ರಂಗಭೂಮಿಯ ಹಿರಿಯ ನಟಿ ಯಮುನಾ ಮೂರ್ತಿ ಅವರ “ಜೀವನ ನಾಟಕದ ನೇಪಥ್ಯದಿಂದ’ ಎಂಬ ಆತ್ಮಚರಿತ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಕಂಡಿತು. ಅಂದು ಅವರ ರೇಡಿಯೊಗಳಲ್ಲಿ ನಾಟಕ ಕೇಳುತ್ತಲೇ ಬೆಳೆದ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ವೇದಿಕೆಯಲ್ಲಿ ಹಂಚಿಕೊಂಡ ಒಂದು ಪುಳಕ ಇಲ್ಲಿದೆ…
1970ರ ದಶಕದ ಮಲೆನಾಡು ಅದು. ಒಂಥರಾ ತಂಪು, ಇಂಪು. ನಾಗರಿಕತೆಯಿಂದ ದೂರ ಇರುವ ಹಳ್ಳಿಗಳು. ಇಂದಿನಂತೆ ಅಂದು ಫೋನು ಇಲ್ಲ, ಫ್ಯಾನು ಇಲ್ಲ. ಮೊಬೈಲ್ ಇಲ್ಲ, ಟಿವಿಯಂತೂ ಇಲ್ಲವೇ ಇಲ್ಲ. ಆದರೆ, ನೆಮ್ಮದಿ, ವ್ಯವಧಾನ, ವಿರಾಮಗಳಿಗೆ ಕೊರತೆ ಇರಲಿಲ್ಲ.
ಉತ್ತರ ಕನ್ನಡದ ಸಿದ್ದಾಪುರದ ಕತ್ರಗಾಲು, ನನ್ನ ತವರಿನ ಹಳ್ಳಿ. ಅಲ್ಲಿ ಒಬ್ಬರಿಂದೊಬ್ಬರ ಸಂಬಂಧ ಎಷ್ಟು ಸುಂದರವಾಗಿತ್ತು ಎಂದರೆ, ಯಾರಿಗೆ ಏನೇ ಕಷ್ಟ ಬಂದರೂ ಎಲ್ಲರೂ ಬರುತ್ತಿದ್ದರು. ಅನ್ಯೋನ್ಯ ಸಂಬಂಧ, ಬಂಧಗಳ ಊರು. ಯಾರಿಗಾದರೂ ಅಡಕೆ ಕೊಯ್ಲಿಗೆ ಸಮಸ್ಯೆ ಬಂದರೂ ಎಲ್ಲರೂ ಹಾಜರ್. “ಅಡಕೆ ಸುಲಿಯಲು ಬನ್ನಿ’ ಎಂದು ಹೇಳಿದರೂ, ಸುತ್ತ ಮುತ್ತಲಿನ ಗೃಹಿಣಿಯರು, ಅನಕ್ಷರಸ್ಥ ಮಹಿಳೆಯರೆಲ್ಲ ನಮ್ಮ ಮನೆಯಂಗಳದಲ್ಲಿ ಕಳೆಗಟ್ಟುತ್ತಿದ್ದರು.
