ಬೆಂಗಳೂರು: ಥಿಯೇಟರ್ ಗಳಲ್ಲಿ ಕೇವಲ 50 % ಆಸನಗಳ ಭರ್ತಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕೆಜಿಎಫ್ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ ಗುಡುಗಿದ್ದಾರೆ.
ಇಂದು ಟ್ವೀಟರ್ ನಲ್ಲಿ ಸರ್ಕಾರದ ನಿಲುವನ್ನು ಖಂಡಿಸಿರುವ ಯಶ್, ನಮ್ಮಲ್ಲಿ ಜಾಗೃತಿ ಮೂಡಿದೆ, ಜವಾಬ್ದಾರಿಯು ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ ಎಂದು ಎಚ್ಚರಿಸಿದ್ದಾರೆ.
ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು, ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ, ಚಿತ್ರರಂಗಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿರುವ ಯಶ್, ಸೂಚನೆ ಕೊಡದೆ ಜಾರಿ ಮಾಡಿರುವ ನಿರ್ಬಂಧನೆಗಳಿಂದ ಚಿತ್ರರಂಗ ಬಲಿಯಾಗಲಿದೆ ಎಂದು ಹರಿಹಾಯ್ದಿದ್ದಾರೆ.
ಇನ್ನು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಶುಕ್ರವಾರ ಹೊಸ ಆದೇಶ ಹೊರಡಿಸಿರುವ ಸರ್ಕಾರ, ಸಿನಿಮಾ ಮಂದಿರಗಳಲ್ಲಿ ಕೇವಲ 50% ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿದೆ. ಇದರಿಂದ ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾಗಿರುವ ಯುವರತ್ನ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಸರ್ಕಾರದ ಈ ನಡೆ ವಿರುದ್ಧ ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.