Advertisement

ಮತ್ತೆ ತಿರುಗಾಟಕ್ಕೆ ಸಿದ್ಧಗೊಂಡಿವೆ ಯಕ್ಷ ಮೇಳಗಳು

12:15 AM Nov 10, 2019 | Team Udayavani |

ಕೋಟ: ತೆಂಕು-ಬಡಗಿನ ಯಕ್ಷ ಮೇಳಗಳು ಹೊಸ ಪ್ರಸಂಗ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಆರು ತಿಂಗಳ ತಿರುಗಾಟಕ್ಕೆ ಅಣಿಯಾಗಿವೆ. ತೆಂಕುತಿಟ್ಟಿನಲ್ಲಿ ಯಾವುದೇ ಡೇರೆ ಮೇಳಗಳಿಲ್ಲ. ಬಯಲಾಟ ಮೇಳಗಳಲ್ಲಿ ಧರ್ಮಸ್ಥಳ , ಕಟೀಲಿನ ಆರು , ಹನುಮಗಿರಿ, ಸುಂಕದಕಟ್ಟೆ, ಸಸಿಹಿತ್ಲು, ಬೆಂಕಿನಾಥೇಶ್ವರ, ಮಂಗಳದೇವಿ, ದೇಂತಡ್ಕ, ತಳಕಲ, ಬಪ್ಪನಾಡು ಪ್ರಸಿದ್ಧ ಮೇಳಗಳಾಗಿವೆ. ಒಟ್ಟಾರೆ ತೆಂಕು ಬಡಗಿನ 37ಕ್ಕೂ ಹೆಚ್ಚು ಮೇಳಗಳು ಇದೀಗ ತಿರುಗಾಟಕ್ಕೆ ಸಿದ್ಧಗೊಂಡಿದೆ.

Advertisement

ಡೇರೆ ಮೇಳದ ಬಗ್ಗೆ ಕುತೂಹಲ
ಸಾಮಾನ್ಯವಾಗಿ ಯಕ್ಷ ಪ್ರೇಮಿಗಳಿಗೆ ಡೇರೆ ಮೇಳಗಳಲ್ಲಿ ಕಲಾವಿದರು, ಪ್ರಸಂಗಗಳಲ್ಲಿ ಯಾವ ಬದಲಾವಣೆಯಾಗಿದೆ ಎನ್ನುವ ಕುತುಹೂಲವಿರುತ್ತದೆ. ಅದೇ ರೀತಿ ಈ ಬಾರಿ ಸಾಲಿಗ್ರಾಮ ಮೇಳದಲ್ಲಿ ದೇವದಾಸ ಈಶ್ವರ ಮಂಗಳ ರಚಿಸಿದ ಚಂದ್ರಮುಖೀ-ಸೂರ್ಯಸಖೀ, ಅಲ್ತಾರು ನಂದೀಶ್‌ ಶೆಟ್ಟಿಯವರ ವಚನವಲ್ಲರಿ ಸಾಮಾಜಿಕ ಪ್ರಸಂಗ ಮತ್ತು ಬೇಳೂರು ವಿಷ್ಣುಮೂರ್ತಿ ನಾಯಕ್‌ ಅವರ ಹೊಂಬುಜ ಪದ್ಮಾವತಿ ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಸಾಲಿಗ್ರಾಮದಲ್ಲಿ ಹಲವು ವರ್ಷದಿಂದ ಪ್ರಧಾನ ಭಾಗವತರಾಗಿದ್ದ ರಾಘವೇಂದ್ರ ಮಯ್ಯರವರು ಈ ವರ್ಷದ ತಿರುಗಾಟಕ್ಕೆ ವಿದಾಯ ಹೇಳಿದ್ದು ಅವರ ಸ್ಥಾನವನ್ನು ರಾಮಕೃಷ್ಣ ಹಿಲ್ಲೂರು ಅಲಂಕರಿಸಲಿದ್ದಾರೆ. 2ನೇ ವೇಷಧಾರಿಯಾಗಿ ಬಳ್ಕೂರು ಕೃಷ್ಣಯಾಜಿ ಮತ್ತು ಪುರುಷ ವೇಷಧಾರಿಯಾಗಿ ನಿಲ್ಕೋಡು ಶಂಕರ ಹೆಗಡೆ, ವಿನಯ ಬೇರೊಳ್ಳಿ ಸೇರ್ಪಡೆಗೊಂಡಿದ್ದಾರೆ. ಪೆರ್ಡೂರು ಮೇಳದಲ್ಲಿ ಪ್ರೊ| ಪವನ್‌ಕಿರಣ್‌ಕೆರೆ ವಿರಚಿತ ಮಾನಸಗಂಗಾ, ವಾಸುದೇವ ಮಯ್ಯ ರಚಿತ ಸೂರ್ಯ ಸಂಕ್ರಾತಿ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಎರಡನೇ ಭಾಗವತರಾಗಿದ್ದ ಬ್ರಹೂರು ಶಂಕರ ಭಟ್‌ ವಿದಾಯ ಹೇಳಿದ್ದು ಅವರ ಸ್ಥಾನವನ್ನು ಪ್ರಸನ್ನ ಭಟ್‌ ಅಲಂಕರಿಸಿದ್ದಾರೆ. ಖ್ಯಾತ ಕಲಾವಿದರಾದ ವಿದ್ಯಾಧರ ಜಳವಳ್ಳಿ, ಕಾರ್ತಿಕ್‌ ಚಿಟ್ಟಾಣಿ ಎಂಟ್ರಿ ಕೊಟ್ಟಿದ್ದಾರೆ.

