ಕೋಲಾರ: ನಮ್ಮ ಪಕ್ಷದ ನಾಯಕರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಸ್ವಪಕ್ಷದವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆ ಪಕ್ಷದವರಿಗೆ ಹೇಗೆ ಗೊತ್ತಿರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ, ಶಾಸಕ ಡಾ.ಎಸ್.ಯತೀಂದ್ರ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.
ಕೋಲಾರಕ್ಕೆ ಭೇಟಿ ನೀಡಿದ್ದ ವೇಳೆ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದವರ ಸ್ಪರ್ಧೆ ವಿಚಾರ ಬೇರೆ ಪಕ್ಷದವರಿಗೆ ಏನು ಗೊತ್ತಿರುತ್ತದೆ ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ನನ್ನ ತಂದೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ಒಪ್ಪಿದರೆ ಸ್ಪರ್ಧಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮನೆಯನ್ನು ಎಂಎಲ್ಸಿ ಅನಿಲ್‌ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವ್ಯವಸ್ಥೆ ಮಾಡಿದ್ದು, ಮನೆ ನೋಡಿಕೊಂಡು, ಕೋಲಾರದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದರು.
ವರುಣಾ ಕ್ಷೇತ್ರಕ್ಕೂ ಬಂದು ಸ್ಪರ್ಧೆ ಮಾಡುವಂತೆ ತಂದೆಗೆ ಹೇಳಿದ್ದೇನೆ. ಆದರೆ, ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು. ಅದಕ್ಕೆ ಹೈಕಮಾಂಡ್ ಒಪ್ಪಬೇಕು ಎನ್ನುವ ಮನಸ್ಸು ಅವರದ್ದಾಗಿದೆ. ಇಲ್ಲಿಯೇ ಸ್ಪರ್ಧೆ ಘೋಷಣೆಯಾದರೆ ಕೊನೆಯ ಕ್ಷಣದಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡು ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಬೇಕಿದೆ ಎಂದರು.
ಕ್ಷೇತ್ರ ಸುತ್ತಾಡಿದ ಯತೀಂದ್ರ: ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಿಸಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ಯತೀಂದ್ರ ಸೋಮವಾರ ನಗರದಲ್ಲಿರುವ ಕೋಲಾರಮ್ಮ ದೇವಾಲಯಕ್ಕೆ ಭೇಟಿ ಸೇರಿ ಕ್ಷೇತ್ರ ವೀಕ್ಷಣೆ ನಡೆಸಿದರು.
ವರ್ತೂರು ಪ್ರಕಾಶ್‌ಗೆ ಜೈಕಾರ ಘೋಷಣೆ: ಕೋಲಾರ ತಾಲೂಕಿನ ಕಳ್ಳಿàಪುರಕ್ಕೆ ಭೇಟಿ ನೀಡಿದ್ದ ವೇಳೆ ಡಾ.ಯತೀಂದ್ರ ಎದುರೇ ಗ್ರಾಮಸ್ಥನೋರ್ವ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ಜೈಕಾರ ಹಾಕಿದ ಘಟನೆ ನಡೆಯಿತು.