ಉಡುಪಿ : ಫೆಬ್ರವರಿ 11 ಮತ್ತು 12 ರಂದು ಉಡುಪಿಯಲ್ಲಿ ಜರುಗಿದ ಸಮಗ್ರ ಯಕ್ಷಗಾನ ಸಮ್ಮೇಳನ -2023 ಯಶಸ್ವಿಯಾಗಿ ನಡೆಸುವಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಭೆ ಫೆ. 21 ರಂದು ಕಡಿಯಾಳಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ ಜರಗಿತು.
ಪ್ರೊ. ಎಮ್. ಎಲ್. ಸಾಮಗ ಅವರು ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರಿಗೆ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ. ಜಿ. ಎಲ್. ಹೆಗಡೆ ಮಾತನಾಡಿ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಮ್ಮೇಳನ ತನ್ನ ಬದುಕಿನಲ್ಲಿ ಮರೆಯಲಾರದ ಘಟನೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ ಸಭಾ ಕಾರ್ಯಕ್ರಮಗಳು, ಗೋಷ್ಠಿಗಳು, ಕಲಾ ಪ್ರದರ್ಶನಗಳು, ಸಮ್ಮೇಳನ ಸನ್ಮಾನ, ಪ್ರದರ್ಶಿನಿಗಳು ಹಾಗೂ ಊಟೋಪಚಾರ ಹೀಗೆ ಎಲ್ಲ ವಿಭಾಗಗಳಲ್ಲೂ ಅಚ್ಚುಕಟ್ಟುತನ ಇದ್ದುದರಿಂದ ದೇಶ ವಿದೇಶದಿಂದ ಬಂದ ಯಕ್ಷಗಾನ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದು, ವೈಯಕ್ತಿಕವಾಗಿ ತನಗೆ ತೃಪ್ತಿಯನ್ನು ತಂದ ಕಾರ್ಯಕ್ರಮವಾಗಿದೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ವಿಶೇಷ ಆಸ್ಥೆ ವಹಿಸಿದ್ದರಿಂದ ಈ ಸಮ್ಮೇಳನ ಸಾಧ್ಯವಾಯಿತು ಎಂದರು.
ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಶಿಯವರ ಸಹಕಾರ ಮತ್ತು ಮಾರ್ಗದರ್ಶನ ಯಶಸ್ಸಿನಲ್ಲಿ ಮಹತ್ತ್ವದ ಪಾತ್ರ ವಹಿಸಿದೆ ಎಂದರು. ಸಮ್ಮೇಳನಕ್ಕಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದರು.
ಕದ್ರಿ ನವನೀತ ಶೆಟ್ಟಿ ಅವರು ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಕಡಿಯಾಳಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ರವಿರಾಜ್ ಆಚಾರ್ಯ, ಪ್ರಧಾನ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವರುದ್ರಪ್ಪ, ಶ್ರೀಮತಿ ಪೂರ್ಣಿಮಾ, ರಾಘವೇಂದ್ರ ಕಿಣಿ, ಭುವನಪ್ರಸಾದ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಕಾರ್ಯಕ್ರಮ ರೂಪಿಸಿದರು. ನಾರಾಯಣ ಎಂ. ಹೆಗಡೆ ಧನ್ಯವಾದ ಸಲ್ಲಿಸಿದರು.