Advertisement

ಯಕ್ಷಗಾನ ಕಲೆ-ಕಲಾವಿದರಿಗೆ ಬಳಗದ ಕೊಡುಗೆ ಅಪಾರ: ಚಂದ್ರಹಾಸ್‌ ಕೆ. ಶೆಟ್ಟಿ

11:08 AM Oct 04, 2021 | Team Udayavani |

ಮುಂಬಯಿ: ಯಕ್ಷಗಾನ ತುಳುನಾಡಿನ ಶ್ರೀಮಂತ ಕಲೆಯಾಗಿದ್ದು, ಇದು  ಮನೋರಂಜನೆಗೆ ಮಾತ್ರ ಸೀಮಿತವಾಗಿರುವ ಕಲೆಯಲ್ಲ. ಇದರಲ್ಲಿ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಅಡಕವಾಗಿವೆ. ನಮ್ಮ ಆಧ್ಯಾತ್ಮಿಕತೆಯ ಯಜ್ಞವನ್ನು ಹೆಚ್ಚಿಸುವ ಕಲೆಯೂ ಇದಾಗಿದೆ. ಈ ಕಲೆ ಈಗ ಜನಪ್ರಿಯವಾಗಿದ್ದರೂ ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಅಗತ್ಯ ತುಂಬಾ ಇದೆ. ಈ ಬಗ್ಗೆ ಯಕ್ಷಗಾನ ಸಂಘಟಕರು, ಕಲಾವಿದರು, ವಿದ್ವಾಂಸರು ಆಲೋಚಿಸಬೇಕಾಗಿದೆ. ಯಕ್ಷಗಾನ ಕಲೆ-ಕಲಾವಿದರಿಗೆ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ  ತಿಳಿಸಿದರು.

Advertisement

ಅ. 2ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ  ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ನಡೆದ ಅಜೆಕಾರು ಕಲಾಭಿಮಾನಿ ಬಳಗದ 20ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರ ಸಂಘ ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಊರಿನಿಂದ ಯಾವ ತಂಡ ಬಂದರೂ ಅವರಿಗೆ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದೇವೆ. ನಮ್ಮ ಸಾಂಸ್ಕೃತಿಕ ಸಮಿತಿಯು ಯಕ್ಷಗಾನ ಕಲೆಗೆ ವಿಶೇಷ ಮಹತ್ವ ನೀಡುತ್ತಿದೆ. ಅಜೆಕಾರು ಕಲಾಭಿಮಾನಿ ಬಳಗ ಇಂದು ನಡೆಸುತ್ತಿರುವ ಯಕ್ಷಗಾನ ಸೇವೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಕಳೆದೆರಡು ವರ್ಷಗಳಿಂದ ಮುಂಬಯಿಯಲ್ಲಿ ಸ್ತಬ್ಧಗೊಂಡಿರುವ ಸಾಂಸ್ಕೃತಿಕ ಲೋಕಕ್ಕೆ ಅಜೆಕಾರು ಕಲಾಭಿಮಾನಿ ಬಳಗ ಹೊಸ ಹುರುಪನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.

