Advertisement

ಯಕ್ಷಗಾನ ಎಳ್ಗೆಗೆ ಸಾಮಾಜಿಕ ತಾಣಗಳು ವರಪ್ರಧಾನ

04:19 PM Jul 08, 2018 | |

ಕರಾವಳಿಯ ಸರ್ವಶ್ರೇಷ್ಠ ಕಲೆ ಯಕ್ಷಗಾನ, ಆಕರ್ಷಕ ವೇಷಭೂಷಣ, ಸಂಗೀತ, ನಾಟ್ಯ, ಅಭಿನಯ , ಮಾತುಗಾರಿಕೆಯಿಂದ ಕೂಡಿದ ಸರ್ವಾಂಗ ಸುಂದರ ಕಲೆಗೆ ವಿಶ್ವದೆಲ್ಲೆಡೆಯ ಜನ ಮಾರು ಹೋಗಿದ್ದಾರೆ. ಇಂತಹ ಮಹೋನ್ನತ ಕಲೆಯ ಏಳ್ಗೆಗೆ ಸಾಮಾಜಿಕ ಜಾಲತಾಣಗಳು ಸದ್ಯ ವರಪ್ರಧಾನವಾಗಿವೆ. 

Advertisement

ಯೂಟ್ಯೂಬ್‌, ಫೇಸ್‌ಬುಕ್‌, ವಾಟ್ಸಾಪ್‌ ನಂತಹ ಸಾಮಾಜಿಕ ತಾಣಗಳಲ್ಲಿ ಇಂದು ಯಕ್ಷಗಾನ ಬಹುವಾಗಿ ಪ್ರಚಲಿತದಲ್ಲಿದೆ. ಹಿಂದೆ ಯಕ್ಷಾಭಿಮಾನಿಗಳಿಗೆ ಮಾತ್ರ ಸೀಮಿತವಾಗಿದ್ದ ಕಲೆ, ಅದರಲ್ಲಿನ ಕಲಾವಿದರ ತಾಕತ್ತು  ಇಂದು ಹೊಸ ಅಭಿಮಾನಿಗಳನ್ನು ಸೆಳೆಯಲು ಕಾರಣವಾಗಿದೆ. 

ಯಕ್ಷಗಾನದ ಹಲವು ತುಣುಕುಗಳು, ಗಾಯನಗಳು ಹಲವರ ಮೊಬೈಲ್‌ಗ‌ಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ಯುವ ಮನಸ್ಸುಗಳು ಬಹುವಾಗಿ ಒಗ್ಗಿಕೊಂಡಿರುವ ಸಾಮಾಜಿಕ ತಾಣಗಳಲ್ಲಿ ಐಕ್ಯವಾಗಿರುವ ಯಕ್ಷಗಾನ ಕಲೆ ಹಲವು ಹೊಸ ಅಭಿಮಾನಿಗಳನ್ನು ಹುಟ್ಟು ಹಾಕಿದೆ. 

ಯೂಟ್ಯೂಬ್‌ನಲ್ಲಿ ಆಸಕ್ತರು ಶ್ರಮ ಹಾಕಿ ಪ್ರಕಟಿಸಿರುವ ಸಾವಿರಾರು ಯಕ್ಷಗಾನದ ವಿಡಿಯೋಗಳು ಲಭ್ಯವಿದೆ. ವಿಶ್ವದ ಮೂಲೆ ಮೂಲೆಗಳಲ್ಲಿರುವ ಕರಾವಳಿಯ ಯಕ್ಷಗಾನಾಭಿಮಾನಿಗಳು ಇಂದು ನಡೆದ ಯಕ್ಷಗಾನವನ್ನು ವಿಶ್ವದ ಯಾವದೋ ಮೂಲೆಯಲ್ಲಿ ಕುಳಿತು ನೋಡಿ ಸಂಭ್ರಮಿಸುವಷ್ಟರವಷ್ಟರ ಮಟ್ಟಿಗೆ ಜಾಲತಾಣಗಳು ಸಹಕಾರಿಯಾಗಿವೆ. 

ಕೆಲ ವಿಡಿಯೋಗಳಿಗೆ ಮೂರ್‍ನಾಲ್ಕು ಲಕ್ಷ ವೀಕ್ಷಣೆ ಸಂಖ್ಯೆ ದಾಖಲಾಗಿರುವುದು ಜನರ ಅಪಾರ ಆಸಕ್ತಿ ಕುರಿತು ಸಾಕ್ಷಿಯಾಗಿದೆ. ಉಭಯ ತಿಟ್ಟುಗಳ ಹಲವು ಪ್ರಸಿದ್ಧ ಕಲಾವಿದರ ಅತ್ಯುನ್ನತ ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ. ಹಲವು ಪ್ರಸಂಗಗಳೂ ಯೂಟ್ಯೂಬ್‌ನಲ್ಲಿದ್ದು  ಅಪಾರ ಸಂಖ್ಯೆಯ ವೀಕ್ಷಕರು ವೀಕ್ಷಿಸಿರುವುದು ಕಲಾ ಮೌಲ್ಯ ಹೆಚ್ಚಿಸಿದೆ.

