ಯಲ್ಲಾಪುರ: ಇಲ್ಲಿನ ಖಾಸಗಿ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬರು 2.69 ಕೋಟಿ ರೂ. ಲಪಟಾಯಿಸಿ ಪರಾರಿಯಾದ ಘಟನೆ ನಡೆದಿದೆ.
ಖಾಸಗಿ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಕುಮಾರ ಕೃಷ್ಣಮೂರ್ತಿ ಬೋನಾಲ್ ಅವರು ತಾವು ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ ನಲ್ಲಿಯೇ ಈ ಕೃತ್ಯ ಎಸಗಿದ್ದು, ಪೋಲಿಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಬ್ಯಾಂಕಿಗೆ ಮೋಸ ಮಾಡಿರುವ ಬಗ್ಗೆ ವ್ಯವಸ್ಥಾಪಕರು ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಸಿಪಿಐ ಸುರೇಶ ಯೆಳ್ಳೂರು ನೇತೃತ್ವದಲ್ಲಿ ಕಾಣೆಯಾಗಿದ್ದ ಬ್ಯಾಂಕ್ ಸಿಬಂದಿ ಪತ್ತೆಗೆ ಬಲೆ ಬೀಸಿದ್ದರು.
ಆಂದ್ರದ ಅನಂತಪುರ ಜಿಲ್ಲೆಯ ಸಿಂಡಿಕೇಟ್ ನಗರದ ನಿವಾಸಿ ಕುಮಾರ ಕೃಷ್ಣಮೂರ್ತಿ ಬೋನಾಲ್ ಬ್ಯಾಂಕಿನ ಹಣವನ್ನು ತನ್ನ ಹೆಂಡತಿ ರೇವತಿ ಪ್ರಿಯಾಂಕ ಇವರ ಹೆಸರಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದ. ಈತನನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಆತನ ಹೇಳಿಕೆ ಪ್ರಕಾರ, ಆನ್ಲೈನ್ ಗೇಮ್ ನಲ್ಲಿ ಈ ಎಲ್ಲಾ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಹಂತ ಹಂತವಾಗಿ ಬ್ಯಾಂಕಿನಲ್ಲಿ ಬೇರೆಯವರ ಪಿನ್ ಬಳಸಿ ಹಣ ಲಪಟಾಯಿಸಿದ್ದಾನೆ. ಇದಕ್ಕಾಗಿ ಸುಮಾರು ಮೂರು ತಿಂಗಳಿಂದ ಸ್ವಲ್ಪ ಸ್ವಲ್ಪವೇ ಹಣವನ್ನು ಏಪ್ರಿಲ್ ನಿಂದ ಸೆ. 5ರ ಒಳಗಿನ ಅವಧಿಯಲ್ಲಿ ಲಪಟಾಯಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ಸಮಯದಲ್ಲಿ ಸತ್ಯಾಸತ್ಯತೆ ಹೊರಬರಬೇಕಾಗಿದೆ.