Advertisement

ಯಕ್ಷಗಾನ ಕನ್ನಡ ನಾಡಿನ ವಿಶಿಷ್ಟ-ಶ್ರೇಷ್ಠ ಕಲೆ; ಸಚಿವ ವಿ. ಸುನೀಲಕುಮಾರ

06:22 PM Feb 04, 2023 | Team Udayavani |

ಹೊನ್ನಾವರ: ಶುದ್ಧ ಕನ್ನಡವನ್ನು ಮಾತ್ರ ಬಳಸುವ ನಾಡಿನ ವಿಶಿಷ್ಠ ಮತ್ತು ಶ್ರೇಷ್ಠ ಕಲೆ ಯಕ್ಷಗಾನ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವ ವಿ. ಸುನೀಲಕುಮಾರ ಹೇಳಿದರು.

Advertisement

ತಾಲೂಕಿನ ಗುಣವಂತೆಯಲ್ಲಿ 13ನೇ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೆರೆಮನೆ ಇಡೀ ಕುಟುಂಬ 4 ತಲೆಮಾರಿನ ಮೂಲಕ ಯಕ್ಷಗಾನವನ್ನು ಆರಾಧಿಸುವ ಮೂಲಕ ಈ ಕ್ಷೇತ್ರಕ್ಕೆ ಹೊಸ ಮೈಲು ಗಲ್ಲನ್ನು ಕೊಟ್ಟಿದೆ. ಒಂದು ಕುಟುಂಬ ನಾಲ್ಕನೇ ತಲೆಮಾರಿಗೆ ಯಕ್ಷಗಾನವನ್ನು ಮುಂದುವರಿಸಿಕೊಂಡು ಬಂದಿರುವುದು ಅಭಿನಂದನಾರ್ಹ. ನಾಗರಿಕ ಸಮಾಜಕ್ಕೆ ಸಂಸ್ಕೃತಿ, ಭಾಷೆ, ಕಲೆ ಅತಿ ಅಗತ್ಯ.

ಮುಂದಿನ ದಿನದಲ್ಲಿ ಇಲಾಖೆ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಸಿದ್ಧ. ಇದೇ ಪ್ರಥಮ ಬಾರಿಗೆ ಸರಕಾರ ಎರಡು ದಿನಗಳ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಚಿತ್ತಾಪುರ ಸಂಸ್ಥಾನದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿ ಆಶೀರ್ವಚನ ನೀಡಿ ಭಾರತದ ಸಂಸ್ಕೃತಿ ತನ್ನದೇ ಆದ ಹಿರಿಮೆ ಹೊಂದಿದೆ. ಸಂಸ್ಕಾರ, ಕಲೆಯನ್ನು ಶಿಕ್ಷಣದ ಜೊತೆಗೆ ಕಲಿತು ಸಮಾಜದ ಉತ್ತಮ ಪ್ರಜೆಯಾಗಬೇಕಿದೆ. ಕಲೆ ಹಾಗೂ ಕಲಾವಿದರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಇಂತಹ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ. ಕಲಾವಿದರಲ್ಲಿ ಕಲೆಯ ಕುರಿತಾದ ಹುಡುಕಾಟ ಸದಾ ಜಾಗೃತವಾಗಿರಬೇಕು ಎಂದರು.

ಪ್ರಸಕ್ತ ಸಾಲಿನ ಕೆರಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಚಲನಚಿತ್ರರಂಗದ ಹಿರಿಯ ನಟ ಅನಂತನಾಗ್‌ ಮಾತನಾಡಿ, ಹೊನ್ನಾವರ ಎಂದರೆ ಎಲ್ಲಿಲ್ಲದ ಪ್ರೀತಿ ಇದ್ದು, ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಯಕ್ಷಗಾನ ನನ್ನ ಅಚ್ಚುಮೆಚ್ಚಾಗಿತ್ತು. ಎಲ್ಲಾ ಪ್ರಶಸ್ತಿಗಳೂ ಅರ್ಹತೆ ಮೂಲಕ ಹೋಗುವುದಿಲ್ಲ. ಹಾಗಾಗಿ ಪ್ರಶಸ್ತಿ ಎಂದರೆ ಭಯ. ಆದರೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ ಎಂದರು.

Advertisement

ಮಂಡಳಿ ವತಿಯಿಂದ ವಿಶೇಷ ಸನ್ಮಾನ ಸ್ವೀಕರಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಾಂಸ್ಕೃತಿಕ ಮೌಲ್ಯ ಹೆಚ್ಚಿಸಿ ಮುಂದಿನ ತಲೆಮಾರಿಗೆ ಪರಿಚಯಿಸಲು ಕಲೆ ಬಹುಮುಖ್ಯವಾಗಿದೆ. 84 ವರ್ಷದ ಸುದೀರ್ಘ‌ ಅವಧಿವರೆಗೆ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದ್ದು, ಆ ಪರಂಪರೆ ಕಾಪಾಡಿಕೊಳ್ಳಲು ತಮ್ಮ ಬದ್ಧತೆ ಕಾಪಾಡಿಕೊಳ್ಳಬೇಕಿದೆ. ಇಂದು ಬಡತನದಲ್ಲಿರುವ ಜನ ಕಲೆಯನ್ನು ಉಳಿಸಲು ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದಿನ ಸಮೃದ್ಧ ಸ್ಥಿತಿಯಲ್ಲಿ ಕಲೆ ಉಳಿಸುವುದು ಸವಾಲಿನ ಕೆಲಸ. ಸಾಂಸ್ಕೃತಿಕ ಮೌಲ್ಯವನ್ನು ಉಳಿಸಲು ಕಲೆಯನ್ನು ಉಳಿಸಬೇಕು. ಪಠ್ಯದಲ್ಲಿ ಯಕ್ಷಗಾನ ತರಲು ಸಿದ್ಧತೆ ಆಗಿದೆ ಎಂದರು.

ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಅಂಕಣಕಾರರಾದ ಭಾಸ್ಕರ್‌ ರಾವ್‌, ಹಿರಿಯ ಪತ್ರಕರ್ತ ಬಿ.ಗಣಪತಿ, ನಟ ವಾಗ್ಮಿ ಅನಂತ ಭಟ್‌ ಹುಳಗೋಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಡಗುಂಜಿ ಮೇಳದ ನಿರ್ದೇಶಕರಾದ ಕೆರಮನೆ ಶಿವಾನಂದ ಹೆಗಡೆ ಸ್ವಾಗತಿಸಿ ಅಭಿನಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಕೇರಳದ ಕಲಾಮಂಡಲಂ ಸುಕುಮಾರನ್‌ ತಂಡದಿಂದ ಕಥಕ್ಕಳಿ, ಕಿರಾತಾರ್ಜುನೀಯಂ, ಮನ್ಮಥ ರತಿ ಯಕ್ಷಗಾನ ಮತ್ತು ಭರತನಾಟ್ಯ ರೂಪಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next