ಯಲ್ಲಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಯಾವುದೇ ಪ್ರಮುಖ ಚರ್ಚೆಗಳಿಲ್ಲದೇ ಎಂದಿನಂತೆ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಕುರಿತು ವರದಿ ವಾಚಿಸಿದರು.
ಯಾವೊಬ್ಬ ಸದಸ್ಯರೂ ಬಂದಿರಲಿಲ್ಲ. ನಂತರ ಸದಸ್ಯರಾದ ನಟರಾಜ ಗೌಡರ್, ನಾಗರಾಜ ಕವಡಿಕೇರಿ, ರಾಧಾ ಹೆಗಡೆ, ಮಂಗಲಾ ನಾಯ್ಕ, ಕೊನೆಯಲ್ಲಿ ಭವ್ಯಾ ಶೆಟ್ಟಿ ಆಗಮಿಸಿದರು. ಕೆಲ ಅಧಿಕಾರಿಗಳು ಗೈರಾಗಿದ್ದರು. ಕೆಲ ಇಲಾಖೆ ಕೆಳಹಂತದ ಸಿಬ್ಬಂದಿ ಬಂದಿದ್ದರು.
ಕದಂಬೋತ್ಸವ ಯಲ್ಲಾಪುರ ಕ್ಷೇತ್ರದಲ್ಲಿಯೇ ನಡೆಯುತ್ತಿದ್ದರೂ, ಉತ್ಸವದಲ್ಲಿ ಯಲ್ಲಾಪುರ ಭಾಗದ ಕಲಾವಿದರಿಗೆ, ಜನಪ್ರತಿನಿಧಿಗಳಿಗೆ ಅಷ್ಟಾಗಿ ಆದ್ಯತೆ ಇಲ್ಲ. ಉತ್ಸವದ ವೀಕ್ಷಣೆಗೆ ತಾಪಂ ಸದಸ್ಯರಿಗೆ ಕನಿಷ್ಠ ಪಾಸ್ ಆದರೂ ನೀಡುವ ಕೆಲಸ ಆಗಲಿ ಎಂದು ಸದಸ್ಯ ನಟರಾಜ ಗೌಡರ್ ಹೇಳಿದರು.
ಬೇಡ್ತಿ ಕುಡಿಯುವ ನೀರಿನ ಸಲುವಾಗಿ ಹಾಕಲಾದ ವಿದುತ್ ಲೈನ್ ಸಂಪೂರ್ಣ ಹಾಳಾಗಿದೆ. ಬಹುತೇಕ ಕಂಬಗಳು ವಾಲಿ ಜೋತು ಬಿದ್ದಿದೆ. ನೀರಿನ ಯೋಜನೆ ಸ್ಥಗಿತಗೊಂಡಿದ್ದು, ಕಂಬ, ಲೈನ್ ತೆಗೆಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಒ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿ 7, 8 ಮತ್ತು 9 ನೇಯ ತರಗತಿಗಳಿಗೆ ಎಸ್‌ಎಸ್‌ಎಲ್‌ಸಿ ಮಾದರಿಯಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ ಎಂದು ಬಿಇಒ ಎನ್.ಆರ್. ಹೆಗಡೆ ಹೇಳಿದರು. ತೋಟಗಾರಿಕೆಯ ಆತ್ಮ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ತಾಪಂಗೂ ಮಾಹಿತಿ ನೀಡುತ್ತಿಲ್ಲ ಎಂದು ಇಓ ಜಗದೀಶ ಕಮ್ಮಾರ್ ಆರೋಪಿಸಿದರು.
ಕೆಲ ಅಂಗನವಾಡಿಗಳ ಕಾರ್ಯಕರ್ತೆಯರು ಹಾಜರಿರುವುದಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಇಒ ಸಿಡಿಪಿಓ ಫಾತಿಮಾ ಛುಳಕಿಯವರಿಗೆ ಸೂಚಿಸಿದರು.