Advertisement

ಆಜ್ರಿ ಅರುಣ ಶೆಟ್ಟರಿಗೆ ಸಮ್ಮಾನ

10:18 PM May 02, 2019 | Sriram |

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಹಿರಿಯ ಕಲಾವಿದರಲ್ಲಿ ಒಬ್ಬರಾದ ಆಜ್ರಿ ಅರುಣ ಕುಮಾರ ಶೆಟ್ಟರಿಗೆ ಯಕ್ಷಗಾನ ಮೇಳದ ತಿರುಗಾಟಕ್ಕೆ ಈ ವರ್ಷ ಮೂವತ್ತರ ಸಂಭ್ರಮ.ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ಕೋಟೇಶ್ವರದ ಅಭಿಮಾನಿ ಬಳಗದವರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸಮ್ಮಾನ ಮೇ 4ರಂದು ಕುಂದಾಪುರದಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನೆರವೇರಲಿದೆ.ಬಳಿಕ ಪೆರ್ಡೂರು ಮೇಳದವರಿಂದ ಪೂರ್ವಿ ಕಲ್ಯಾಣಿ ಎಂಬ ಆಖ್ಯಾನ ಪ್ರದರ್ಶನಗೊಳ್ಳಲಿದೆ.

Advertisement

ಕೆಲ ವರ್ಷಗಳಿಂದ ಮಂದಾರ್ತಿ ಮೇಳದ ಒತ್ತು ಎರಡನೇ ವೇಷಧಾರಿಯಾಗಿ ಖಳ ಪಾತ್ರಗಳಿಗೆ ನ್ಯಾಯ ಒದಗಿಸಿದ ಆಜ್ರಿ ಅರುಣ ಕುಮಾರ ಶೆಟ್ಟರು 16ನೇ ವಯಸ್ಸಿನಲ್ಲಿ ಬಾಲ ಕಲಾವಿದರಾಗಿ ಕಲಾಜಗತ್ತನ್ನು ಪ್ರವೇಶಿಸಿದರು. ಆಜ್ರಿ ವಿಠಲ ಶೆಟ್ಟಿ ಮತ್ತು ಹೊಳಂದೂರು ಸಂಜೀವ ಶೆಟ್ಟರ ಪ್ರೇರಣೆಯಂತೆ ರಂಗಬದುಕನ್ನು ಕಂಡುಕೊಂಡ ಇವರು ಹಿರಿಯ ಯಕ್ಷಗಾನ ಗುರು ಆರ್ಗೋಡು ಗೋವಿಂದರಾಯ ಶೆಣೈಯವರಲ್ಲಿ ಯಕ್ಷಗಾನ ಶಿಕ್ಷಣ ಪಡೆದು ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಬಳಿಕ ಪೆರ್ಡೂರು,ಮಡಾಮಕ್ಕಿ,ಹಾಲಾಡಿ ಸೌಕೂರು ಮೇಳದಲ್ಲಿ ಹಂತ ಹಂತವಾಗಿ ಮೇಲೇರಿ ಸದ್ಯ ಮಂದಾರ್ತಿ ಮೇಳದ ಪ್ರದಾನ ಕಲಾವಿದರಾಗಿ ಸೇವೆ ಸಲ್ಲಿಸುತಿದ್ದಾರೆ.

ಸುಂದರವಾದ ನೀಳ ಆಳಂಗ,ಬ್ರಹ್ಮಾವರ ಶೈಲಿಯ ಕಟ್ಟುಮೀಸೆ, ನೃತ್ಯ,ಅಭಿನಯದಿಂದ ಎರಡನೇ ವೇಷ ಮತ್ತು ಪುರುಷ ವೇಷಗಳಿಗೆ ಜೀವತುಂಬುವ ಅವರು ಎರಡನೇ ವೇಷಕ್ಕೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ.ಹಾಗಾಗಿ ದ್ರೌಪದಿ ಪ್ರತಾಪದ ಅರ್ಜುನ,ವೀರಮಣಿ ಕಾಳಗದ ಪುಷ್ಕಳ, ಕರ್ಣಾರ್ಜುನದ ಅರ್ಜುನ, ಮುಂತಾದ ಪುರುಷ ವೇಷಗಳು, ಕೀಚಕ, ಕೌಂಡ್ಲಿàಕ ಮುಂತಾದ ಮುಂಡಾಸಿನ ವೇಷಗಳು, ದುಷ್ಟಬುದ್ಧಿ, ಭೀಷ್ಮ, ರಾವಣ ಮುಂತಾದ ಎರಡನೇ ವೇಷಗಳು ಅವರಿಗೆ ಅಪಾರ ಜನಮನ್ನಣೆ ತಂದಿತ್ತಿವೆ.ಪಾರ್ಟಿನ ವೇಷಗಳನ್ನು ಅಷ್ಟೇ ಸಮರ್ಥವಾಗಿ ನಿಬಾಯಿಸುವರ ಇವರ ಕಾಲನೇಮಿ,ಕಂಸ ರಕ್ತಜಂಘ,ಮಧು ಕೈಟಭ, ಶುಂಬಾಸುರ ಮುಂತಾದ ಖಳ ಪಾತ್ರಗಳೂ ಸಹ ಪ್ರಸಿದ್ಧವಾಗಿವೆ. ಸೌಕೂರು ಮೇಳದಲ್ಲಿ ಅನೇಕ ಆಧುನಿಕ ಪ್ರಸಂಗಗಳ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಇವರು ಅಮೃತೇಶ್ವರಿ ಮೇಳದೊಂದಿಗಿನ ಅನೇಕ ಜೋಡಾಟಗಳಲ್ಲಿ ಸೌಕೂರು ಮೇಳದಲ್ಲಿ ಕೀಚಕ ಕೌಂಡ್ಲಿàಕ ಪಾತ್ರಗಳಿಂದ ಎದುರು ಮೇಳಕ್ಕೆ ಸಮರ್ಥ ಪೈಪೋಟಿ ನೀಡಿದ್ದರು.

-ಪ್ರೊ.ಎಸ್‌.ವಿ.ಉದಯಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next