ್ಲ ಅನ್ನು.ಅದೆಲ್ಲವೂ ನಿನ್ನದಾದಾಗ ನಿನ್ನ ಕನಸೊಂದು ನನಸಾದ ಲೆಕ್ಕ..’
ಈ ಬಾರಿ ನಾನು ಕೇಳಿದ್ದೆ. “ನನ್ನ ಕನಸನ್ನು ನನಸಾಗಿಸುವುದು ಹೇಗೆ..?’
“ಕನಸಿನ ನನಸಿಗೆ ಅಂತ ಯಾವ ಸಿದ್ಧಸೂತ್ರವೂ ಇಲ್ಲ . ಕನಸು ನನಸಾಗಿಸುವ ದೇವಮಾನವ ನಾನಾಗಿದ್ದರೆ ಹೀಗೆ ನಿನ್ನೊಟ್ಟಿಗೆ ಸಮಯ ವ್ಯರ್ಥ ಮಾಡುತ್ತಿದ್ದೆನಾ..? ಕನಸನ್ನು ಸಾಕಾರಗೊಳಿಸ ಬೇಕೆಂದರೆ ನೀನು ದುಡಿಯಬೇಕು. ಪ್ರತಿ ಕ್ಷಣವೂ ನಿನ್ನ ಕನಸಿನೆಡೆಗೆ ಹೆಜ್ಜೆಯಿಡುತ್ತ ಸಾಗಬೇಕು. ಕನಸಿನ ಸಾಕಾರಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನೆಲ್ಲ ಕಿತ್ತೆಸೆಯಬೇಕು. ಆನಂತರ ಅತ್ಯಲ್ಪ ಕಾಲಾವಧಿಯಲ್ಲಿ ಅತಿಹೆಚ್ಚಿನ ನಿರೀಕ್ಷೆ ನಿನ್ನದಲ್ಲದಿದ್ದರೇ ನಿನ್ನ ಕನಸು ನನಸಾಗುತ್ತದೆ. ಖಾಸಗಿ ಕೋಣೆಯೊಂದು ನಿನ್ನದಾಗುತ್ತದೆ. ಅದಾದ ನಂತರ ಕಷ್ಟದ ದಿನಗಳು ಬರುತ್ತವೆ..’ಎಂದುಬಿಟ್ಟಿದ್ದ ವೃದ್ಧ. ” ಕಷ್ಟದ ದಿನಗಳಾ..?’ ಎನ್ನುತ್ತ ಪ್ರಶ್ನಿಸಿದ ನನಗೆ ಉತ್ತರ ತಿಳಿದುಕೊಳ್ಳುವ ಕುತೂಹಲ.
“ಹೌದು.ಗಳಿಸುವುದು ಕಷ್ಟ, ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳುವುದು ಬಹಳ ಸುಲಭ.ನಿನ್ನದೆಲ್ಲವನ್ನೂ ನಿನ್ನಿಂದ ಇನ್ಯಾರೋ ಕದಿಯುತ್ತಾರೆ ಅಥವಾ ನೀನು ಮಹಾನ್ ಲೋಭಿಯಾಗುತ್ತಿಯಾ.ಒಂದು ಹಂತದ ನಂತರ ಎಲ್ಲದರೆಡೆಗೂ ದಿವ್ಯ ನಿರ್ಲಕ್ಷ, ಬೇಜವಾಬ್ದಾರಿತನಗಳು ನಿನ್ನಲ್ಲಿ ಹುಟ್ಟಿಕೊಳ್ಳುತ್ತವೆ.ಹಾಗಾದ ಮರುಕ್ಷಣವೇ ನನಸಾದ ನಿನ್ನ ಕನಸು ಮತ್ತೆ ಮಾಯವಾಗುತ್ತದೆ..’ಎಂದು ಸಣ್ಣಗೆ ನಕ್ಕ ಅಜ್ಜ.
“ನಿನಗೆ ಇದೆಲ್ಲ ಹೇಗೆ ಗೊತ್ತು..’ಎಂದರೆ ಮತ್ತೆ ನಕ್ಕು ಹೇಳಿದ; “ಏಕೆಂದರೆ ಕನಸನ್ನು ನನಸಾದ ಮೇಲೆ ಕಳೆದುಕೊಂಡವ ನಾನು’. “ಎಲ್ಲವನ್ನೂ ಕಳೆದುಕೊಂಡೆಯಾ..?’
