ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವ ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕೆ ಮಾಡುವುದಿಲ್ಲ ಎಂದು ಹಿರಿಯರಾದ ಯತ್ನಾಳ ಅವರು ಹೇಳಿರುವುದು ಪಕ್ಷದ ಬೆಳವಣಿಗೆ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರು ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್. ಯಡಿಯೂರಪ್ಪ ಕುರಿತು ಮಾತನಾಡುವುದಿಲ್ಲ ಎಂದಿರುವ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಬಗ್ಗೆ ಗಮನ ಸೆಳೆದರು.
ಇದಕ್ಕೆ ಪ್ರತಿಯಿಸಿದ ವಿಜಯೇಂದ್ರ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರಾದ ಯತ್ನಾಳ ಅವರ ನಡೆ ಒಳ್ಳೆಯ ಬೆಳವಣಿಗೆ ಎಂದು ಭಾವಿಸಿರುವೆ. ಹಿರಿಯರಾದ ಯತ್ನಾಳ ಅವರ ಬಗ್ಗೆ ನಾನು ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದರು.
ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಎಲ್ಲ ಸಮುದಾಯದ ಜನರು ಒಪ್ಪಿಕೊಂಡಿರುವ ಧೀಮಂತ ನಾಯಕ. ಹೀಗಾಗಿ ಯಡಿಯೂರಪ್ಪ ಅವರಿಗೆ ಎಸೆಯುವ ಕಲ್ಲು ಪಕ್ಷಕ್ಕೆ ಪೆಟ್ಟು ನೀಡಲಿದೆ. ಪಕ್ಷದ ಮೇಲಾಗುವ ಹೊಡೆತ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದ ದಿನಗಳಲ್ಲಿ ಇದು ಎಲ್ಲರಿಗೂ ಅರ್ಥವಾಗಲಿದೆ ಎಂದರು.
Related Articles
ಇದನ್ನೂ ಓದಿ:ಯಾರಿಗೂ ಹೆದರುವ ಮಾತಿಲ್ಲ..: ರಾಯಚೂರಿನಲ್ಲಿ ಗಾಲಿ ರೆಡ್ಡಿ ಟೆಂಪಲ್ ರನ್
ಏನೇ ಸಮಸ್ಯೆ ಇದ್ದರೂ ಆಂತರಿಕವಾಗಿ ಬಗೆ ಹರಿಸಿಕೊಳ್ಳಬೇಕು. ಇಂಥ ವಿಷಯದ ಬಗ್ಗೆ ಮಾತನಾಡಲು ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ ಎಂದರು.
ಹಿರಿಯರಾದ ಯತ್ನಾಳ ಅವರ ಬಗ್ಗೆ ನಮಗೆ ವೈಯಕ್ತಿಕ ವಿರೋಧಗಳಿಲ್ಲ. ನಮ್ಮ ಹೇಳಿಕೆ, ಆಲೋಚನೆಗಳು ಪಕ್ಷಕ್ಕೆ ಪೂರಕವಾಗಿರಬೇಕೇ ಹೊರತು, ಪಕ್ಷಕ್ಕೆ ಧಕ್ಕೆ ತರುವಂತೆ ಇರಬಾರದು. ಚುನಾವಣೆ ಹೊತ್ತಿನಲ್ಲಿರುವ ಈ ಹಂತದಲ್ಲಿ ಇಂಥ ವಿಷಯಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೈಯನ್ನು ಇನ್ನಷ್ಟು ಬಲಪಡಿಸಬೇಕಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಬಲಪಡಿಸಿ, ಮುನ್ನಡೆಸಿಕೊಂಡು ಹೋಗುವ ಕರ್ತವ್ಯ ನಿಭಾಯಿಸಬೇಕಿದೆ ಎಂದರು.