ವಿಜಯಪುರ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ಸಂಘಟನೆಗಾಗಿ ಶನಿವಾರ ಜಿಲ್ಲೆಗೆ ಭೇಟಿ ನೀಡಿದರೂ ಪಕ್ಷದ ಬಂಡುಕೋರ ಶಾಸಕರೆಂದೇ ಬಿಂಬಿಸಲಾದ ಬಸನಗೌಡ ಪಾಟೀಲ ಯತ್ನಾಳ ಎಲ್ಲಿಯೂ ಕಾಣಿಸಿಕೊಳ್ಳದೇ ಗೈರಾಗಿ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಬಹುತೇಕ ಜೆ.ಪಿ.ನಡ್ಡಾ ನಗರ ಹಾಗೂ ಸಿಂದಗಿ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ನಗರಕ್ಕೆಆಗಮಿಸುತ್ತಲೇ ಸಿದ್ಧೇಶ್ವರ ಶ್ರೀಗಳಿಗೆ ನಮನ ಸಲ್ಲಿಸಲು ಜ್ಞಾನಯೋಗಶ್ರಮಕ್ಕೆ ಭೇಟಿ ನೀಡಿದ್ದರು. ಬಳಿಕ ವಿಜಯಪುರ ನಗರಪಾಲಿಕೆ ವ್ಯಾಪ್ತಿಯ ನಾಗಠಾಣಾ ಕ್ಷೇತ್ರದ ಪಕ್ಷದ ಮನೆ ಮನೆ ಕರಪತ್ರ ವಿತರಣೆ, ಗೋಡೆ ಬರಹದಂಥ ಕಾರ್ಯಕ್ರಮದಲ್ಲಿ ನಡ್ಡಾ ಪಾಲ್ಗೊಂಡಿದ್ದರು.
ನಗರದಲ್ಲಿ ನಡ್ಢಾ ಪಾಲ್ಗೊಂಡ ಇಂಥ ಯಾವುದೇ ಕಾರ್ಯಕ್ರಮದಲ್ಲಿ ಪಕ್ಷದ ಶಾಸಕ ಯತ್ನಾಳ ಮಾತ್ರ ಎಲ್ಲಿಯೂ ಕಂಡುಬರಲಿಲ್ಲ.
ಮಧ್ಯಾಹ್ನ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪಕ್ಷದ ಸಂಘಟನೆಗಾಗಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುವ ಬೃಹತ್ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಅಲ್ಲಿಗೂ ಯತ್ನಾಳ ಬಂದಿರಲಿಲ್ಲ.
Related Articles
ಪಕ್ಷದ ಸರ್ಕಾರ, ಮುಖ್ಯಮಂತ್ರಿ, ಸಚಿವರು, ನಾಯಕರ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿರುವ ಯತ್ನಾಳ, ಜ.21 ರಂದು ಜಿಲ್ಲೆಗೆ ಭೇಟಿ ನೀಡುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ನನ್ನ ಮಾತುಕತೆ ನಡೆಯಲಿದೆ ಎಂದಿದ್ದರು.
ಅಲ್ಲದೇ ಸದರಿ ಭೇಟಿ ಸಂದರ್ಭದಲ್ಲಿ ತಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದರು. ಆದರೆ ನಡ್ಡಾ ಅವರು ನಿಗದಿಯಂತೆ ನಗರಕ್ಕೆ ಭೇಟಿ ನೀಡಿದರೂ, ಯತ್ನಾಳ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳಲೇ ಇಲ್ಲ.
ಶನಿವಾರ ಯತ್ನಾಳ ಅವರು ನಗರದಲ್ಲೇ ಇದ್ದರೂ, ನಡ್ಡಾ ಅವರ ಭೇಟಿಗೆ ಮುಂದಾಗಲಿಲ್ಲ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ನಡ್ಡಾ ಅವರು ನಗರಕ್ಕೆ ಬರುವ ಹಂತದಲ್ಲೆ ಬೆಳಿಗ್ಗೆಯೇ ಶಾಸಕ ಯತ್ನಾಳ ಚಿಂಚೋಳಿಯಲ್ಲಿ ತಾವು ಸ್ಥಾಪಿಸಿರುವ ಸಕ್ಕರೆ ಕಾರ್ಖಾನೆಯತ್ತ ಪಯಣ ಬೆಳೆಸಿದ್ದರು.
ಮತ್ತೊಂದು ಮೂಲದ ಪ್ರಕಾರ ಪಕ್ಷದ ರಾಜ್ಯ ಘಟಕದ ಶಿಫಾರಸಿನಂತೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ನೀಡಿರುವ ನೋಟೀಸ್‍ಗೆ ಉತ್ತರಿಸಲು ಯತ್ನಾಳ ನವದೆಹಲಿಗೆ ತೆರಳಿದ್ದರು ಎನ್ನುವ ಸುದ್ದಿ ಹರಡಿತ್ತು.
ಈ ಕುರಿತು ನಿಖರ ಮಾಹಿತಿ ಪಡೆಯಲು ಹಾಗೂ ಶಾಸಕರ ಖಚಿತತೆ ಬಗ್ಗೆ ತಿಳಿಯಲು ಶಾಸಕರಿಗೆ ಹಾಗೂ ಅವರ ಆಪ್ತರಿಗೆ ಮೊಬೈಲ್ ಕರೆ ಮಾಡಿದರೆ ಕರೆ ಸ್ವೀಕಾರವಾಗಿಲ್ಲ. ಸ್ಥಳೀಯ ಆಪ್ತರಿಗೆ ಕರೆ ಮಾಡಿದರೂ ಶಾಸಕ ಯತ್ನಾಳ ಅವರ ಶನಿವಾರದ ಯಾವುದೇ ಕಾರ್ಯಕ್ರಮದ ಮಾಹಿತಿ ತಮಗೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದರಿಂದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಅವರ ಕ್ಷೇತ್ರಕ್ಕೆ ಭೇಟಿ ನೀಡಿದರೂ ಪಕ್ಷದ ಶಾಸಕ ಯತ್ನಾಳ ಎಲ್ಲಿಯೂ ಕಾಣಿಸಕೊಳ್ಳದೇ ಗೈರಾದದ್ದು ಚರ್ಚೆಗೆ ಗ್ರಾಸವಾಗಿದೆ.