“ಹೌದು. ನನ್ನನ್ನೊಮ್ಮೆ ನೋಡು ಗೆಳೆಯ, ನಾನು ರಾಜನಂತೆಯೋ,ದೇವಮಾನವನಂತೆಯೋ ಕಾಣುತ್ತೇನೆಯೇ ಈಗ..?ನನ್ನ ಬಳಿ ಎಲ್ಲವೂ ಇತ್ತು.ಆದರೆ ನನಗೆ ಇನ್ನಷ್ಟು ಮತ್ತಷ್ಟು ಬೇಕಿತ್ತು. ನಿನಗೂ ಹೀಗಾಗುತ್ತದೆ. ಖಾಸಗಿ ಕೋಣೆ ಸಿಕ್ಕಿತೆಂದುಕೊ,ನಿನ್ನದೇ ಮನೆ ಬೇಕೆನ್ನಿಸುತ್ತದೆ. ನಂತರ ಬೀದಿ ಬೇಕೆನ್ನಿಸುತ್ತದೆ. ಬೀದಿಯೂ ಸಾಕಾಗದು, ನಿನ್ನದೇ ರಾಜ್ಯವಿರಬೇಕಿತ್ತು ಎನ್ನಿಸಲಾರಂಭಿಸುತ್ತದೆ. ಒಂದೊಂದೇ ಸಿಗುತ್ತ ಹೋದಂತೆ ಆಸೆ ಹೆಚ್ಚುತ್ತಲೇ ಹೋಗುತ್ತದೆ, ಸಿಕ್ಕಿದ್ದನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.ಒಮ್ಮೆ ನಿಯಂತ್ರಣ ತಪ್ಪಿತೋ,ಮುಗಿಯಿತು ಕತೆ. ಕೊನೆಗೆ ನಿನ್ನ ಕೋಣೆಯೂ ನಿನಗೆ ಉಳಿಯದು’ಎಂದು ಮೌನವಾದ ವೃದ್ಧನ ಮುಖ ಭಾವಹೀನ. “ನಿನ್ನದೇ ಒಂದು ರಾಜ್ಯವೇ ಇತ್ತಾ.?’ಎಂದು ಕೇಳಿದ ನನಗೇನೋ ಅನುಮಾನ.
“ರಾಜ್ಯದಂಥದ್ದೇ ಏನೋ ಒಂದಿತ್ತು ಬಿಡು, ನೀನು ನಿನ್ನ ಕನಸುಗಳನ್ನು ಬೆನ್ನಟ್ಟು . ಆದರೆ, ಬೇರೆಯವರ ಕನಸುಗಳನ್ನು ಕಿತ್ತುಕೊಳ್ಳಬೇಡ. ಬೇರೊಬ್ಬರ ಯಶಸ್ಸಿಗೆ ಅಡ್ಡಗಾಲಾಗಬೇಡ, ಮತ್ತೂಬ್ಬರ ಕೋಣೆ, ನಂಬಿಕೆ, ಹಾಡು ಯಾವುದಕ್ಕೂ ಆಸೆ ಪಡಬೇಡ’ ಎಂದ ಭಿಕ್ಷುಕ ನಿಧಾನಕ್ಕೆ ನಡೆಯುತ್ತ ರಾಗವಾಗಿ ಹಾಡೊಂದನ್ನು ಹಾಡಲಾರಂಭಿಸಿದ್ದ. ನಾನು ಹಿಂದೆಂದೂ ಕೇಳಿರದ ಹಾಡು ಅದು. ಅವನದ್ದೇ ಸ್ವಂತ ರಚನೆಯಿರಬೇಕು ಎಂದುಕೊಂಡೆ. ನೂರು ಕಾಲ ಬಾಳು ಗೆಳೆಯ, ಬದುಕಲ್ಲಿ ಸಿಗಲಿ ನಿನಗೆಲ್ಲ ಸನ್ಮಾನ. ಆದರೆ, ನೆನಪಿಡು, ದಯವಿಟ್ಟು ಕಸಿಯಬೇಡ ಇನ್ನೊಬ್ಬರ ಗಾನ…
ಹೀಗೆ ಹಾಡುತ್ತ ಅವನು ಮುಂದಕ್ಕೆ ನಡೆಯಲಾರಂಭಿಸಿದ್ದರೇ, ಲಿಚೀ ಮರದ ಮೇಲೆ ಕುಳಿತ ನಾನು, ಇಷ್ಟು ಬುದ್ಧಿವಂತನಾದ ವ್ಯಕ್ತಿಯೊಬ್ಬ ಹೀಗೆ ಭಿಕಾರಿಯಾಗಿದ್ದು ಹೇಗೆ ಎಂದು ಯೋಚಿಸುತ್ತಿದ್ದೆ. ಬಹುಶಃ ಭಿಕಾರಿ ಆದ ಮೇಲೆಯೇ ಅವನು ಅಷ್ಟು ಬುದ್ಧಿವಂತನಾದನೇನೋ.ಅವನು ಹೊರಟ ಕೊಂಚ ಸಮಯಕ್ಕೆ ಮರವಿಳಿದು ನಾನು ಮನೆಗೆ ನಡೆದೆ. ಮನೆಯವರೆದುರು ನನ್ನ ಪ್ರತ್ಯೇಕ ಕೋಣೆಯ ಬೇಡಿಕೆಯನ್ನಿಟ್ಟು,ಖಾಸಗಿ ಕೋಣೆಯನ್ನು ಪಡೆದುಕೊಂಡೆ.ಆಗ್ರಹವಿಲ್ಲದೇ ಸ್ವಾತಂತ್ರ್ಯವೂ ಸಿಗಲಾರದು ಎನ್ನುವುದು ನನಗರಿವಾಗಿದ್ದು ಆಗಲೇ. ಅನುವಾದ : ಗುರುರಾಜ ಕೊಡ್ಕಣಿ,ಯಲ್ಲಾಪುರ
ಮೂಲ : ರಸ್ಕಿನ್ ಬಾಂಡ್ ಅವರ “ವಾಟ್ಸ್ ಯುವರ್ ಡ್ರೀಮ…’