Advertisement

ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ನಮ್ಮದಾಗಿರಬೇಕು: ರತ್ನಾಕರ ಶೆಟ್ಟಿ ಮುಂಡ್ಕೂರು 

01:22 PM Oct 16, 2022 | Team Udayavani |

ಮುಂಬಯಿ: ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌ ಅವರ ನೇತೃತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವುದು ಅಭಿನಂದನೀಯ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬುದೇ ಅವರ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವಜನರು ಯಕ್ಷಗಾನಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕೇವಲ ತುಳುನಾಡಿಗೆ ಸೀಮಿತವಾಗಿರದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಅಭಿಪ್ರಾಯಿಸಿದರು.

Advertisement

ಅವರು ಅ. 13ರಂದು ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಇವರ ಸಾರಥ್ಯದ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ಸಂಯೋಜನೆಯಲ್ಲಿ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇದರ ಕಲಾವಿದರಿಂದ ಕೃಷ್ಣ ಕಾದಂಬಿನಿ ಯಕ್ಷಗಾನ ಪ್ರದರ್ಶನದ ಮಧ್ಯೆ ಜರಗಿದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ-ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ಅವರು ಮಾತನಾಡಿ, ಮುಂಬಯಿಗರು ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಊರಿನಿಂದ ಬಂದ ಕಲಾವಿದರಿಗೂ ಹಾಗೂ ಯಕ್ಷಗಾನ ತಂಡಕ್ಕೂ ಮುಂಬಯಿ ಯಕ್ಷಗಾನ ಪ್ರೇಮಿಗಳು ಸದಾ ಬೆಂಬಲವನ್ನು ನೀಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಯಕ್ಷಗಾನವನ್ನು ಉಳಿಸಿ-ಬೆಳೆಸುವಲ್ಲಿ ಮುಂಬಯಿ ತುಳು-ಕನ್ನಡಿಗರ ಪಾತ್ರ ಬಹಳಷ್ಟಿದೆ. ಅದು ನಿರಂತರವಾಗಿರಲಿದೆ ಎಂದರು.

ಉದ್ಯಮಿ, ಬಂಟರ ಸಂಘ ಪಡುಬಿದ್ರಿ ಇದರ ಮಾಜಿ ಅಧ್ಯಕ್ಷ ನವೀನ್‌ ಚಂದ್ರ ಜೆ. ಶೆಟ್ಟಿ ಪಡುಬಿದ್ರಿ ಅವರು ಮಾತನಾಡಿ, ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಅವರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಯಕ್ಷಗಾನಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರು. ಕಲೆ-ಕಲಾವಿದರನ್ನು ಪ್ರೋತ್ಸಾಹಿಸುವ, ಬೆಳೆಸುವ ಅವರ ಗುಣ ಮೆಚ್ಚುವಂಥದ್ದು. ಅವರ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇದರ ಕಲಾವಿದರಾದ ಸ್ತ್ರೀ ಪಾತ್ರಧಾರಿ ಸುಬ್ರಹ್ಮಣ್ಯ ಹೆಗ್ಗಡೆ ಯಲಗುಪ್ಪ, ಮೇಳದ ಪ್ರಧಾನ ಹಾಸ್ಯಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸಮ್ಮಾನಿಸಿ ಗೌರವಿಸಿದರು. ತೀಯ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಬೆಲ್ಚಡ, ಉದ್ಯಮಿ-ಕಲಾಪೋಷಕ ಸುಧೀರ್‌ ಶೆಟ್ಟಿ ಕೆಂಚನೂರು, ಹೊಟೇಲ್‌ ಸಂದೀಪ್‌ ಕಲ್ಯಾಣ್‌ ಇದರ ಅನಿಲ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್‌ ಜೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

Advertisement

ಪ್ರಾರಂಭದಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನದ ರೂವಾರಿ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌ ಅವರು ಅತಿಥಿಗಳನ್ನು ಗೌರವಿಸಿದರು. ರಂಗನಿರ್ದೇಶಕ ಬಾಬಾ ಪ್ರಸಾದ ಅರಸ ಕುತ್ಯಾರು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಅವರು ಸದಾ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅನೇಕ ವರ್ಷಗಳಿಂದ ನಮ್ಮನ್ನು ಮುಂಬಯಿಗೆ ಕರೆಸಿ ಪ್ರದರ್ಶನ ನೀಡುವ ವ್ಯವಸ್ಥೆಯನ್ನು ಅವರು ಮಾಡುತ್ತಿದ್ದಾರೆ. ಕಲಾವಿದರ ಕಷ್ಟದ ಸಂದರ್ಭದಲ್ಲಿ ಕಲಾವಿದರಿಗಾಗಿ ಸ್ಪಂದಿಸುವ ಕೆಲಸವನ್ನು

ಪ್ರಕಾಶ್‌ ಶೆಟ್ಟಿಯವರು ಮಾಡಿರುವುದು ಅವರಿಗೆ ಕಲಾವಿದರ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ. ಈ ಸಮ್ಮಾನವನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ. ನನ್ನ ಸೇವೆಯನ್ನು ಗುರುತಿಸಿ ಸಮ್ಮಾನಿಸಿದ ಎಲ್ಲರಿಗೂ ಕೃತಜ್ಞತೆಗಳು. ಸುಬ್ರಹ್ಮಣ್ಯ ಹೆಗ್ಗಡೆ ಯಲಗುಪ್ಪ , ಸಮ್ಮಾನಿತರು

 

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next