Advertisement

ಯತೀಂದ್ರ ವಿರುದ್ಧ ಬಿಜೆಪಿಯಿಂದ ಯಾರು?

12:28 AM Mar 11, 2023 | Team Udayavani |

ಮೈಸೂರು: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆಯೂ ಟಿಕೆಟ್‌ ವಿಚಾರದಲ್ಲಿ ಚರ್ಚೆಗೆ ಮುನ್ನೆಲೆಗೆ ಬಂದಿತ್ತು. ಈ ಬಾರಿಯೂ ಸ್ಪರ್ಧೆಯ ವಿಚಾರದಲ್ಲಿ ಗಮನ ಸಳೆದಿದೆ.

Advertisement

ವರುಣಾ ಕ್ಷೇತ್ರದಲ್ಲಿ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯಿಂದ ಇಲ್ಲಿ ಸ್ಪರ್ಧಿಸಲು ಎಲ್ಲ ತಯಾರಿ ನಡೆಸಿದ್ದರು. ಕೊನೆ ಘಳಿಗೆಯಲ್ಲಿ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದ್ದರಿಂದ ಕಣದಿಂದ ದೂರ ಉಳಿದರು. ಈ ಸಲ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಮತ್ತೆ ಸ್ಪರ್ಧಿಸಬೇಕೆಂಬ  ಒತ್ತಡ ಕ್ಷೇತ್ರದಲ್ಲಿದೆ. ಸಿದ್ದರಾಮಯ್ಯ ಅವರು ಮಾತ್ರ ಕೋಲಾರದತ್ತ ಮುಖ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಸ್ಪರ್ಧೆ ವಿಚಾರದ ಚರ್ಚೆ ಇನ್ನೂ ನಿಂತಿಲ್ಲ.

ಕಳೆದ ಬಾರಿ ಜಯ ಸಾಧಿಸಿದ ಸಿದ್ದರಾಮಯ್ಯ ಅವರ ಪುತ್ರ ಕಾಂಗ್ರೆಸ್‌ನ ಡಾ| ಯತೀಂದ್ರ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನಿಂದ ಈ ಬಾರಿಯೂ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಕ್ಷೇತ್ರದಲ್ಲಿ  ವೀರಶೈವ-ಲಿಂಗಾಯತರು, ಕುರುಬರು, ದಲಿತರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಬಿಜೆಪಿಗೆ ನೆಲೆ ಇದೆ. ಈ ಬಾರಿಯೂ ವಿಜಯೇಂದ್ರ ಅವರ ಸ್ಪರ್ಧೆ ಬಗ್ಗೆ ಕೂಗು ಕೇಳಿ ಬಂದರೂ ಯಡಿಯೂರಪ್ಪ ಅವರ ಚುನಾವಣ ರಾಜಕೀಯ ನಿವೃತ್ತಿಯ ಘೋಷಣೆ ಅನಂತರ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆಗೆ ಮುಂದಾಗಿದ್ದಾರೆ. ಹೀಗಾಗಿ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂಬ ಬಿಜೆಪಿಯ ಒಂದು ಬಣದಲ್ಲಿನ  ಕೂಗು ತಣ್ಣಗಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ 2016ರಲ್ಲಿ ನಡೆದ ಜಿ. ಪಂಚಾಯತ್‌ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ನಾಲ್ಕು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿತ್ತು. ವರುಣಾ, ಹದಿನಾರು, ತಗಡೂರು, ದೊಡ್ಡ  ಕೌಲಂದೆ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳು ಬಿಜೆಪಿ ಪಾಲಾಗಿತ್ತು.  ಆಗ ತಗಡೂರು ಜಿಲ್ಲಾ ಪಂಚಾಯತ್‌  ಕ್ಷೇತ್ರದಲ್ಲಿ ಗೆದ್ದಿದ್ದ ಬಿ.ಎನ್‌. ಸದಾನಂದ, ಹದಿನಾರು ಕ್ಷೇತ್ರದ ಸದಸ್ಯರಾಗಿದ್ದ  ಗುರುಸ್ವಾಮಿ ಅವರು ಈಗ ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಗಳು. ಸದಾನಂದ ಸಹಕಾರ ಕ್ಷೇತ್ರದ ಧುರೀಣರು. ಎಂಸಿಡಿಸಿಸಿ ಬ್ಯಾಂಕ್‌ ಹಾಗೂ ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ ಹಾಲಿ ಉಪಾಧ್ಯಕ್ಷರು. ಡಿಪ್ಲೊಮಾ ಮೆಕಾನಿಕಲ್‌ ಎಂಜಿನಿಯರಿಂಗ್‌ ಓದಿರುವ 49 ವರ್ಷದ ಸದಾನಂದ ಈ ಹಿಂದೆ ಭಾರತೀಯ ಭೂ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದರು.

ಬಿಜೆಪಿಯಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರೂ ಆಗಿರುವ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾದ  ಮಮತಾ ಶಿವಪ್ರಸಾದ್‌, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಟಿ.ಬಸವರಾಜು, ಯುವ ಮುಖಂಡರಾದ ಶರತ್‌ ಪುಟ್ಟಬುದ್ದಿ, ದೇವನೂರು ಪ್ರತಾಪ್‌,  ಎಲ್‌.ಆರ್‌.ಮಹದೇವಸ್ವಾಮಿ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

Advertisement

ಬಿಜೆಪಿ ಟಿಕೆಟ್‌ ಆಕಾಂಕ್ಷಿ 41 ವರ್ಷದ ಶರತ್‌ ಪುಟ್ಟಬುದ್ದಿ ಅವರು ಮೂಲತಃ ಸಾಫ್ಟವೇರ್‌ ಎಂಜಿನಿಯರ್‌. ಅಮೆರಿಕ ದಲ್ಲಿ ಕೆಲಸ ಮಾಡಿ ವಾಪಸಾಗಿ  ಕಳೆದ ವರ್ಷ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದಾರೆ. ಅವರ ತಂದೆ ಕೆ.ಎನ್‌.ಪುಟ್ಟಬುದ್ದಿ ಈ ಹಿಂದೆ 1980ರ ದಶಕದಲ್ಲಿ ಜನತಾ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಮೈಸೂರು ಜಿಲ್ಲಾ ಪರಿಷತ್‌ನ ಮೊದಲ ಅಧ್ಯಕ್ಷರಾಗಿದ್ದರು. ಪುಟ್ಟಬುದ್ದಿ ಅವರು ಅನೇಕ ವರ್ಷಗಳ ಹಿಂದೆಯೇ ಬಿಜೆಪಿ ಸೇರಿದರು. ಶರತ್‌ ಅವರು ಅಮೆರಿಕದಲ್ಲಿ ಓವರ್‌ಸೀಸ್‌ ಫ್ರೆಂಡ್ಸ್‌ ಆಫ್ ಬಿಜೆಪಿ ಸಂಘಟನೆಯಲ್ಲಿ ಕೆಲಸ ಮಾಡಿದ್ದಾರೆ. ಜೆಡಿಎಸ್‌ನಿಂದ ಎಂ.ಅಭಿಷೇಕ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಸಿದ್ದು ಮತ್ತೆ ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸ

ವರುಣಾ ಜನ ಇನ್ನೂ ಮೋದಿ ಅವರೇ ಇಲ್ಲಿಂದ ಕಣಕ್ಕಿಳಿಯುತ್ತಾರೆ ಎಂಬ ವಿಶ್ವಾಸವಿರಿಸಿಕೊಂಡಿದ್ದಾರೆ. ಕ್ಷೇತ್ರ ಪುನರ್‌ ವಿಂಗ ಡಣೆ ಅನಂತರ ವರುಣಾ ಕ್ಷೇತ್ರ 2008ರಲ್ಲಿ ರಚನೆಯಾಯಿತು. ಸಿದ್ದರಾಮಯ್ಯ 2008  ಸ್ಪರ್ಧಿಸಿ ಗೆದ್ದು ವಿಧಾನಸಭೆ ವಿಪಕ್ಷ ನಾಯಕರಾದರು. ಮತ್ತೆ 2013ರಲ್ಲಿ ಗೆದ್ದು ಸಿಎಂ ಆದರು. 2018ರಲ್ಲಿ  ಪುತ್ರ ಡಾ| ಯತೀಂದ್ರರಿಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಿಂದ ಕಣಕ್ಕೆ ಇಳಿದರು. ಈಗ ಕೋಲಾರದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಆದರೂ ವರುಣಾ ಕ್ಷೇತ್ರವೇ ಸಿದ್ದರಾಮಯ್ಯಗೆ ಸೇಫ್ ಆಗಿದ್ದು ಕಡೆಗೆ ಇಲ್ಲಿಗೆ ಬರಬಹುದು ಎನ್ನಲಾಗುತ್ತಿದೆ.

– ಕೂಡ್ಲಿ ಗುರುರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next