Advertisement

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

03:57 PM Jan 20, 2022 | Team Udayavani |

ಯಳಂದೂರು : ರಾಜ್ಯ ಸರ್ಕಾರವು ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ಭತ್ತ ಖರೀದಿಸಲು ಜಿಲ್ಲೆಯ ತಾಲೂಕುಗಳಲ್ಲಿ 5 ಖರೀದಿ ಕೇಂದ್ರಗಳನ್ನು ತೆರೆದಿದ್ದು, ಹಲವು ದಿನಗಳ ಕಳೆದರೂ ರೈತರು ಇತ್ತ ಸುಳಿಯುತ್ತಿಲ್ಲ.

Advertisement

ಸರ್ಕಾರ ಪ್ರತಿ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ರೂ. 1940, ಗ್ರೇಡ್‌ ಎ ಭತ್ತಕ್ಕೆ 1960 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಆದರೆ, ರೈತರ ಜಮೀನುಗಳಿಗೆ ವರ್ತಕರು ಖುದ್ದಾಗಿ ಬಂದು ಹೆಚ್ಚು ಕಡಿಮೆ ಇದೇ ಬೆಲೆಗೆ ಭತ್ತ ಖರೀದಿಸುತ್ತಾರೆ. ಇದರಿಂದ ಸಾಗಣೆ ವೆಚ್ಚ ಸೇರಿದಂತೆ ಮತ್ತಿತರ ಅನಗತ್ಯ ಖರ್ಚುಗಳು ಉಳಿತಾಯವಾಗಲಿದೆ. ನಮ್ಮ ಮನೆ ಬಾಗಿಲಿನಲ್ಲೇ ಇದೇ ದರ ಸಿಗುತ್ತಿರುವಾಗ
ಖರೀದಿ ಕೇಂದ್ರಕ್ಕೆ ಏಕೆ ಭತ್ತ ನೀಡಬೇಕು ಎಂಬುದು ರೈತರ ಪ್ರಶ್ನೆಯಾಗಿದೆ. ಹೀಗಾಗಿ ಜಿಲ್ಲೆಯ ರೈತರು ಬೆಂಬಲ ಬೆಲೆ ಯೋಜನೆಗೆ ನೋಂದಣಿಯಾಗುತ್ತಿಲ್ಲ.

5 ಕೇಂದ್ರ : ಮುಂಗಾರಿನಲ್ಲಿ ರೈತರಿಂದ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವುದಕ್ಕಾಗಿ ಸರ್ಕಾರವು ಯಳಂದೂರು ಟಿಎಪಿಸಿಎಂಎಸ್‌, ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರಿನ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಪ್ರತಿ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ರೂ. 1940, ಗ್ರೇಡ್‌ ಎ ಭತ್ತಕ್ಕೆ 1960 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಷರತ್ತುಗಳಿಂದ ರೈತರು ಹಿಂದೇಟು : ಸರ್ಕಾರ ವಿಧಿಸಿರುವ ನಿಯಮಗಳಿಗೆ ಬೇಸತ್ತು ರೈತರು ಭತ್ತ ಖರೀದಿ ಕೇಂದ್ರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಭತ್ತ ಖರೀದಿಗೆ ನಿಗದಿಪಡಿಸಿದ ಗುಣಮಟ್ಟ, ಕೃಷಿ ಇಲಾಖೆ ಪೂ›ಟ್ಸ್‌ಐಡಿ ಅಧಿಕಾರಿಗಳಿಂದ ಗುಣಮಟ್ಟ ಪರಿಶೀಲನೆ, ರೈತರು ಸ್ವಂತ ಖರ್ಚಿನಲ್ಲಿ ನಿಗದಿಪಡಿಸಿದ ಅಕ್ಕಿ ಗಿರಣಿಗೆ ಭತ್ತವನ್ನು ಪೂರೈಸುವುದು ಸೇರಿದಂತೆ ಇತರೆ ನಿಯಮಗಳಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ.

ನೋಂದಣಿ : ಕೇಂದ್ರಗಳು ಒಂದೂವರೆ ತಿಂಗಳಿಂದ ಪ್ರಾರಂಭವಾಗಿದ್ದರೂ ಜಿಲ್ಲೆಯಲ್ಲಿ ಭತ್ತಕ್ಕಾಗಿ 60 ರೈತರು ಹಾಗೂ ರಾಗಿಗಾಗಿ 61 ಮಂದಿ ಮಾತ್ರ ನೋಂದಾಯಿಸಿ ದ್ದಾರೆ. ತಾಲೂಕಿನಲ್ಲಿ ಭತ್ತ ಬೆಳೆದ 10 ಜನರ ರೈತರು ಹಾಗೂ ರಾಗಿ ಬೆಳೆದಿರುವ ಒಬ್ಬರೇ ಒಬ್ಬ ರೈತರು ನೋಂದಣಿ ಮಾಡಿಸಿದ್ದಾರೆ. ಕಠಿಣ ಷರತ್ತುಗಳನ್ನು ಪಾಲಿಸುವುದು ಕಷ್ಟವಾಗಿದ್ದು, ಹೀಗಾಗಿ ರೈತರು
ನೋಂದಣಿಗೆ ಮುಂದಾಗುತ್ತಿಲ್ಲ.

Advertisement

ರೈತರ ಮನೆ ಬಾಗಿಲಿನಲ್ಲೇ ಕ್ಯಾಶ್‌ ಆ್ಯಂಡ್‌ ಕ್ಯಾರಿ
ರೈತರು ಇದೀಗ ಭತ್ತ ಕೊಯ್ಲು ಮಾಡಿ ಒಕ್ಕಣಿ ಮಾಡಿ ಭತ್ತ ಶೇಖರಿಸುತ್ತಿದ್ದಾರೆ. ವರ್ತಕರು ಮನೆ ಬಾಗಿಲಿಗೇ ಬಂದು ಕ್ವಿಂಟಲ್‌ಗೆ 1,900 ರೂ. ನೀಡಿ ಸ್ಥಳದಲ್ಲೇ ಹಣ ಪಾವತಿಸುತ್ತಾರೆ. ಗುಣಮಟ್ಟ ಪರಿಶೀಲನೆ ಮತ್ತಿತರ ನಿಯಮಗಳ ಕಟ್ಟುಪಾಡು ಇಲ್ಲ. ಹೀಗಾಗಿ ಮನೆಯಲ್ಲೇ ಭತ್ತ ಮಾರುವುದೇ ಲೇಸು ಎಂಬುದು ರೈತರ ನಿಲುವು. ಭತ್ತ ಖರೀದಿ ಕೇಂದ್ರಕ್ಕೆ ಭತ್ತವನ್ನು ಕೊಂಡೊಯ್ದರೆ ಸಾಗಣೆ ವೆಚ್ಚವನ್ನೂ ಭರಿಸಬೇಕಿದೆ. ಜೊತೆಗೆ ಗುಣಮಟ್ಟ ಪರಿಶೀಲನೆ, ತೇವಾಂಶ ಅದು ಇದು ಸೇರಿದಂತೆ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಹಣ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಹೀಗಾಗಿ ನಾವು ಏಕೆ ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಮಾರಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಭತ್ತ ಖರೀದಿಗೆ ಕೇಂದ್ರ ತೆರೆದರೂ
ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ

– ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next