ಗೌರವ ಅತಿಥಿಯಾಗಿದ್ದ ಮಾತೃಭೂಮಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ  ಮಾತನಾಡಿ, ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಪ್ರದರ್ಶಿಸುವುದು ಮಾತ್ರವಲ್ಲದೆ, ಅದನ್ನು ಉಳಿಸಿ-ಬೆಳೆಸುವಂತಹ ಮಹತ್ಕಾರ್ಯ ಮಾಡುತ್ತಿದೆ. ಅದೆಷ್ಟು ಜನರಿಗೆ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಕಲಿಸಿದ ಬಳಗದ ಸಂಚಾಲಕ, ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗುರು ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಮಾತ್ರವಲ್ಲದೆ ಕಲಾವಿದರನ್ನು, ಕಲಾ ಪ್ರೋತ್ಸಾಹಕರನ್ನು ಗುರುತಿಸಿ ಗೌರವಿಸುವಂತಹ ಮಹತ್ಕಾರ್ಯವನ್ನು ಅವರು ಮಾಡುತ್ತಿರುವುದು ಅಭಿನಂದನೀಯ. ಅವರ ಇಂಥ ಕಾರ್ಯಕ್ಕೆ ನಾವೆಲ್ಲರೂ ಸದಾ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಬಂಟರವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್‌ ಎಂ. ಭಂಡಾರಿ ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಊರಿನಿಂದ ಕಲಾವಿದರನ್ನು ಆಹ್ವಾನಿಸಿ ಸರಣಿ ತಾಳಮದ್ದಳೆ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಮ್ಮಲ್ಲಿ ಚರ್ಚಿಸಿದಾಗ ನಾವು ಅವರಿಗೆ ಪೂರ್ಣ ಪ್ರೋತ್ಸಾಹ ನೀಡುವ ಭರವಸೆ ನೀಡಿದ್ದೇವೆ. ಕಳೆದೆರಡು ವರ್ಷಗಳಿಂದ ಮುಂಬಯಿಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳದೆ ಇರುವುದರಿಂದ ಬಂಟರ ಸಂಘ ಅವರ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದೆ. ಇಂತಹ ಕಠಿನ ಪರಿಸ್ಥಿತಿಯಲ್ಲೂ ಊರಿನಿಂದ ಕಲಾವಿದರನ್ನು ಕರೆಸಿ ಮುಂಬಯಿಯ ವಿವಿಧೆಡೆಗಳಲ್ಲಿ ಯಕ್ಷಗಾನ ತಾಳಮದ್ದಳೆ ಆಯೋಜಿಸುವುದು ಎಂದರೆ ಸುಲಭದ ಕಾರ್ಯವಲ್ಲ. ಇಂಥ ಕಾರ್ಯವನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ  ಯಶಸ್ವಿಯಾಗಿ ಪೂರೈಸಿದ್ದಾರೆ. ಯೋಗ್ಯರನ್ನು ಆರಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ಬಹಳ ಅಭಿಮಾನದ ವಿಷಯವಾಗಿದೆ. ಅವರ ಕಾರ್ಯಕ್ಕೆ ಎಲ್ಲರ ಸಹಕಾರ ಸದಾ ಇರುತ್ತದೆ ಎಂದರು.

ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್‌ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧಕ್ಷ ಹರೀಶ್‌ ಪಾಂಡು ಶೆಟ್ಟಿ, ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ, ಬಂಟರ ಸಂಘ ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ  ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ಅಜೆಕಾರು ಬಳಗದ ಕಾರ್ಯವೈಖರಿಯನ್ನು ಅಭಿನಂದಿಸಿ ಶುಭ ಹಾರೈಸಿದರು.

Advertisement

2021ನೇ ಸಾಲಿನ ಬಳಗದ 50 ಸಾವಿರ ರೂ. ನಗದನ್ನು ಒಳಗೊಂಡ ವಾರ್ಷಿಕ ಯಕ್ಷರಕ್ಷಾ ಪ್ರಶಸ್ತಿಯನ್ನು ಊರಿನ ಪ್ರಸಿದ್ಧ ಯಕ್ಷಗಾನ ಕಲಾವಿದ ದಿನೇಶ್‌ ಶೆಟ್ಟಿ ಕಾವಳಕಟ್ಟೆ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. 2021ನೇ ಸಾಲಿನ ಯಕ್ಷರಕ್ಷಾ ಕಲಾ ಗೌರವ ಪ್ರಶಸ್ತಿಯನ್ನು ಜವಾಬ್‌ ಮಾಜಿ ಅಧ್ಯಕ್ಷ ರಘು ಎಲ್‌. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. 2021ನೇ ಸಾಲಿನ ಮಾತೃಶ್ರೀ ಯಕ್ಷರಕ್ಷಾ

ಪ್ರಶಸ್ತಿಯನ್ನು ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಅವರಿಗೆ ನೀಡಲಾಯಿತು. ಮುಂಬಯಿಯ ಪತ್ರಕರ್ತ ಸುಭಾಷ್‌ ಶಿರಿಯ, ಯಕ್ಷಗಾನ ಕಲಾವಿದರಾದ ಪ್ರಭಾಕರ್‌ ಕುಂದರ್‌, ಗೋವಿಂದ ಸಪಲಿಗ, ನಿತಿನ್‌ ಜಾಧವ್‌, ಸುನಿಲ್‌ ದೇವಾಡಿಗ ಅವರಿಗೆ ಬಳಗದ ವಾರ್ಷಿಕ ಯಕ್ಷರಕ್ಷಾ ಸಾಧಕ ಪುರಸ್ಕಾರವನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.

ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು. ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಳಗದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ  ಅವರ ಶಿಷ್ಯವೃಂದದವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

ಯಕ್ಷಗಾನವನ್ನು ಬೆಳೆಸುವಲ್ಲಿ ಮುಂಬಯಿ ಮಹಾನಗರದ ಪಾತ್ರ ಬಹಳಷ್ಟಿದೆ. ಮಹಾನಗರವು ಶ್ರೀಮಂತ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ನಮ್ಮಂತಹ ಕಲಾವಿದರಿಗೆ ಮುಂಬಯಿ ಮಹಾನಗರ ಬಹಳಷ್ಟು ವೇದಿಕೆ ನೀಡಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಂತಹ ಕಲಾಪೋಷಕರು, ಸಂಘಟಕರು ನಮಗೆ ಮುಂಬಯಿಯಂತಹ ನಗರದಲ್ಲಿ ವೇದಿಕೆ ನೀಡಿ ಯಕ್ಷಗಾನ ಕಲೆಯ ಮೇಲಿನ ತಮ್ಮ ಪ್ರೀತಿ ತೋರಿಸಿ ಯಕ್ಷಗಾನವನ್ನು ಬೆಳೆಸಿದ್ದಾರೆ. ಇಂದು ನನಗೆ ಯಕ್ಷರಕ್ಷಾ ಕಲಾ ಪ್ರಶಸ್ತಿ ನೀಡಿ ಗೌರವಿಸಿರುವುದು ಕಲಾವಿದರಿಗೆ ನೀಡಿದ ಗೌರವ ಎಂದು ಭಾವಿಸಿ ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ.ದಿನೇಶ್‌ ಶೆಟ್ಟಿ ಕಾವಳಕಟ್ಟೆ, ಯಕ್ಷರಕ್ಷಾ ಪ್ರಶಸ್ತಿ ಪುರಸ್ಕೃತರು

ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ. ಅವರಿಗೆ ಇದರಿಂದ ಯಾವುದೇ ವೈಯಕ್ತಿಕ ಲಾಭವಿಲ್ಲ. ಈ ಕಲೆಯ ಮೇಲಿನ ಪ್ರೀತಿಯೇ ಅವರನ್ನು ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಹಾಗೂ ಕಲಾವಿದರನ್ನು ಪ್ರೋತ್ಸಾಹಿ ಸಲು ಪ್ರೇರಣೆ ನೀಡಿದೆ. ಅವರ ಯಕ್ಷಗಾನದ ಮೇಲಿನ ಪ್ರೀತಿಯನ್ನು ನಾವೆಲ್ಲರೂ ಗೌರವಿಸಬೇಕಾಗಿದೆ. ಮುಂಬಯಿ ಮಹಾನಗರದಲ್ಲಿ ಯಕ್ಷಗಾನವನ್ನು ಜನಪ್ರಿಯಗೊಳಿಸುವಲ್ಲಿ ಇವರ ಪಾತ್ರ ಬಹಳಷ್ಟಿದೆ.ರಘು ಎಲ್‌. ಶೆಟ್ಟಿಯಕ್ಷರಕ್ಷಾ ಕಲಾ ಗೌರವ ಪ್ರಶಸ್ತಿ ಪುರಸ್ಕೃತರು

ನಾನೋರ್ವ ಕಲಾವಿದನಾಗಿ ಗುರುತಿಸಿಕೊಳ್ಳಲು ನನ್ನ ಮಾತೃಶ್ರೀ ಅವರ ಪ್ರೇರಣೆ ಮಹತ್ತವಾದುದು. ಮುಂಬಯಿ ಬಂಟರ ಸಂಘದಲ್ಲಿ ಐಕಳ ಹರೀಶ್‌ ಶೆಟ್ಟಿ ಹಾಗೂ ಹಲವಾರು ಮಹನೀಯರು ಪ್ರೋತ್ಸಾಹ ನೀಡಿದರು. ಈ ವೇದಿಕೆಯಲ್ಲಿ ಸಮ್ಮಾನ ಸ್ವೀಕರಿಸಲು ಬಹಳ ಸಂತೋಷವಾಗುತ್ತದೆ. ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನವನ್ನು ಬೆಳೆಸುವುದರೊಂದಿಗೆ ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಅಭಿನಂದನೀಯ. ಅವರು ಹೊಸ ಹೊಸ ಕಲಾವಿದರನ್ನು ಸೃಷ್ಟಿ ಮಾಡಿ ವೇದಿಕೆ ನೀಡುತ್ತಾರೆ. ಅವರ ಈ ಕಾರ್ಯವನ್ನು ನಾವೆಲ್ಲರೂ ಅಭಿನಂದಿಸಬೇಕಾಗಿದೆ.ಅಶೋಕ್‌ ಪಕ್ಕಳ ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿ ಪುರಸ್ಕೃತರು

Advertisement

Udayavani is now on Telegram. Click here to join our channel and stay updated with the latest news.

Next