Advertisement

ಸಾಧಕರಿಗೆ, ಅಶಕ್ತ ಕಲಾವಿದರಿಗೆ ಸಮ್ಮಾನ, ಸಹಾಯಧನ

04:30 AM May 28, 2018 | Team Udayavani |

ಮಂಗಳೂರು: ಗಂಡುಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವಂತಾಗಲು ಯಕ್ಷಗಾನ ಶಾಲೆಯನ್ನು ತೆರೆದು ಅಲ್ಲಿ ಶಾಸ್ತ್ರಬದ್ಧವಾಗಿ ಯಕ್ಷಗಾನ ತರಗತಿಯನ್ನು ನಡೆಸುವ ಯೋಜನೆಗೆ ಸರ್ವರೂ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ವತಿಯಿಂದ ಶನಿವಾರ ನಗರದ ಹೊರವಲಯದ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ‘ಯಕ್ಷಧ್ರುವ ಪಟ್ಲ ಸಂಭ್ರಮ – 2018’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಪಟ್ಲ ಸತೀಶ್‌ ಶೆಟ್ಟರ ತಂದೆ ಮಹಾಬಲ ಶೆಟ್ಟಿ ಅವರು ಸ್ವತಃ ಕಲಾವಿದರಾಗಿದ್ದ ಕಾರಣ ಕಲಾವಿದರ ಕಷ್ಟದ ಬದುಕಿನ ಬಗ್ಗೆ ಅವರಿಗೆ ಅರಿವಿತ್ತು. ಹೀಗಾಗಿ, ಕಷ್ಟಗಳಿಗೆ ಕಿವಿಯಾಗಿ ಸ್ಪಂದಿಸುವ ಹೃದಯವಂತಿಕೆ ಮಗನಿಗೂ ಬಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದವರು ಆಶಿಸಿದರು. 

Advertisement


ಕಲೆ ಶ್ರೀಮಂತ: ದರ್ಶನ್‌

ನಟ ದರ್ಶನ್‌ ಮಾತನಾಡಿ, ಕಲಾವಿದರು ಬಡವರಾದರೂ ಅವರಲ್ಲಿರುವ ಕಲೆಗೆ ಬಡತನವಿಲ್ಲ. ಬಡ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಸಹಾಯ ಮಾಡುವುದು ಕಲಾಮಾತೆಗೆ ನೀಡುವ ಗೌರವಕ್ಕೆ ಸಮಾನ ಎಂದರು.

ಪಟ್ಲ ಪ್ರಶಸ್ತಿ ಪ್ರದಾನ
ಛಂದೋಬ್ರಹ್ಮ ಡಾ| ಶಿಮಂತೂರು ನಾರಾಯಣ ಶೆಟ್ಟಿ ಅವರನ್ನು 1 ಲಕ್ಷ ರೂ. ನಗದು ಸಹಿತ ‘ಪಟ್ಲ ಪ್ರಶಸ್ತಿ’ಯಿಂದ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಡಾ| ಶೆಟ್ಟರು, ಟ್ರಸ್ಟ್‌ನ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಹೊಗಳಿದರು. ಇಂತಹ ಕೆಲಸಗಳು ಮುಂದುವರಿಯುವ ದೃಷ್ಟಿಯಿಂದ ತನಗೆ ನೀಡಿದ ಮೊತ್ತಕ್ಕೆ ಇನ್ನಷ್ಟು ಸೇರಿಸಿ, ಅದನ್ನು ಮತ್ತೆ ಟ್ರಸ್ಟ್‌ಗೆ ನೀಡುವೆ ಎಂದರು.

ಬಳಿಕ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕುರಿಯ ಗಣಪತಿ ಶಾಸ್ತ್ರಿ, ಎಂ.ಕೆ. ರಮೇಶ್‌ ಆಚಾರ್ಯ, ಕುತ್ತೂಟ್ಟು ವಾಸು ಶೆಟ್ಟಿ, ಶೀಲಾ ಕೆ. ಶೆಟ್ಟಿ, ಆರ್ಗೋಡು ಮೋಹನ್‌ದಾಸ್‌ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್‌, ಮಹಾಲಕ್ಷ್ಮೀ ಡಿ. ರಾವ್‌ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕುರಿಯ ಗಣಪತಿ ಶಾಸ್ತ್ರಿಗಳು ಕೂಡ ಪಟ್ಲ ಸತೀಶ್‌ ಶೆಟ್ಟರ ಕಾರ್ಯವಿಧಾನಗಳಿಗೆ ಮೆಚ್ಚುಗೆ ಸೂಚಿಸಿ, ತನಗೆ ನೀಡಿದ ಗೌರವ ಧನವನ್ನು ಟ್ರಸ್ಟ್‌ಗೇ ಹಿಂತಿರುಗಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಈ ಕೆಲಸ ಸದಾ ಮುಂದುವರಿಯಲಿ ಎಂದು ಆಶಿಸಿದರು.

