ವಿಜಯಪುರ: ತಮ್ಮ ವಿರುದ್ಧ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರೊಬ್ಬರು ನಾನು ಕಾರು ಚಾಲಕನ ಹತ್ಯೆ ಮಾಡಿದ್ದಾಗಿ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು 24 ಗಂಟೆಯಲ್ಲಿ ಸಿಬಿಐ ತನಿಖೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯತ್ನಾಳ, ತಮ್ಮ ಸರ್ಕಾರದ ಸಂಪುಟ ದರ್ಜೆ ಸಚಿವರೊಬ್ಬರು ಜ.14 ರಂದು ಮಾಡಿರುವ ಆರೋಪದಲ್ಲಿ ವಿಜಯಪುರ ಕಾರು ಚಾಲಕನ ಹತ್ಯೆ ಮಾಡಿದ್ದಾಗಿ ಗಂಭೀರ ಆರೋಪ ಮಾಡಿದ್ದಾರೆ. ಇಂಥ ಸುಳ್ಳು ಆರೋಪಗಳು ರಾಜ್ಯದ ಜನರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶದ ಜನರಿಗೆ ಸತ್ಯಾಸತ್ಯತೆಯನ್ನು ತಿಳಿಸಲು ಸಿಬಿಐ ತನಿಖೆ ನಡೆಸಿ, ಸತ್ಯವನ್ನು ಹೊರ ಹಾಕುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಾಗಿ ಹತ್ಯಾ ಆರೋಪದ ಬಗ್ಗೆ ಜನತೆಗೆ ಸತ್ತಾಸತ್ಯತೆ ತಿಳಿಸಲು 24 ಗಂಟೆಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಅಂತಿಮ ಏಕದಿನ: ಟಾಸ್ ಗೆದ್ದ ಭಾರತ ತಂಡದಲ್ಲಿ ಸೂರ್ಯ-ಸುಂದರ್ ಗೆ ಜಾಗ
Related Articles
ಸುಳ್ಳು ಆರೋಪ ಮಾಡಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಪುಟದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಯತ್ನಾಳ ಆಗ್ರಹಿಸಿದ್ದಾರೆ.
ಜ.14 ರಂದು ಸಚಿವ ಮುರುಗೇಶ ನಿರಾಣಿ ವಿಜಯಪುರದ ಎಲುಬಿಲ್ಲದ ನಾಲಿಗೆಯವನೊಬ್ಬ ತನ್ನ ಕಾರು ಚಾಲಕನ ಹತ್ಯೆ ಮಾಡಿಸಿದ್ದ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪವನ್ನೇ ಉಲ್ಲೇಖಿಸಿ, ನಿರಾಣಿ ಹೆಸರು ಪ್ರಸ್ತಾಪಿಸದೇ ಸಂಪುಟ ದರ್ಜೆ ಸಚಿವರೊಬ್ಬರು ಎಂದು ನಮೂದಿಸಿ ಸಿಬಿಐ ತನಿಖೆ ನಡೆಸಿ ಎಂದು ಯತ್ನಾಳ ಪತ್ರ ಬರೆದಿದ್ದಾರೆ.