ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಕೊನೆ ಚುನಾವಣೆ. ವರುಣಾ ಕ್ಷೇತ್ರದ ಬಾಗಿಲು ಅವರಿಗೆ ತೆರೆದಿದೆ. ಅಲ್ಲಿನ ಜನರು ಮುಕ್ತವಾಗಿ ಅವರನ್ನು ಸ್ವಾಗತಿಸುತ್ತಿದ್ದಾರೆ ಎಂದು ಶಾಸಕ ಡಾ|ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಕ್ಷೇತ್ರ ಇಲ್ಲ ಎನ್ನುವ ಮಾತೇ ಇಲ್ಲ. ಎಲ್ಲೆಡೆಯಿಂದಲೂ ಅವರಿಗೆ ಸ್ಪರ್ಧೆ ಮಾಡುವಂತೆ ಬೇಡಿಕೆ ಬರುತ್ತಿದೆ. ಹಲವರು ಅವರನ್ನು ಕ್ಷೇತ್ರಗಳಿಗೆ ಆಹ್ವಾನ ಮಾಡುತ್ತಿದ್ದಾರೆ. ಬಾದಾಮಿ ಕ್ಷೇತ್ರ ದೂರ ಆಗುವುದರಿಂದ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಅವರೇ ಹೇಳಿಕೊಂಡಿದ್ದಾರೆ.
ಕೊಪ್ಪಳಕ್ಕೂ ನಿಲ್ಲುತ್ತಾರೆ ಎನ್ನುವ ಮಾತಿಲ್ಲ. ಸಿದ್ದರಾಮಯ್ಯ ಅವರೇ ತಮ್ಮ ಕ್ಷೇತ್ರದ ಕುರಿತು ಘೋಷಣೆ ಮಾಡಿಕೊಂಡಿದ್ದಾರೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ಅಭಿಯಾನ ಮಾಡುತ್ತಿರುವುದೆಲ್ಲವೂ ಪ್ರತಿಪಕ್ಷದ ತಂತ್ರ. ವಿಪಕ್ಷದವರು ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎನ್ನುವ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಅವರನ್ನೇ ಟಾರ್ಗೆಟ್ ಮಾಡುವ ಕೆಲಸವೂ ಅವರಿಂದಲೇ ನಡೆದಿದೆ.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಲ್ಲಬೇಕು ಎನ್ನುವ ದೇವಿಯ ವಿಷಯದಲ್ಲಿ ವಿಶೇಷವೆನಿಲ್ಲ. ಅದು ನಮ್ಮ ಮನೆ ದೇವರಲ್ಲ. ನನ್ನನ್ನು ಆ ದೇವಸ್ಥಾನಕ್ಕೆ ಜನರು ಆಹ್ವಾನಿಸಿದ್ದರು. ನಾನು ಮೊದಲ ಬಾರಿಗೆ ಅಲ್ಲಿಗೆ ತೆರಳಿದಾಗ ಅಲ್ಲಿನ ಅರ್ಚಕರ ಮೈಯಲ್ಲಿ ದೈವ ಆಹ್ವಾನವಾಗಿ ಅವರು ಹೇಳಿದ್ದಾರೆ. ಅವರ ಹೇಳಿಕೆಗೂ ನಾವು ತೆಗೆದುಕೊಳ್ಳುವ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದರು.