Advertisement

2024 Year End:ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲುವು, ರಾಮಮಂದಿರ..ಜಾಗತಿಕ ವಿದ್ಯಮಾನಗಳ ಘಟನೆ

06:06 PM Dec 10, 2024 | Team Udayavani |

ಕಣ್ಮುಚ್ಚಿ ಕಣ್ಣು ಬಿಟ್ಟಾಗ 2024 ರ ಪ್ರಾರಂಭದಲ್ಲಿದ್ದ ನಾವು ಈಗ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿದ್ದೇವೆ. 2025 ಕ್ಕೆ ಆಮಂತ್ರಣವಿಟ್ಟು ಮುಂದಿನ ದಿನಗಳನ್ನು ಎದುರು ನೋಡುತ್ತಿದ್ದೇವೆ. ಹೀಗಿದ್ದಾಗ ಈ ವರ್ಷ ಅಂದರೆ 2024 ರಲ್ಲಿ ಪ್ರಪಂಚದಾದ್ಯಂತ  ಹಲವಾರು ಘಟನೆಗಳು, ಕಾರ್ಯಗಳು ನಡೆದಿವೆ. ಮುಂದೆಯೂ ನಡೆಯುತ್ತಲೇ ಇರುತ್ತದೆ ಎನ್ನುವುದು ಸತ್ಯ. ಆದರೆ ಕಳೆದು ಹೋದ ಕೆಲವು ಘಳಿಗೆಗಳನ್ನು ನೆನೆಯುವುದು ಬಹಳ ಮುಖ್ಯ. ಅವುಗಳು ದೇಶ ಕಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸುವುದಲ್ಲದೇ, ಭವಿಷ್ಯದಲ್ಲಿ ಬೆಳಕಾಗಿ ನಿಲ್ಲುತ್ತದೆ. ಆ ನಿಟ್ಟಿನಲ್ಲಿ 2024ರಲ್ಲಿ ಜಾಗತಿಕವಾಗಿ ನಡೆದ ಕೆಲವು ವಿದ್ಯಮಾನಗಳ ಬಗ್ಗೆ ಇಲ್ಲೊಂದು ಟಿಪ್ಪಣಿ.

Advertisement

ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಉಡಾವಣೆ
ಹಲವು ವಿಳಂಬಗಳು ಹಾಗೂ ಬಜೆಟ್‌ ಮೀರಿದ ವೆಚ್ಚಗಳಂತಹ ಸವಾಲುಗಳನ್ನು ದಾಟಿ ಬೊಯಿಂಗ್‌ನ ಸ್ಟಾರ್‌ಲೈನರ್ (Starliner) ಬಾಹ್ಯಾಕಾಶ ನೌಕೆಯು ಉಡಾವಣೆಯಾಯಿತು.

ಆದರೆ ಬಾಹ್ಯಾಕಾಶ ನೌಕೆಯಲ್ಲಿ ಥ್ರಸ್ಟರ್‌ ಅಸಮರ್ಪಕತೆಯಂತಹ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಹಾಗಾಗಿ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್‌ (Sunita Williams) ಮತ್ತು ಬ್ಯಾರಿ ವಿಲ್ಮೋರ್‌ (Barry Wilmore) ಇವರಿಗೆ ಮರಳಿ ಭೂಮಿಗೆ ಬರಲು ಸ್ಪೇಸ್‌ ಎಕ್ಸ್‌ ಕ್ರ್ಯೂ ಡ್ರ್ಯಾಗನ್ (SpaceX crew Dragon) ಎಂಬ ವಿಭಿನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗಿದೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿ ಭೂಮಿಗೆ ಮರಳಿದೆ. ಆದರೆ ಗಗನಯಾತ್ರಿಗಳು ಇನ್ನೂ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡಿದ್ದಾರೆ. ಅವರು 2025ರ ಜನವರಿ ತಿಂಗಳಿನಲ್ಲೇ ಬರುವ ಸಾಧ್ಯತೆಯಿದೆ.

ಭಾರತ 13 ವರ್ಷಗಳ ನಂತರ ಕ್ರಿಕೆಟ್‌ ವಿಶ್ವಕಪ್ ಗೆದ್ದಿತು…


ಕ್ರಿಕೆಟ್‌ ಪ್ರಿಯರಿಗೆ 2024 ಬಹಳ ಸ್ಮರಣೀಯ. ಕಾರಣ ಭಾರತದ ಕ್ರಿಕೆಟ್‌ ತಂಡವು ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ20 (T20) ವಿಶ್ವಕಪ್‌  ಗೆದ್ದು ಬೀಗಿತು. ಜೊತೆಗೆ ಇದು ಭಾರತದ ಕೆಲವು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಿಗೆ ಕೊನೆಯ ಪಂದ್ಯವಾಗಿತ್ತು.

