Advertisement

ಗಡಿಭಾಗದಲ್ಲಿ ಯಕ್ಷಗಾನ , ತಾಳಮದ್ದಳೆ ಮೆರುಗು

03:17 PM Oct 04, 2017 | |

ಈಶ್ವರಮಂಗಲ: ನವರಾತ್ರಿಯ ದಿನಗಳು ಕೇರಳ ಕರ್ನಾಟಕ ಗಡಿಭಾಗದ ಈಶ್ವರಮಂಗಲ, ಸುಳ್ಯಪದವು ಹಾಗೂ ಪಡುಮಲೆಯಲ್ಲಿ ಯಕ್ಷಗಾನ, ತಾಳಮದ್ದಳೆಯ ಮೆರುಗು ಭಕ್ತರಿಗೆ, ಕಲಾಭಿಮಾನಿಗಳಿಗೆ ರಸದೂಟವನ್ನು ಉಣಿಸಿದ್ದು,
ಯುವಜನತೆಯನ್ನು ತನ್ನತ್ತ ಸೆಳೆದುಕೊಂಡಿದೆ. ವಿಜಯ ದಶಮಿ ಯೊಂದು ಯಕ್ಷಗಾನ ಕಲಾ ಪೋಷಕ ಡಾ| ಶ್ಯಾಂ ಭಟ್‌ ಅವರನ್ನು ಸಮ್ಮಾನಿಸಿದ್ದು ಗಡಿಭಾಗದಲ್ಲಿ ಯಕ್ಷಗಾನ ಮೇಳ ಸ್ಥಾಪನೆಗೆ ರಹದಾರಿಯಾಗುತ್ತದೆ ಎಂಬುದು ಕಲಾಭಿಮಾನಿಗಳ ಆಶಯ.

Advertisement

ನವರಾತ್ರಿ ಎಲ್ಲರಿಗೂ ವಿಶಿಷ್ಟವಾದದ್ದು. ಆದರೆ ಗಡಿಭಾಗದಲ್ಲಿ ಮತ್ತಷ್ಟು ವಿಶೇಷವಾಗಿ ಜರಗಿತ್ತು. ಕರಾವಳಿಯ ಯಕ್ಷಗಾನ ಕಲೆ ಗಡಿಭಾಗದಲ್ಲಿ ಮತ್ತಷ್ಟು ಹುರುಪು ಪಡೆದಿದೆ ಎಂದರೆ ತಪ್ಪಾಗದು. ಅದಕ್ಕೆ ಕಾರಣವಾದದ್ದು ಗಡಿಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರಬುದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ನಡೆದ ಯಕ್ಷಗಾನ, ತಾಳಮದ್ದಳೆಗಳು.

ನವರಾತ್ರಿಯ ಮೂರನೇ ದಿನ ಪಡುಮಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಸಂಧಾನ ಎಂಬ ತಾಳಮದ್ದಳೆ ನಡೆಯಿತು. ಐದನೇ ದಿನ ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ ಅಂಗದ ಸಂಧಾನ ಯಕ್ಷಗಾನ ತಾಳಮದ್ದಳೆ ಕಲಾಭಿಮಾನಿಗಳನ್ನು ಮನಸೂರೆಗೊಳಿಸಿತ್ತು.

ಏಳನೇ ದಿನ ಹನುಮಗಿರಿ ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರದಲ್ಲಿ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ಶ್ರೀರಾಮ ದರ್ಶನ ಯಕ್ಷಗಾನ ಕಲಾಭಿಮಾನಿಗಳನ್ನು ಪುಳಕಿತಗೊಳಿಸಿತ್ತು.

ನವರಾತ್ರಿಯ ಒಂಬತ್ತನೇ ದಿನ ಸುಳ್ಯಪದವು ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿಯ ವತಿಯಿಂದ ರಾತ್ರಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀ ಮೂಕಾಂಬಿಕಾ ದೇವಿ ಎಂಬ ಯಕ್ಷಗಾನ ಬಯಲಾಟ ನಡೆದಿದ್ದು, ಸಾಕ್ಷಾತ್‌ ದುರ್ಗಾದೇವಿ ಧರೆಗೆ ಇಳಿದ ಹಾಗೆ ಭಾಸವಾಗಿತ್ತು. ವಿಜಯ ದಶಮಿಯಂದು ಹನುಮಗಿರಿ ನವಚೇತನ ಮಿತ್ರವೃಂದ ಮತ್ತು ನವಚೇತನ ಮಾತೃಶ್ರಿ ಸಂಘದ ಸಂಯೋಜನೆಯಲ್ಲಿ ನಡೆದ ತೆಂಕುತಿಟ್ಟಿನ
ಹೆಸರಾಂತ ಕಲಾವಿದರಾದ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಮತ್ತು ಗಾನ ಗಂಧರ್ವ ರವಿಚಂದ್ರ ಕನ್ನಡಿಕಟ್ಟೆಯವರ ಹಾಡುಗಾರಿಕೆಯಲ್ಲಿ ನಡೆದ ಭೀಷ್ಮಾಂತರಂಗ ಯಕ್ಷಗಾನ ತಾಳಮದ್ದಳೆ ಗಡಿಭಾಗದ ನೂರಾರು ಜನರನ್ನು ಒಗ್ಗೂಡಿಸಲು ಸಾಧ್ಯ ವಾಯಿತು. ಕಲಾಭಿಮಾನಿಗಳಿಗೆ ಕಲೆಯಲ್ಲಿ ಆಸಕ್ತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Advertisement

ನೂರಾರು ಕಲಾವಿದರು!
ಈಶ್ವರಮಂಗಲ, ಸುಳ್ಯಪದವು, ಪಡುಮಲೆ ಮುಂತಾದ ಪ್ರದೇಶಗಳಲ್ಲಿ ನೂರಾರು ಕಲಾವಿದರು ಯಕ್ಷಗಾನದಲ್ಲಿ ತೊಡಗಿಸಿಕೊಂಡು ಬೇರೆ ಬೇರೆ ಯಕ್ಷಗಾನ ಮೇಳಗಳಲ್ಲಿ ತಮ್ಮ ಕಲೆಯನ್ನು ಉಣಬಡಿಸುತ್ತಿದ್ದಾರೆ. ಕಲಾವಿದರು ತಮ್ಮ ಜೊತೆಯಲ್ಲಿ ಕಲಾಭಿಮಾನಿಗಳನ್ನು ಯಕ್ಷರಂಗಕ್ಕೆ ಸೇರಿಸಿಕೊಂಡು ಯಕ್ಷಗಾನವನ್ನು ಮುಂದಿನ ಜನಾಂಗಕ್ಕೆ ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ. ಗಡಿಭಾಗದಲ್ಲಿ ಯಕ್ಷಗಾನ ಮೇಳ ಸ್ಥಾಪನೆಯಾದರೆ ಸ್ಥಳೀಯ ಕಲಾವಿದರಿಗೂ ಪ್ರೋತ್ಸಾಹ ಸಿಕ್ಕಿದಂತೆ ಆಗುತ್ತದೆ ಎಂಬುದು ಕಲಾಭಿಮಾನಗಳ ಆಶಯ.

ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next