Advertisement

Moodubidire: ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ

11:44 PM Feb 07, 2024 | Team Udayavani |

ಮೂಡುಬಿದಿರೆ: ಶಾಲೆಯಲ್ಲಿ ಯಕ್ಷ ಶಿಕ್ಷಣವನ್ನೂ ನೀಡುವ ಮೂಲಕ ಪುರಾಣ ಜ್ಞಾನ, ಭಾಷಾ ಶುದ್ಧಿ, ಸಂಸ್ಕೃತಿಯ ಅರಿವು, ಕಲಾಭಿರುಚಿ ಬೆಳೆಸಲು ಸಾಧ್ಯ. ಯಕ್ಷಗಾನವು ಒಳ್ಳೆಯ ಜೀವನಕ್ಕೆ ಬೇಕಾದ ಅಮೂಲ್ಯ ವಿಷಯಗಳನ್ನು ತಿಳಿಸಿಕೊಡುವ ಪರಿಣಾಮಕಾರಿ ಮಾಧ್ಯಮ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್‌ ಹೇಳಿದರು.

Advertisement

ವಿದ್ಯಾಗಿರಿಯ ಮುಂಡ್ರೆದಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ “ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ- 2023-24’ದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರು ಕಲಾವಿದ ಮಾತ್ರವಲ್ಲ; ಪಟ್ಲ ಫೌಂಡೇಶನ್‌ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು ಕೊಡುತ್ತಿರುವ ದೂರಗಾಮಿ ಚಿಂತಕ ಎಂದು ಶ್ಲಾಘಿಸಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, 2015ರಲ್ಲಿ ಪ್ರಾರಂಭವಾದ ಯಕ್ಷ ಧ್ರುವ ಫೌಂಡೇಶನ್‌ ರಾಜ್ಯದಲ್ಲಿ 39 ಘಟಕಗಳನ್ನು ತೆರೆದು ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಯಕ್ಷಗಾನ ಕಲಿತ ವಿದ್ಯಾರ್ಥಿಗಳಲ್ಲಿ ಸ್ವತ್ಛ ಕನ್ನಡ ಉಳಿದುಕೊಳ್ಳುವಂತಾಗಿದೆ ಎಂದರು.

ಸಮ್ಮಾನ
“ಯಕ್ಷಗಾನದ ಸವ್ಯಸಾಚಿ’ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರ ಪತ್ನಿ ಶೋಭಾ ಪುರುಷೋತ್ತಮ ಪೂಂಜ ಅವರನ್ನು ಗೌರವಿಸಲಾಯಿತು.

Advertisement

ಉದ್ಯಮಿ ಕೆ. ಶ್ರೀಪತಿ ಭಟ್‌, ಫೌಂಡೇಷನ್‌ ಟ್ರಸ್ಟ್‌ ಪದಾಧಿಕಾರಿಗಳಾದ ಕದ್ರಿ ಪ್ರದೀಪ್‌ ಆಳ್ವ , ಸಿಎ ದಿವಾಕರ್‌ ರಾವ್‌, ಡಾ| ಮನು ರಾವ್‌, ಸಿಎ ಸುದೇಶ್‌ ಕುಮಾರ್‌ ರೈ, ಭುಜಬಲಿ ಧರ್ಮಸ್ಥಳ, ಸರಪಾಡಿ ಅಶೋಕ ಶೆಟ್ಟಿ, ದೀವಿತ್‌ ಕೋಟ್ಯಾನ್‌, ಪಣಂಬೂರು ವಾಸುದೇವ ಐತಾಳ್‌, ಪ್ರೊ| ಎಂ.ಎಲ್‌. ಸಾಮಗ ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸಂಸ್ಥಾಪಕ ಪಟ್ಲ ಸತೀಶ್‌ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ನಿರೂಪಿಸಿದರು. ಸಂಘಟನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ವಂದಿಸಿದರು.

2,074ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

8 ವೇದಿಕೆಗಳಲ್ಲಿ ಯಕ್ಷರೂಪಕ ಸ್ಪರ್ಧೆ, ಯಕ್ಷ ಲೇಖನ, ಯಕ್ಷಜ್ಞಾನ ಪಂಥ, ಮುಖವರ್ಣಿಕೆ, ಶ್ಲೋಕ ಕಂಠಪಾಠ, ಯಕ್ಷ ರಸಪ್ರಶ್ನೆ, ಯಕ್ಷ ಸ್ವಗತ ಸ್ಪರ್ಧೆಗಳು ನಡೆದವು. ಅವಿಭಜಿತ ದ.ಕ., ಕಾಸರಗೋಡು, ತುಮಕೂರು ಶಿವಮೊಗ್ಗ ಜಿಲ್ಲೆಗಳಿಂದ 2,074ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಕ್ಷಶಿಕ್ಷಣದ 1,650ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಯಕ್ಷರೂಪಕದ ಮೂಲಕ ರಂಗ ಪ್ರವೇಶ ಮಾಡಿದ್ದು ವಿಶಿಷ್ಟ ದಾಖಲೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next