Advertisement

ಒಲಿಂಪಿಕ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಕಂಚಿನ ಪದಕ


ಕ್ರಿಕೆಟ್‌ ನಲ್ಲಿ ವಿಶ್ವ ಕಪ್‌ ಗೆದ್ದ ಹೆಮ್ಮೆಯ ಜೊತೆಗೆ 2024ರಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಮತ್ತೊಂದು ಗೆಲುವನ್ನು ಸಾಧಿಸಿತು. ಪ್ಯಾರಿಸ್‌ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್‌ ಅವರು ಕುಸ್ತಿಯಲ್ಲಿ ಅನರ್ಹಗೊಂಡ ಬೇಸರದ ಸಂಗತಿಯೊಂದಿಗೆ, ಭಾರತೀಯ ಪುರುಷರ ಹಾಕಿ ತಂಡವು 2-1 ಗೋಲುಗಳಿಂದ ಸ್ಪೇನ್‌ ತಂಡವನ್ನು ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದಿತು.

ರಾಮ ಮಂದಿರ ಉದ್ಘಾಟನೆ


ಭಾರತ ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಅದೆಷ್ಟೋ ಲಕ್ಷಾಂತರ ಹಿಂದೂಗಳಿಗೆ, ಹಲವು ತಲೆಮಾರುಗಳ ಕನಸನ್ನು ನನಸಾಗಿಸಿದ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯು 2024ಕ್ಕೆ ಉತ್ತಮ ಚಾಲನೆಯನ್ನು ನೀಡಿತು. ಇದರೊಂದಿಗೆ ಹಲವು ದಶಕಗಳ ರಾಜಕೀಯ ಚರ್ಚೆಯೊಂದಕ್ಕೆ ಕೊನೆ ಹಾಡಲಾಯಿತು.

2024 ರ ಲೋಕಸಭೆ ಚುನಾವಣೆ


2024 ರಲ್ಲಿ ಭಾರತದಲ್ಲಿ ಅತ್ಯಂತ ಪ್ರಬಲವಾದ ಸುದ್ದಿ ಹಾಗೂ ಘಟನೆ ಎಂದರೆ ಮೋದಿಯವರ 3.0 ಹಾಗೂ ಎನ್‌ ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದು ಸತತ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಿರುವುದು.

ಅಮೆರಿಕ ಅಧ್ಯಕ್ಷರಾಗಿ ಮತ್ತೊಮ್ಮೆ ಟ್ರಂಪ್


2024 ರಲ್ಲಿ ವಿಶ್ವದಲ್ಲಿ ನಡೆದ ಹಲವಾರು ಸಂಗತಿಗಳಲ್ಲಿ ಒಂದು ಅತ್ಯಂತ ಕುತೂಹಲದಿಂದ ವೀಕ್ಷಿಸಲ್ಪಟ್ಟ ಚುನಾವಣೆ ಯುಎಸ್ ಅಧ್ಯಕ್ಷೀಯ ಚುನಾವಣೆ. ಇದರಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆಲುವನ್ನು ಸಾಧಿಸಿರುವುದು. ಎರಡನೇ ಬಾರಿಗೆ ಯುಎಸ್‌ ಅಧ್ಯಕ್ಷರಾಗಿ ಆಯ್ಕೆಯಾದರು.

ಶ್ರೀಮಂತಿಕೆ ಹೆಚ್ಚಿಸಿಕೊಂಡ ಎಲಾನ್‌ ಮಸ್ಕ್ 


ತಮ್ಮ ಬಹು ಉದ್ಯಮಗಳೊಂದಿಗೆ ಯಶಸ್ಸನ್ನು ಅನುಭವಿಸುವ ಮೂಲಕ ಎಲಾನ್ ಮಸ್ಕ್‌ಗೆ 2024 ಉತ್ತಮ ವರ್ಷವಾಗಿತ್ತು. ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ ಮೇಲೆ ಹೆಚ್ಚು ‘ಹೂಡಿಕೆ’ ಮಾಡಿದ್ದು, ಅವರ ಗೆಲುವು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರಿಗೆ ಹೆಚ್ಚಿನ ಲಾಭವನ್ನು ತಂದೊಡ್ಡಿತು.

ರಷ್ಯಾದ ಕೆಲವು ಪ್ರದೇಶಗಳನ್ನು ಆಕ್ರಮಿಸಿದ ಉಕ್ರೇನ್‌


2022 ರಲ್ಲಿ ಪ್ರಾರಂಭವಾದ ರಷ್ಯಾ ಉಕ್ರೇನ್‌ ಯುದ್ಧವು ಸತತ ಒಂದೂವರೆ ವರ್ಷಗಳಾದರು ಇನ್ನೂ ಮುಂದುವರಿದಿದೆ. ಆದರೆ ಆಗಸ್ಟ್‌ 2024 ರಲ್ಲಿ ಉಕ್ರೇನ್‌ ಪಡೆಯು ರಷ್ಯಾದ ಕುರ್ಸ್ಕ್ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿದ್ದಲ್ಲದೆ ಅವುಗಳನ್ನು ವಶಪಡಿಸಿಕೊಂಡಿತು. ಜೊತೆಗೆ ರಷ್ಯಾದ ಹಲವಾರು ಪ್ರಯತ್ನಗಳ ಹೊರತಾಗಿಯು ಉಕ್ರೇನ್‌ ಈ ಪ್ರದೇಶಗಳಲ್ಲಿ ತನ್ನ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಮಹಾಯುದ್ದದ ಬಳಿಕ ಇದು ಮೊದಲನೇ ಬಾರಿಗೆ ವಿದೇಶಿ ಮಿಲಿಟರಿಯು ರಷ್ಯಾದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next