Advertisement

ವರ್ಷಾಂತ್ಯದ ಪಂಚರಾಜ್ಯಚುನಾವಣೆ: ಶುರುವಾಗಿದೆ ಲೆಕ್ಕಾಚಾರ

09:01 PM May 17, 2023 | Team Udayavani |

ನವದೆಹಲಿ: ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಜಯಗಳಿಸಿದೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದರೆ, ಮಿಜೋರಾಂನಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌ ಅಧಿಕಾರದಲ್ಲಿ ಇದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿ ಅಧಿಕಾರ ನಡೆಸುತ್ತಿದೆ.

Advertisement

2004ರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. 2018 ಡಿಸೆಂಬರ್‌ನಿಂದ 2020 ಮಾರ್ಚ್‌ ಅವಧಿಯಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿ ಇತ್ತು. 2008 ಮತ್ತು 2013ರಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ಪ್ರಾಪ್ತಿಯಾಗಿತ್ತು. 2008ರ ಚುನಾವಣೆಯಲ್ಲಿ ಬಿಜೆಪಿಗೆ 143 ಸ್ಥಾನಗಳು ಬಂದಿದ್ದರೆ, ಶೇ.37.64 ಮತಗಳೂ ಪ್ರಾಪ್ತಿಯಾಗಿದ್ದವು. ಕಾಂಗ್ರೆಸ್‌ಗೆ 71 ಸ್ಥಾನಗಳು ಮತ್ತು ಶೇ.32.39 ಮತಗಳು ಬಂದಿದ್ದವು. 2013ರಲ್ಲಿ ಬಿಜೆಪಿಗೆ 163 ಸೀಟುಗಳು, ಶೇ.44.88 ಮತಗಳು, ಕಾಂಗ್ರೆಸ್‌ಗೆ 58 ಸೀಟುಗಳು, ಶೇ.36.38 ಮತಗಳು ಬಂದಿದ್ದವು.
2018ರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶೇ.41 ಮತ ಪಡೆದುಕೊಂಡಿದ್ದವು. ಬಿಜೆಪಿಗೆ 104, ಕಾಂಗ್ರೆಸ್‌ 114ರ ಸಮೀಪದ ಸೀಟುಗಳನ್ನು ಪಡೆದುಕೊಂಡಿದ್ದವು.

ಛತ್ತೀಸ್‌ಗಡ: 2000ನೇ ಇಸವಿಯಲ್ಲಿ ರಚನೆಗೊಂಡ ರಾಜ್ಯದಲ್ಲಿ ಮೊದಲ 15 ವರ್ಷ ಡಾ.ರಮಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ನಡೆಸಿತ್ತು. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 90 ಕ್ಷೇತ್ರಗಳ ಪೈಕಿ 68ನ್ನು ಗೆದ್ದು ಅಧಿಕಾರ ವಹಿಸಿಕೊಂಡಿತು. ಬಿಜೆಪಿಗೆ ಶೇ.33 ಮತಗಳು ಪ್ರಾಪ್ತಿಯಾಗಿ 15 ಸೀಟುಗಳಲ್ಲಿ ಜಯ ಸಾಧಿಸಿತ್ತು. ಬಿಎಸ್‌ಪಿ ಕೂಡ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿತ್ತು.

