ಹೊಸದಿಲ್ಲಿ: ಕಳೆದೊಂದು ವರ್ಷದಲ್ಲಿ ಗೂಗಲ್ ಸರ್ಚ್ ಎಂಜಿನ್ನಲ್ಲಿ ಏಷ್ಯಾ ಖಂಡದ ಯಾರ ಬಗ್ಗೆ ಗೂಗಲ್ ಬಳಕೆದಾರರು ಇಂಟರ್ನೆಟ್ನಲ್ಲಿ ಅತೀ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಕುತೂಹಲ ತಣಿಸುವ ಪಟ್ಟಿಯನ್ನು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿದೆ.
ಜನಪ್ರಿಯ ಚಿತ್ರವಾದ ಕೆಜಿಎಫ್ ನ ನಾಯಕ ಯಶ್ ಈ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದ್ದಾರೆ. ಈ ವಿಚಾರದಲ್ಲಿ ಅವರು, ತಮ್ಮ ಸಮಕಾಲೀನ ಕಲಾವಿದರಾದ ಮಹೇಶ್ ಬಾಬು (47ನೇ ಸ್ಥಾನ), ಅಜಯ್ ದೇವಗನ್ (52), ರಾಮ್ ಚರಣ್ (53), ಜೂ| ಎನ್ಟಿಆರ್ (58), ಧನುಷ್ (61), ಸೂರ್ಯ (63), ಪ್ರಭಾಸ್ (68) ಅವರನ್ನೂ ಹಿಂದಿಕ್ಕಿದ್ದಾರೆ! ಅಷ್ಟೇ ಅಲ್ಲ, ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (65), ಕನ್ನಡಿಗರಾದ ಕೆ.ಎಲ್. ರಾಹುಲ್ (67), ರಜನೀಕಾಂತ್ (77)ರನ್ನೂ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.
ಅಂದಹಾಗೆ, ಈ ಪಟ್ಟಿಯ ಟಾಪ್ 1ರಲ್ಲಿ “ವಿ’ ಎಂಬ ತೆಲುಗು ಚಿತ್ರ ಸ್ಥಾನ ಪಡೆದಿದೆ. ಅನಂತರದ ಸ್ಥಾನಗಳಲ್ಲಿ ಜುಂಗ್ ಕುಕ್ (ದ. ಕೊರಿಯಾದ ಗಾಯಕ), ಇತ್ತೀಚೆಗೆ ಹತ್ಯೆಗೀಡಾದ ಪಂಜಾಬ್ ಗಾಯಕ ಸಿಧು ಮೂಸೆವಾಲಾ, ಜಿಮಿನ್ (ದ. ಕೊರಿಯಾ ಹಾಡುಗಾರ), ಲತಾ ಮಂಗೇಶ್ಕರ್, ಲೀಸಾ (ಥೈಲೆಂಡ್ ಹಾಡುಗಾರ್ತಿ), ಕತ್ರಿನಾ ಕೈಫ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ವಿರಾಟ್ ಕೊಹ್ಲಿ ಇದ್ದಾರೆ.