ರಾತ್ರಿ ಆರೇಳಕ್ಕೆಲ್ಲ ತಮ್ಮ ತಮ್ಮ ಮನೆಯ ಸೀಮೆಎಣ್ಣೆಯ ಚಿಮಣಿ ದೀಪ, ಲಾಟೀನು ಹಿಡಿದು ಬೆಳಕಿನ ವ್ಯವಸ್ಥೆ ಜೊತೆ ಮನೆಯಂಗಳಕ್ಕೆ ಬಂದರೆ ಅಲ್ಲೊಂದು ಅದ್ಭುತ ಜಾನಪದ ಲೋಕವೇ ತೆರೆದುಕೊಳ್ಳುತ್ತಿತ್ತು. ಅಡಕೆ ಸುಲಿತದ “ಕಟ್ ಕಟ್’ ಎಂಬ ನಾದಕ್ಕೆ ಮಹಿಳೆಯರೂ ಹಳೇ ಹಾಡು, ಜಾನಪದದ ಪದ್ಯ ಹೇಳುತ್ತಿದ್ದರು. ಅವರ ಮಾತು, ಪದ್ಯ ಮುಗಿಯುತ್ತಿದ್ದಂತೇ ಅಪ್ಪಯ್ಯ ಮನೆಯೊಳಗಿನಿಂದ ದೊಡ್ಡ ಮರ್ಫಿ ರೆಡಿಯೋ ತಂದು ಜಗುಲಿಯಲ್ಲಿ ಪ್ರತಿಷ್ಠಾಪಿಸುತ್ತಿದ್ದರು. “ಈಗ ಎಲ್ರೂ ಸುಮ್ಮನಾಗಿ, ನಾಟಕ ಶುರು ಆಪ ಟೈಂ ಆತು’ ಅನ್ನುತ್ತಿದ್ದರು. ಆಗ ನಮ್ಮೂರಿಗೆ ಧಾರವಾಡ ಆಕಾಶವಾಣಿ ನಿಲಯದಿಂದ ಪ್ರಸಾರ ಆಗುವ ನಾಟಕಗಳು ಕೇಳುತ್ತಿದ್ದವು. ಅಲ್ಲಿ ಇದೇ ಯಮುನಾ ಮೂರ್ತಿ ಎಂಬ ಮಾಂತ್ರಿಕ ಸ್ವರದ ವಿಭಿನ್ನ ಶೈಲಿ ನಾಟಕಗಳು ಎಲ್ಲರ ಹುಚ್ಚು ಹೆಚ್ಚಿಸುತ್ತಿದ್ದವು. ತಾವೇ ನಾಟಕ ರಚಿಸಿ, ನಿರ್ದೇಶಿಸಿ, ಸ್ವತಃ ಪಾತ್ರ ಮಾಡಿ ನಮಗೆ ನಾಟಕ ಕೇಳಿಸುತ್ತಿದ್ದರು. ಒಂದು ಸ್ವರ ಬಾಂಧವ್ಯ ಮನೆಯಂಗಳದಲ್ಲಿ ಸೃಷ್ಟಿಯಾಗಿತ್ತು. ಯಮುನಾಮೂರ್ತಿ ಯಮುನಕ್ಕನಾಗಿ ಊರ ಮಹಿಳೆಯರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದರು.
ಸ್ವರ ಬಾಂಧವ್ಯ ಎಷ್ಟು ತೀವ್ರವಾಗಿತ್ತೆಂದರೆ, ಆ ಪಾತ್ರಕ್ಕೆ ತೊಂದರೆ ಆದರೆ, ಯಾರಾದರೂ ಚುಚ್ಚು ಮಾತಾಡಿದರೂ ನಮ್ಮ ಮಹಿಳಾ ವರ್ಗ ಕೆರಳುತ್ತಿತ್ತು. ಯಾರಾದರೂ ನಾಟಕ ಚೆನ್ನಾಗಿಲ್ಲ ಎಂದರೆ ಮಹಿಳೆಯರು ಬೈಯ್ಯಲೇ ಬರುತ್ತಿದ್ದರು. ಆ ಪಾತ್ರಗಳನ್ನು ತಾವೇ ವಿಮರ್ಶಿಸುತ್ತಿದ್ದರು. ನಾಟಕದ ವಿಮರ್ಶೆ ಮಾಡುತ್ತಾ, ಯಮುನಕ್ಕನಿಗೆ ಏನಾದರೂ ಅಂದರೂ “ನಿನ್ ಬಿಡಂಗಿಲ್ಲ ಮಂಜಣ್ಣ’ ಎಂದೂ ಹೇಳುತ್ತಿದ್ದರು.
ಅಂದೆಲ್ಲ ರೇಡಿಯೊ ನಾಟಕಗಳು, ಸಿನಿಮಾಗಳು ನಮಗೆ ಕಣ್ಣಿಗೆ ಕಾಣದ ಹೃದಯಕ್ಕೆ ಇಳಿದ ಹೊಸ ಲೋಕವೊಂದನ್ನು ಸೃಷ್ಟಿಸಿದ್ದವು. ಇಂದು ನಮ್ಮ ನಡುವೆ ಬೇಡದ ಸಪ್ಪಳಗಳೇ ತುಂಬಿವೆ. ಮೌನದ ತಂಪನ್ನು ಏರ್ಪಡಿಸುತ್ತಿದ್ದ ಸ್ವರ ಮಾಧುರ್ಯವನ್ನೂ ಸವಿಯಲಾರದ ಮಟ್ಟಕ್ಕೆ ತಲುಪಿದ್ದೇವೆ. ಮತ್ತೆ ಅಂಥ ಕಾಲ ಬರಲಾರದೇ ಅನ್ನಿಸುತ್ತದೆ.