Advertisement

ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ

02:40 PM Oct 03, 2022 | Team Udayavani |

ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

Advertisement

ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಬಿಸಿಲು, ಮಳೆ ಎನ್ನದೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ಭಕ್ತರ ಅನುಕೂಲಕ್ಕಾಗಿ ಕ್ಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ನಿರೀಕ್ಷೆಗಿಂತ ಹೆಚ್ಚು ಜನ ಆಗಮಿಸಿದ ಕಾರಣ ದೇವಸ್ಥಾನದಿಂದ ಆರಂಭವಾದ ಸರತಿಸಾಲು ಉಗರಗೋಳ ಗ್ರಾಮಕ್ಕೆ ತೆರಳುವ ಮಾರ್ಗದವರೆಗೂ ತಲುಪಿತ್ತು.

ನವರಾತ್ರಿಯಲ್ಲಿ ಭಕ್ತರು ಎಣ್ಣೆ ಹಾಕಿ ದೀಪ ಬೆಳಗುವ ಸಂಪ್ರದಾಯವಿದೆ. ಈ ಸಂಪ್ರದಾಯದಿಂದ ದೇವಸ್ಥಾನ ಆವರಣ ಸ್ವತ್ಛತೆ ಕಳೆದುಕೊಳ್ಳುವುದರಿಂದ ಎಲ್ಲೆಂದರಲ್ಲಿ ದೀಪ ಬೆಳಗುವುದನ್ನು ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ನಿಗದಿತ 6 ಸ್ಥಳಗಳನ್ನು ಗುರುತಿಸಿ ದೊಡ್ಡ ಸಮಯಗಳನ್ನು ಇರಿಸಿ ದೀಪ ಬೆಳಗಲು ವ್ಯವಸ್ಥೆ ಕಲ್ಪಿಸಲಾಗಿದೆ.

ವಿದ್ಯುತ್‌ ದೀಪಾಲಂಕಾರ ದೇವಸ್ಥಾನದ ಸೊಬಗನ್ನು ಹೆಚ್ಚಿಸಿದೆ. ಶಕ್ತಿ ದೇವತೆ ಅಮ್ಮನ ಸಾನಿಧ್ಯದಲ್ಲಿ ನಿತ್ಯ ಆರಾಧನೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ದೇವಿಯ ಮುಡಿಗೇರುತ್ತವೆ. ಒಂಬತ್ತು ಶಕ್ತಿ ದೇವತೆಗಳ ವಿಶೇಷ ಅಲಂಕಾರದಲ್ಲಿ ನಿತ್ಯವೂ ಅಮ್ಮನವರು ಕಂಗೊಳಿಸುತ್ತಿದ್ದಾರೆ.

ವಾಹನ ದಟ್ಟಣೆ ಸಮಸ್ಯೆ: ಯಲ್ಲಮ್ಮ ಜಾತ್ರೆ ಇದ್ದಾಗಲೆಲ್ಲ ಸ್ಥಳೀಕರು ಸೇರಿ ಸುತ್ತಲಿನವರು ವಾಹನ ದಟ್ಟಣೆಯ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ಸಮಸ್ಯೆಯಾಗುತ್ತಿದ್ದು, ಸದ್ಯಕ್ಕಿರುವ ವಾಹನ ನಿಲುಗಡೆ ಜಾಗ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎನ್ನುವುದು ಭಕ್ತಾದಿಗಳ ಅಹವಾಲಾಗಿದೆ. ಮುನವಳ್ಳಿ ಗ್ರಾಮದಲ್ಲಿ ದಟ್ಟಣೆ ಹೆಚ್ಚಾಗಿ ಸಾಲು ಸಾಲು ವಾಹನಗಳು ಕೆಲ ಗಂಟೆಗಳ ಕಾಲ ರಸ್ತೆ ಮೇಲಿದ್ದವು.

Advertisement

ನಿಧಾನ ಗತಿಯ ರಸ್ತೆ ಕಾಮಗಾರಿ: ಯಲ್ಲಮ್ಮ ದೇವಸ್ಥಾನದಿಂದ ಜೋಗುಳಬಾವಿ ಮತ್ತು ಶಾಂತಿನಗರ ಮಾರ್ಗದ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ದೇವಿಗೆ ಹರಿಕೆ ಹೊತ್ತು ಉರುಳ ಸೇವೆ, ದೀರ್ಘ‌ ದಂಡ ನಮಸ್ಕಾರ ಹಾಕುವ ಭಕ್ತರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾಮಗಾರಿ ನಡೆದ ರಸ್ತೆಗಳಲ್ಲಿ ಸೂಚಕಗಳಿರದೇ ಸವಾರರು ಪರದಾಟ ಪಡುವ ದೃಶ್ಯಗಳು ಸಾಮಾನ್ಯವಾಗಿವೆ.

ಭಕ್ತರಿಗೆ ಸರತಿ ಸಾಲು, ಕುಡಿಯುವ ನೀರು, ಸ್ವತ್ಛತೆ ಸೇರಿ ಸೌಲಭ್ಯ ಕಲ್ಪಿಸಿದೆ. 7ನೇ ದಿನ ನಿರೀಕ್ಷೆಗೂ ಮೀರಿ ಭಕ್ತರು ಸನ್ನಿಧಿಯಲ್ಲಿ ಸೇರಿದ್ದಾರೆ. ಬಸವರಾಜ ಜೀರಗಾಳ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next