ರಾಜಸ್ಥಾನ: ಕಳೆದ ಮೂವತ್ತು ವರ್ಷಗಳಿಂದ ಈ ರಾಜ್ಯದಲ್ಲಿ ಒಂದು ಬಾರಿ ಅಧಿಕಾರ ನಡೆಸಿದ ಪಕ್ಷ ಮತ್ತೂಂದು ಅವಧಿಗೆ ಅಧಿಕಾರ ಉಳಿಸಿಕೊಂಡದ್ದೇ ಇಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಆವರ್ತನದಂತೆ ಅಧಿಕಾರ ನಡೆಸಿವೆ. 2013ರಲ್ಲಿ 200 ಸ್ಥಾನಗಳ ಪೈಕಿ ಬಿಜೆಪಿ 163ನ್ನು ಗೆದ್ದಿತ್ತು. ಕಾಂಗ್ರೆಸ್‌ 21 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ 2008 ಮತ್ತು 2018ರಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಸಂದರ್ಭದಲ್ಲಿ ಬಹುಮತಕ್ಕೆ ಬೇಕಾಗಿರುವ 101 ಸೀಟುಗಳಿಗಿಂತ ಹೆಚ್ಚು ಪಡೆದಿರಲಿಲ್ಲ. ಸದ್ಯ ಇರುವ ಅಶೋಕ್‌ ಗೆಹಲೋತ್‌ ಸರ್ಕಾರಕ್ಕೆ ಬಿಎಸ್‌ಪಿಯ ಬೆಂಬಲವೂ ಇದೆ. ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಮತ್ತು ಸಿಎಂ ಅಶೋಕ್‌ ಗೆಹಲೋತ್‌ ನಡುವಿನ ಭಿನ್ನಾಭಿಪ್ರಾಯ ಕಾಂಗ್ರೆಸ್‌ಗೆ ಎರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತೆಲಂಗಾಣ: ಆಂಧ್ರಪ್ರದೇಶದಿಂದ 2014ರಲ್ಲಿ ಪ್ರತ್ಯೇಕ ರಾಜ್ಯವಾಗಿ ಉದಯಿಸಿದ ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿ ನೇತೃತ್ವದ ಪಕ್ಷದ ಸರ್ಕಾರವಿದೆ. 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 188 ಕ್ಷೇತ್ರಗಳ ಪೈರಿ ಬಿಆರ್‌ಎಸ್‌ 88 ಸ್ಥಾನಗಳನ್ನು ಪಡೆದುಕೊಂಡಿತ್ತು (ಶೇ.47). 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ಗೆ ಶೇ.28 ಮತ ಪ್ರಾಪ್ತಿಯಾಗಿತ್ತು. ಬಿಜೆಪಿ ಈ ರಾಜ್ಯದಲ್ಲಿ ಹೆಚ್ಚು ಪ್ರಭಾವಯುತವಾಗಿಲ್ಲ. ಸಂಸದ ಅಸಾದುದ್ದೀನ್‌ ಒವೈಸಿ ಅವರ ಎಂಐಎಂ ಪಕ್ಷ ಕೂಡ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದೆ.

Advertisement

ಮಿಜೋರಾಂ: ನಲವತ್ತು ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಮಿಜೋ ನ್ಯಾಷನಲ್‌ ಫ್ರಂಟ್‌ ಅಧಿಕಾರದಲ್ಲಿದೆ. ಆ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ 27 ಸೀಟುಗಳು ಲಭಿಸಿದ್ದವು. ಬಹುಮತ ಪ್ರಾಪ್ತಿಯಾಗದ್ದರಿಂದ ಪಕ್ಷೇತರ ಶಾಸಕರ ಬೆಂಬಲದಿಂದ ಮಿಜೋ ನ್ಯಾಷನಲ್‌ ಫ್ರಂಟ್‌ ಈಗ ಅಧಿಕಾರದಲ್ಲಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 32 ಸ್ಥಾನಗಳು, ಶೇ.38.89, ಎಂಎನ್‌ಎಫ್ಗೆ 3 ಸ್ಥಾನಗಳು ಮತ್ತು ಶೇ.30.65 ಮತಗಳು, 2013ರಲ್ಲಿ ಕಾಂಗ್ರೆಸ್‌ಗೆ 34 ಸ್ಥಾನಗಳು ಮತ್ತು ಶೇ.44.63, ಎಂಎನ್‌ಎಫ್ಗೆ 5 ಮತ್ತು ಶೇ.28.65 ಮತಗಳು ಲಭಿಸಿದ್ದವು. 2018ರಲ್ಲಿ ಬಿಜೆಪಿ 1 ಸ್ಥಾನ ಗಳಿಸಿದೆ. ಇತರರು 8 ಕ್ಷೇತ್ರಗಳಲ್ಲಿ ಗೆದ್ದಿದ್ದು, ಶೇ. 22.94 ಮತ ಪ್ರಮಾಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next