ಕಾಲಮಿತಿಗೆ ಬೇಡಿಕೆ
ದೇಗುಲದ ವತಿಯಿಂದ ನಡೆಯುವ ಮಂದಾರ್ತಿ ಮೇಳಕ್ಕೆ 2042-43ರ ವರೆಗೆ 15,400 ಹರಕೆ ಆಟಗಳು ಈಗಾಗಲೇ ಬುಕ್ಕಿಂಗ್‌ ಆಗಿವೆ ಹಾಗೂ ಮಾರಣಕಟ್ಟೆಯ ಮೂರು ಮೇಳಕ್ಕೂ ಸಾಕಷ್ಟು ಹರಕೆ ಆಟವಿದೆ. ಆದರೆ ಇತರ ಬಯಲಾಟ ಮೇಳಗಳ ಕ್ಯಾಂಪ್‌ಗ್ಳಿಗೆ ಸಮಸ್ಯೆ ಇರುವುದಂತು ಸತ್ಯ. ಜತೆಗೆ ಪ್ರೇಕ್ಷಕರ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ಬೆಳಗಿನ ತನಕ ನಿದ್ದೆ ಬಿಟ್ಟು ಆಟ ನೋಡುವವರ ಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ಹಲವು ಮೇಳಗಳು ಕಾಲಮಿತಿಯ ಪ್ರದರ್ಶನಕ್ಕೆ ಮೊರೆಹೋಗುತ್ತಿವೆ. ಮೇಳಗಳ ತಿರುಗಾಟ ಆರಂಭ

37ಕ್ಕೂ ಹೆಚ್ಚು ಮೇಳಗಳು
ಬಡಗುತಿಟ್ಟಿನಲ್ಲಿ ಸಾಲಿಗ್ರಾಮ, ಪೆರ್ಡೂರು ಡೇರೆ ಮೇಳಗಳಾಗಿ ತಿರುಗಾಟ ನಡೆಸುತ್ತಿವೆ. ದೇಗುಲದ ಕೃಪಾಪೋಷಿತವಾಗಿ ತಿರುಗಾಟ ನಡೆಸುವ ಬಡಗಿನ ಬಯಲಾಟ ಮೇಳಗಳಲ್ಲಿ ಮಾರಣಕಟ್ಟೆಯಿಂದ 3 , ಮಂದಾರ್ತಿಯ 5 , ಕಮಲಶಿಲೆಯ 2, ಅಮೃತೇಶ್ವರಿ, ಗೋಳಿಗರಡಿ, ಸಿಗಂದೂರು ಮೇಳ ಹಾಗೂ ಸೌಕೂರು, ಹಾಲಾಡಿ, ಮೇಗರವಳ್ಳಿ, ಮಡಾಮಕ್ಕಿ, ನೀಲಾವರ, ಆಜ್ರಿ ಶನೀಶ್ವರ ಮೇಳಗಳು ಪ್ರಮುಖವಾಗಿದೆ. ಬಡಗಿನ ಡೇರೆ ಮೇಳ ಜಲವಳ್ಳಿ ಮೇಳ ಈ ವರ್ಷ ತಿರುಗಾಟ ಸ್ಥಗಿತಗೊಳಿಸಿದೆ.

ರಾಜೇಶ್‌ ಗಾಣಿಗ ಅಚ್ಲಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.