ಪ್ರತಿಭಾ ಪುರಸ್ಕಾರ, ಗೌರವ ಧನ
ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೇ.90 ಮೇಲ್ಪಟ್ಟು ಅಂಕ ಗಳಿಸಿದ ವೃತ್ತಿಪರ ಕಲಾವಿದರ ಮಕ್ಕಳಿಗೆ ಬಂಗಾರ ಪದಕ, 10 ಕಲಾವಿದರಿಗೆ 50 ಸಾವಿರ ರೂ. ಗೌರವ ಧನ, ಈರ್ವರು ಕಲಾವಿದರಿಗೆ ಮರಣೋತ್ತರ ಪ್ರಶಸ್ತಿ ಜತೆಗೆ ಅವರ ಕುಟುಂಬಿಕ ರಿಗೆ 50 ಸಾವಿರ ರೂ. ಸಹಾಯ ಧನ, 8 ಮಂದಿ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ 25 ಸಾವಿರ ರೂ., ಡಾ| ಶಿಮಂತೂರು ನಾರಾಯಣ ಶಟ್ಟಿ ಹಾಗೂ ಗಣೇಶ್‌ ಕೊಲೆಕಾಡಿ ವಿರಚಿತ ಯಕ್ಷಗಾನ ಪ್ರಸಂಗಗಳ ಸಂಪುಟ ಇದೇ ವೇಳೆ ಬಿಡುಗಡೆಗೊಂಡಿತು.

Advertisement

ಶ್ರೀಕ್ಷೇತ್ರ ಕಟೀಲಿನ ಆನುವಂಶೀಯ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಆಲ್‌ಕಾರ್ಗೋ ಗ್ರೂಪ್‌ ಅಧ್ಯಕ್ಷ ಶಶಿಕಿರಣ್‌ ಶೆಟ್ಟಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಮಾಜಿ ಸೊಲಿಸಿಟರ್‌ ಕೆ.ಎನ್‌. ಭಟ್‌, ಬೆಂಗಳೂರು ಎಂ.ಆರ್‌.ಜಿ. ಗ್ರೂಪ್‌ನ ಪ್ರಕಾಶ್‌ ಶೆಟ್ಟಿ ಬಂಜಾರ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಕುವೆಂಪು ವಿ.ವಿ.ಯ ಪ್ರೊ| ಅನುರಾಧಾ ಪಟೇಲ್‌, ಉದ್ಯಮಿಗಳಾದ ಶಶಿಧರ್‌ ಶೆಟ್ಟಿ, ನಟ ಋಷಭ್‌ ಶೆಟ್ಟಿ, ರವಿ ಶೆಟ್ಟಿ, ಕೆ.ಎಂ. ಶೆಟ್ಟಿ, ದಿವಾಕರ ಶೆಟ್ಟಿ ಮಲ್ತಾರ್‌, ಹರೀಶ್‌ ಶೆಟ್ಟಿ, ಶಶಿಧರ್‌ ಶೆಟ್ಟಿ ಮಲ್ತಾರ್‌, ಗುಣಶೀಲ ಶೆಟ್ಟಿ, ರೋಹಿತ್‌ ಶೆಟ್ಟಿ ನಗ್ರಿಗುತ್ತು, ಸುಧೀರ್‌ ಶೆಟ್ಟಿ, ವಕ್ವಾಡಿ ಪ್ರವೀಣ್‌ ಶೆಟ್ಟಿ, ಶ್ಯಾಮ್‌ ಹೆಬ್ಟಾರ್‌, ಶಂಕರ್‌ ಶೆಟ್ಟಿ, ಕೆ.ಡಿ. ಶೆಟ್ಟಿ, ದಿಯಾ ಸಿಸ್ಟಮ್‌ನ ಎಂಡಿ ಡಾ| ರವಿಚಂದ್ರನ್‌, ಬಡಗಬೆಳ್ಳೂರು ಕಾವೀಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ರಘು ಎಲ್‌. ಶೆಟ್ಟಿ,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್‌ ಶೆಟ್ಟಿ ನಗ್ರಿಗುತ್ತು, ಪೂನಾ ಬಂಟ್ಸ್‌ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಪಟ್ಲ ಫೌಂಡೇಶನ್‌ ದುಬೈ ಘಟಕ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮುಂಬೈ ಘಟಕ ಅಧ್ಯಕ್ಷ ಸುರೇಶ್‌ ಭಂಡಾರಿ ಕಡಂದಲೆ, ಗುಜರಾತ್‌ ಘಟಕ ಅಧ್ಯಕ್ಷ ಅಜಿತ್‌ ಶೆಟ್ಟಿ, ಮಸ್ಕತ್‌ ಘಟಕದ ಅಧ್ಯಕ್ಷ ಎಸ್‌.ಕೆ. ಪೂಜಾರಿ, ದಿಲ್ಲಿ ಘಟಕ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಬೆಂಗಳೂರು ಘಟಕ ಅಧ್ಯಕ್ಷ ದಿನೇಶ್‌ ವೈದ್ಯ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಳ ಹರೀಶ್‌ ಶೆಟ್ಟಿ, ಸಹ್ಯಾದ್ರಿ ವಿದ್ಯಾಸಂಸ್ಥೆ ಅಧ್ಯಕ್ಷ ಮಂಜುನಾಥ ಭಂಡಾರಿ, ಎಂ. ರವಿ ಶೆಟ್ಟಿ, ಪೂನ ಮಹಾಗಣಪತಿ ಯಕ್ಷಗಾನ ಸಂಘದ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಅದಾನಿ ಸಂಸ್ಥೆಯ ಕಿಶೋರ್‌ ಆಳ್ವ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next