ವಿಜಯಪುರ: ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಆಲಮಟ್ಟಿಗೆ ವಾಸ್ತವಿಕವಾಗಿ ಹಾಗೂ ಸಂಪೂರ್ಣವಾಗಿ ಸ್ಥಳಾಂತರ ಆಗುವ ವರೆಗೂ ಹೋರಾಟದಿಂದ ವಿರಮಿಸುವುದಿಲ್ಲ ಎಂದು ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸಿನ್ ಜವಳಿ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಾಸಿನ್ ಜವಳಿ, 2018 ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಕೆಲವು ಕಛೇರಿಗಳ ಸ್ಥಳಾಂತರ ಮಾಡುವ ಆದೇಶ ಹೊರಡಿಸಿದ್ದು ಕಾಗದದಲ್ಲಿ ಮಾತ್ರ ಇತ್ತು. ಅದರಲ್ಲಿ ಆಲಮಟ್ಟಿಗೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರವೂ ಸೇರಿತ್ತು. ಸರ್ಕಾರ ಹೊರಡಿಸಿದ ಆದೇಶ ಪಾಲನೆ ಆಗದ ಕಾರಣ ನಾನು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಸರ್ಕಾರ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವ ಹೆದರಿಕೆಯಿಂದ ವಾರದಲ್ಲಿ ಕಛೇರಿ ಸ್ಥಳಾಂತರಕ್ಕೆ ವಾರದ ಗಡುವು ನೀಡಿ ತುರ್ತು ಆದೇಶ ನೀಡಲಾಗಿದೆ ಎಂದು ಸರ್ಕಾರ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ತನೆಗೆ ಹರಿಹಾಯ್ದರು.
ಸರ್ಕಾರ ಉತ್ತರ ಕರ್ನಾಟಕಕ್ಕೆ ಕಛೇರಿಗಳ ಸ್ಥಳಾಂತರ ಆದೇಶದಂತೆ ಹಂಪಿ ಪುರಾತತ್ವ, ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ನಿರ್ದೇಶಕರ ಕಛೇರಿ, ಬೆಳಗಾವಿಗೆ ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಛೇರಿ ಸೇರಿದಂತೆ ಕೆಲವೇ ಕೆಲ ಕಛೇರಿಗಳು ಮಾತ್ರ ಹಾಗೂ ಭಾಗಶಃ ಸ್ಥಳಾಂತರ ಆಗಿವೆ ಎಂದು ದೂರಿದರು.
ವಕೀಲ ಇನಾಯತ್ ರೋಜೆವಾಲೆ ಮಾತನಾಡಿ, ಕೆಬಿಜೆಎನ್ಎಲ್ ಅಧಿಕಾರಿ ಪ್ರಭಾಕರ ಎಂಬ ಅಧಿಕಾರಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡಿದ್ದಾಗಿ ಹೈಕೋರ್ಟಿಗೆ ಸುಳ್ಳು ಮಾಹಿತಿಯ ಅಫಿಡವಿಡ್ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
Related Articles
ಆಲಮಟ್ಟಿಗೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರ ಅಗಿದ್ದರೂ ಕಛೇರಿ ಸ್ಥಳಾಂತರ ಆಗಿದೆ ಎಂದು ಸುಳ್ಳು ಮಾಹಿತಿ, ದಾಖಲೆ ನೀಡಲಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೂ ದಾಖಲೆ ಅವಲೋಕಿಸುವ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ಇದೀಗ ನ್ಯಾಯಾಲಯಕ್ಕೆ ವಾಸ್ತವಿಕ ಅಫಿಡವಿಟ್ ಸಲ್ಲಿಸುವ ಅನಿವಾರ್ಯತೆಯ ಭೀತಿಯಿಂದಾಗಿ ಜಲಸಂಪನ್ಮೂಲ ಇಲಾಖೆ ಅಧಿಕಾರಿ ಮಂಜುನಾಥ ಎಂಬವರ ಮೂಲಕ ನಾವು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಉಲ್ಲೇಖಿಸಿ ವಾರದಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರಕ್ಕೆ ತುರ್ತು ಅದೇಶ ಮಾಡಿದ್ದಾರೆ ಎಂದು ದೂರಿದರು.