Advertisement

ಫೇಸ್‌ಬುಕ್‌ ನಂತಹ ಲೋಕಪ್ರಿಯ ತಾಣಗಳಲ್ಲೂ ಇಂದು ಹಲವರು  ಪ್ರದರ್ಶನಗಳನ್ನು ಲೈವ್‌ ಆಗಿ ಪ್ರದರ್ಶಿಸುತ್ತಿದ್ದಾರೆ. ಹೀಗೆ ಮಾಡುವುದು ಒಂದರ್ಥದಲ್ಲಿ ಸರಿಯಲ್ಲ, ಕಾರಣ ಪ್ರೇಕ್ಷಕರು ಲೈವ್‌ ನೋಡಿಕೊಂಡು ಕೂರುತ್ತಾರೆಯೇ ವಿನಹ ವೇದಿಕೆಯ ಎದುರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ. 

ತಮ್ಮ ನೆಚ್ಚಿನ ಯಕ್ಷತಾರೆಗಳ ನೂರಾರು ಅಭಿಮಾನಿ ಬಳಗಗಳ ವಾಟ್ಸಾಪ್‌ ಗುಂಪುಗಳ ಮೂಲಕ ಯಕ್ಷಗಾನ ಅಭಿಮಾನವನ್ನು ಸಾವಿರಾರು ಜನರು ಮೆರೆಯುತ್ತಿದ್ದಾರೆ. 

ಅತ್ಯಮೂಲ್ಯ ಚರ್ಚೆಗಳಿಗೂ,ವಿಮರ್ಶೆಗಳಿಗೂ ಸಾಮಾಜಿಕ ತಾಣ ವೇದಿಕೆಯಾಗಿದೆ. ಕಲಾವಿದರಿಂದ ಕಲೆಗೆ ಅಪಚಾರವಾದಲ್ಲಿ ಖಂಡಿಸಲು ಹಲವರು ಜಾಲತಾಣಗಳ ಮೂಲಕ ಮುಂದೆ ಬಂದಿದ್ದಾರೆ. ಇದು ಕಲಾವಿದರಿಗೆ ಜಾಗೃತರಾಗಲೂ ಮಾಧ್ಯಮವಾದ ಕೆಲ ಉದಾಹರಣೆಗಳಿವೆ. 

ಹಳೆಯ ಕಲಾವಿದರು, ಸಂಪ್ರದಾಯಿಕ ಯಕ್ಷಗಾನದ ಕುರಿತಾಗಿ ಒಲವು ಹೊಂದಿರುವ ಹಲವು ಯಕ್ಷಗಾನದ ವಾಟ್ಸಾಪ್‌ ಗುಂಪುಗಳೂ ಇವೆ. ಸಾವಿರಾರು ಗುಂಪುಗಳು ಇಂದು ಕಲೆಗಾಗಿ ಕಾರ್ಯನಿರ್ವಹಿಸುತ್ತಿದ್ದು,   ಕಲಾ ಪ್ರದರ್ಶನದ ತುಣುಕುಗಳು, ಆಡಿಯೋಗಳನ್ನು, ಅತ್ಯಾಕರ್ಷಕ ಭಾವಚಿತ್ರಗಳನ್ನು ಸೆರೆಹಿಡಿವ ಆಸಕ್ತರು ಅಭಿಮಾನಿಗಳೊಂದಿಗೆ ಹಂಚಿ ಕೊಂಡು ಕಲಾವಿದರನ್ನು ಕಲೆಯನ್ನು  ಬೆಳಗುತ್ತಿದ್ದಾರೆ. 

ಸಾಮಾಜಿಕ ತಾಣಗಳ ಮೂಲಕ ಕಲೆ ಇಂದು ವಿಶ್ವದ ಮೂಲೆ,ಮೂಲೆಗೂ ತಲುಪಿ ಯಕ್ಷಗಾನಾಭಿಮಾನಿಗಳ ಮನ ತಣಿಸುತ್ತಿದೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋಗಳನ್ನು ನೋಡಿ ಮೆಚ್ಚಿಕೊಂಡು ಅಭಿಮಾನ ಮೂಡಿಸಿಕೊಂಡವರು ಯಕ್ಷಗಾನದ ರಂಗಸ್ಥಳದ ಮುಂದೆ ಬಂದು ಕುಳಿತು ಅಭಿಮಾನಿಗಳಾದ ಉದಾಹರಣೆಗಳೂ ಇವೆ. 

ಕಲಾ ಬಾಳ್ಗೆಗೆ ಮಾಧ್ಯಮವಾಗಿರುವ ಸಾಮಾಜಿಕ ತಾಣಗಳಲ್ಲಿ ಕಲೆ ಇನ್ನಷ್ಟು ಬೆಳಗಲಿ, ಅಭಿಮಾನಿಗಳು ಹೆಚ್ಚಿ  ಕಲೆ ಇನ್ನಷ್ಟು ವ್ಯಾಪಿಸಲಿ ಎನ್ನುವುದು ಆಶಯ. 

Advertisement

Udayavani is now on Telegram. Click here to join our channel and stay updated with the latest news.

Next